ಕನ್ನಡಪ್ರಭ ವಾರ್ತೆ ಬೇಲೂರು
ಅಬಕಾರಿ ಅಧಿಕಾರಿಗಳ ಮಾರ್ಗದರ್ಶನದಂತೆ ತಾಲೂಕಿನ ಪ್ರತಿ ಗ್ರಾಮದಲ್ಲೂ ಅಕ್ರಮ ಮದ್ಯ ಮಾರಾಟ ನಿರಾತಂಕವಾಗಿ ನಡೆಯುತ್ತಿದೆ ಎಂದು ಶಾಸಕ ಎಚ್. ಕೆ ಸುರೇಶ್ ಕಿಡಿಕಾರಿದರು.ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಚ್. ಕೆ ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯ ಇಲಾಖೆವಾರು ಪ್ರಗತಿ ವರದಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ತುಂಬಲು ಅಕ್ರಮ ಮದ್ಯದ ಮಾರಾಟಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಇದರಿಂದ ಜನರ ನೆಮ್ಮದಿ ಹಾಳಾಗುವ ಜೊತೆಗೆ ಅನಾರೋಗ್ಯದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಬೇಸರ ಹೊರಹಾಕಿದರು.
ಜೆಸ್ಕಾಂ ಇಲಾಖೆ ರೈತರಿಗೆ ಮತ್ತು ನಿವಾಸಿಗಳಿಗೆ ಸಮರ್ಪಕ ವಿದ್ಯುತ್ ನೀಡಬೇಕು. ದೇವರ ಕೃಪೆಯಿಂದ ಸ್ವಲ್ಪಮಟ್ಟಿನ ಮಳೆಯಾಗುತ್ತಿರುವುದರಿಂದ ವಿದ್ಯುತ್ ಅಭಾವ ಆಗದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಕಾಡಾನೆಗಳ ಸಮಸ್ಯೆ ಇದ್ದು ಮಲೆನಾಡಿನಲ್ಲಿ ವಿದ್ಯುತ್ ಕಡಿತಗೊಳಿಸಬಾರದು. ವಿದ್ಯುತ್ ಪರಿವರ್ತಕ ನೀಡಲು ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಬಿಕ್ಕೋಡು,ಹನಿಕೆ, ಅಡಗೂರು ತಟ್ಟೆಹಳ್ಳಿ ಗ್ರಾಮಗಳಲ್ಲಿ ಶಾಖಾಧಿಕಾರಿಗಳ ಕಚೇರಿ ತೆರೆಯಲು ನಮಗೆ ಅನುಮತಿ ದೊರೆತಿದ್ದು ಅದಕ್ಕೆ ಬೇಕಾದ ಸ್ಥಳವನ್ಬು ತಹಸೀಲ್ದಾರ್ ಅವರ ಬಳಿ ಚರ್ಚಿಸಿ ಜಾಗಗಳನ್ನು ಗುರುತು ಮಾಡಿಕೊಡಲಾಗುತ್ತದೆ ಎಂದರು.ತಾಲೂಕಿನ ವಿವಿಧೆಡೆ ರಾಜಾರೋಷವಾಗಿ ಗಣಿಗಾರಿಕೆಗಳು ನಡೆಯುತ್ತಿದ್ದು, ಇದರಿಂದ ರಸ್ತೆಗಳು ಹಾಳಾಗಿವೆ, ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ದಿನನಿತ್ಯ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅತಿ ಭಾರದ ಸಾಮಗ್ರಿ ಸಾಗಾಣಿಕೆ ಮಾಡುವವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು. ಪಟ್ಟಣದ ಹೊಳೆಬೀದಿಯ ಕಾಮಗಾರಿ ಅಭಿವೃದ್ಧಿ ಪಡಿಸಲು ಸರ್ಕಾರ ಈಗಾಗಲೇ ಮೊದಲ ಹಂತದಲ್ಲಿ 35 ಕೋಟಿ ರು.ಗಳನ್ನು ಬಿಡುಗಡೆ ಮಾಡಿದ್ದು, ರಸ್ತೆಗೆ ಅಗತ್ಯವಾಗಿರುವ 93 ಅಡಿ ಬಗ್ಗೆ ನಿಖರ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಸರ್ವೇ ನಡೆಸಿ ನೀಡಬೇಕು. ಬಾಕಿ ಉಳಿದ ಉಳಿದ 35 ಕೋಟಿ ಹಣವನ್ನು ತರಲಾಗುತ್ತದೆ. ಮುಖ್ಯರಸ್ತೆ ಅಗಲೀಕರಣಕ್ಕೆ ೧೨೦೦ ಕೋಟಿ ರು. ಹಣವನ್ನು ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ನೀಡುತ್ತಿದ್ದು ಇದಕ್ಕೆ ಎಲ್ಲರ ಸಹಕಾರ ಅತಿಮುಖ್ಯ ಎಂದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಡಾ. ರಮೇಶ್, ತಹಸೀಲ್ದಾರ್ ಮಮತಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಸಂತ ಕುಮಾರ್ ಹಾಜರಿದ್ದರು.