ಕನ್ನಡಪ್ರಭ ವಾರ್ತೆ ಮಧುಗಿರಿ
ಅಡವಿನಾಗೇನಹಳ್ಳಿ ಗ್ರಾಮದ ಅಂಗಡಿ ಮುಂಗಟ್ಟುಗಳಲ್ಲಿ ರಾಜರೋಷವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದಿಂದ ಸಾಕಷ್ಟು ತೊಂದರೆಯಾಗಿದ್ದು ಈ ಕೂಡಲೇ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.ಶನಿವಾರ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಅಡವಿನಾಗೇನಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು. ಅಕ್ರಮ ಮದ್ಯ ಮಾರಾಟದಿಂದಾಗಿ ಯುವ ಜನಾಂಗ ಬೆಳಿಗ್ಗೆ ಎದ್ದ ಕೂಡಲೇ ಕಾಫಿ, ಟೀ ಬದಲಾಗಿ ಮದ್ಯ ಸೇವಿಸಿ ತಮ್ಮ ಜೀವನ ಹಾಳು ಮಾಡಿ ಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಗ್ರಾಮದ ಸಣ್ಣ ಸಣ್ಣ ಅಂಗಡಿಗಳಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ನಡೆಯುತ್ತಿದೆ. ಇದನ್ನು ತಡೆಗಟ್ಟುವುದರ ಜೊತೆಗೆ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಗ್ರಾಮದಲ್ಲಿ ಜನರು ಶಾಂತಿ ನೆಮ್ಮದಿಯಿಂದ ಬದುಕುವ ವಾತಾವರಣ ಕಲ್ಪಿಸಬೇಕು.
ಗ್ರಾಮದ ಬಹುತೇಕ ಕುಟುಂಬಗಳು ಎಸ್ಸಿ,ಎಸ್ಟಿ ಜನಾಂಗದವರು ಹೆಚ್ಚು ವಾಸಿಸುತ್ತಿದ್ದು, ಹೆಣ್ಣುಮಕ್ಕಳು ಪ್ರತಿನಿತ್ಯ ಕೂಲಿ ನಾಲಿ ಮಾಡಿ ಕೂಡಿಟ್ಟ ಹಣದಲ್ಲಿ ಗಂಡಸರು ಕುಡಿತದ ಚಟಕ್ಕೆ ಬಲಿಯಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕುಟುಂಬ ಆರ್ಥಿಕವಾಗಿ ಕೆಟ್ಟ ಪರಿಸ್ಥಿತಿ ಎದುರಿಸುವ ಜೊತೆಗೆ ಕುಟುಂಬದಲ್ಲಿ ಹಲವು ಮಾನಸಿಕ ಕಲಹಗಳಿಂದ ಕುಟುಂಗಳು ಬೀದಿ ಪಾಲಾಗುತ್ತಿವೆ. ಈ ಬಗ್ಗೆ ಮದ್ಯ ಮಾರಾಟ ಮಾಡುವವರನ್ನು ಪ್ರಶ್ನಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಡಿಯಲು ಬರುತ್ತಾರೆ. ಇದನ್ನು ನಿಯಂತ್ರಿಸಬೇಕಾದ ಅಬಕಾರಿ ಇಲಾಖೆ ಮತ್ತು ಪೋಲಿಸರಿಗೆ ತಿಳಿಸಿದರೂ ಸಹ ಯಾವುದು ಪ್ರಯೋಜನವಾಗಿಲ್ಲ, ಅಲ್ಲದ ಬೇಕಾಬಟ್ಟಿ ಜನರ ಕಣ್ಣೊರೆಸಲು ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಹೋಗುತ್ತಾರೆ ಎಂದು ಗ್ರಾಮಸ್ಥರು ಇಲಾಖೆಯ ಕಾರ್ಯ ವೈಖರಿ ವಿರುದ್ಧ ಕಿಡಿಕಾರಿದರು.ಗ್ರಾಪಂ ಸದಸ್ಯ ಸಿ.ಎ.ಆನಂದ ಮಾತನಾಡಿ ಅಡವಿನಾಗೇನಹಳ್ಳಿಯಿಂದ- ಮಧುಗಿರಿ ಅಬಕಾರಿ ಇಲಾಖೆತನಕ ಪಾದಯಾತ್ರೆ ನಡೆಸಿ ಅಬಕಾರಿ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಈ ವೇಳೆ ನರಸಿಂಹಮೂರ್ತಿ, ಹನುಮಯ್ಯ, ತಿಮ್ಮಯ್ಯ, ಲಕ್ಷ್ಮೀಪತಿ, ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಪದ್ಮಾವತಿ, ಉಮಾದೇವಿ, ಸರೋಜಮ್ಮ, ಸರಸ್ಪತಮ್ಮ, ಹನುಮಕ್ಕ, ತಿಮ್ಮೇಗೌಡ, ನಂಜಮ್ಮ, ವೆಂಕಟಸ್ವಾಮಿ, ಎಲ್ಲಪ್ಪ, ರಮೇಶ್, ಶನಿವಾರಪ್ಪ, ರಾಧಮ್ಮ, ಕುಮಾರಪ್ಪ, ಗಾಯಿತ್ರಿ, ಗೀತಾಮ್ಮ, ರಜನಿ, ದೊಡ್ಡಕ್ಕ ,ಶಂಕರ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.