ಆಂಧ್ರ, ತೆಲಂಗಾಣ ಚುನಾವಣೆಗೆ ಹೊರಟಿತ್ತಾ ಅಕ್ರಮ ಮದ್ಯ?

KannadaprabhaNewsNetwork | Updated : May 14 2024, 11:19 AM IST

ಸಾರಾಂಶ

ಪೊಲೀಸರ ತನಿಖೆ ವೇಳೆ ಹೊರಬಂದ ಮಾಹಿತಿ. ಆಂಧ್ರ, ಗೋವಾ ಪೊಲೀಸರಿಂದ ಮಾಹಿತಿ ಬಯಸಿದ ಬೆಳಗಾವಿಯ ಪೊಲೀಸರು

 ಬೆಳಗಾವಿ :  ಗೋವಾದಿಂದ ಲಾರಿಯಲ್ಲಿ ಸಾಗಿಸುತ್ತಿದ್ದ ₹28.08 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ಬೆಳಗಾವಿ ಪೊಲೀಸರು ಪತ್ತೆ ಮಾಡುವಲ್ಲಿ ಭಾನುವಾರ ಯಶಸ್ವಿಯಾಗಿದ್ದರು. ಆಂಧ್ರ ಮತ್ತು ತೆಲಂಗಾಣಕ್ಕೆ ಈ ಮದ್ಯವನ್ನು ತೆಗೆದುಕೊಂಡು ಹೋಗುತ್ತಿದ್ದರಿಂದ ಸಹಜವಾಗಿ ಅಲ್ಲಿನ ಮತದಾನದ ವೇಳೆ ಹಂಚಲು ಹೋಗುತ್ತಿದ್ದರು ಎಂಬ ಶಂಕೆಯ ಮೇಲೆ ತನಿಖೆ ಕೈಗೊಂಡ ಪೊಲೀಸರು, ಅದು ಈಗ ನಿಜವಾಗಿದೆ ಎಂದು ಹೇಳಲಾಗುತ್ತಿದೆ.

ಗೋವಾದಿಂದ ಹೋಗುತ್ತಿದ್ದ ಅಕ್ರಮ ಮದ್ಯ ಆಂಧ್ರಪ್ರದೇಶ ಮತ್ತು ತೆಲಂಗಣದಲ್ಲಿ ಮೇ 13 ರಂದು ನಡೆದ ಚುನಾವಣೆಯಲ್ಲಿ ಹಂಚಲು ಹೋಗುತ್ತಿತ್ತು ಎಂಬ ಮಾಹಿತಿಯನ್ನು ಆರೋಪಿಗಳು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮೂಲದ ಸಂತೋಷ ಹಲಸೆ ಹಾಗೂ ಸದಾಶಿವ ಘೆರಡೆ ಎಂಬುವರನ್ನು ಈಗಾಗಲೇ ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದಾರೆ.

ಗೋವಾದಿಂದ ಅಕ್ರಮವಾಗಿ ಬೆಳಗಾವಿ ಮಾರ್ಗವಾಗಿ ಭಾರೀ ಪ್ರಮಾಣದಲ್ಲಿ ಮದ್ಯ ಸಾಗಿಸಲಾಗುತ್ತಿತ್ತು. ಅನುಮಾನಗೊಂಡ ಪೊಲೀಸ್‌ ಸಿಬ್ಬಂದಿ ಲಾರಿ ತಡೆದು ವಿಚಾರಿಸಿದ್ದಾರೆ. ಈ ವೇಳೆ ₹21 ಲಕ್ಷ ಮೌಲ್ಯದ ಹಾರ್ಡ್‌ವೇರ್‌ ಅನ್ನು ಹುಬ್ಬಳಿಗೆ ಸಾಗಿಸಲಾಗುತ್ತಿದೆ ಎಂದು ನಕಲಿ ದಾಖಲೆ ಸೃಷ್ಟಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬಳಿಕ ಲಾರಿಯಲ್ಲಿದ್ದ ಬಾಕ್ಸ್‌ಗಳನ್ನು ತೆರೆದು ತೋರಿಸುವಂತೆ ಪೊಲೀಸರು ತಿಳಿಸಿದ್ದಾರೆ. ಆಗ ಚಾಲಕ ಮತ್ತು ಕ್ಲೀನರ್‌, ಲಾರಿಯಲ್ಲಿದ್ದ ಬಾಕ್ಸ್‌ ಅನ್ನು ತೆರೆದಾಗ ಅದರಲ್ಲಿ ಗೋವಾದ ಮದ್ಯ ಇರುವುದು ಕಂಡು ಬಂದಿದೆ. ಹೀಗಾಗಿ ₹10 ಲಕ್ಷ ಮೌಲ್ಯದ ಲಾರಿ, ₹28.08 ಲಕ್ಷ ಮೌಲ್ಯದ ವಿವಿಧ ಕಂಪನಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈ ಮದ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು ಎಂಬುವುದರ ಬಗ್ಗೆ ವಿಚಾರಿಸಲಾಗಿದೆ. ಆರೋಪಿಗಳು ಗೋವಾದಿಂದ ಆಂಧ್ರಪ್ರದೇಶಕ್ಕೆ ತಲುಪಿಸುವುದಷ್ಟೇ ಗುರಿಯಾಗಿತ್ತು. ನಂತರ ಮದ್ಯವನ್ನು ಎಲ್ಲಿಗೆ ಸಾಗಿಸಬೇಕು ಎಂಬುವುದರ ನಂತರ ಹೇಳುವುದಾಗಿ ಆರೋಪಿಗಳಿಗೆ ಮಾಹಿತಿ ನೀಡುವವರಿದ್ದರು ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತಂಡ ರಚನೆ ಮಾಡಿ ಗೋವಾದಲ್ಲಿ ಈ ಮದ್ಯವನ್ನು ಎಲ್ಲಿ ಉತ್ಪಾದನೆ ಮಾಡಲಾಗುತ್ತಿದೆ? ಅಂತಾರಾಜ್ಯ ಪೂರೈಸಲು ಅವಕಾಶ ಇದೆಯಾ? ಎಂಬುವುದರ ಕುರಿತು ಅಲ್ಲಿನ ಪೊಲೀಸ್‌ರ ಸಹಕಾರದೊಂದಿಗೆ ತನಿಖೆ ನಡೆಸಲಾಗುವುದು. ಮದ್ಯ ಉತ್ಪಾದಕರು ಅಗತ್ಯ ದಾಖಲೆ ಮತ್ತು ಮಾಹಿತಿ ಒದಗಿಸದಿದ್ದಲ್ಲಿ ಉತ್ಪಾದನಾ ಘಟಕ ಬಂದ್‌ ಮಾಡಲು ಅಲ್ಲಿನ ಪೊಲೀಸರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಜತೆಗೆ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಪೊಲೀಸರೊಂದಿಗೂ ಸಂಪರ್ಕ ಸಾಧಿಸಿ ಗೋವಾದಿಂದ ಇಷ್ಟೊಂದು ಪ್ರಮಾಣದ ಮದ್ಯ ಎಲ್ಲಿಗೆ ಸಾಗಿಸಲಾಗುತ್ತಿತ್ತು? ಯಾರು ತರಿಸಿಕೊಳ್ಳುತ್ತಿದ್ದರು ಎಂಬುವುದರ ಕುರಿತು ಮಾಹಿತಿ ಕಲೆ ಹಾಕಲಾಗುವುದು ಎಂದರು.

ಈ ಕುರಿತು ಯಮಕನಮರಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Share this article