ಕೂಡ್ಲಿಗಿ ತಹಸೀಲ್ದಾರ್ ದಿಟ್ಟ ಕ್ರಮ, ಪಡಿತರ ಸ್ಥಗಿತಗೊಳಿಸುವ ಎಚ್ಚರಿಕೆ
ತಾಲೂಕಿನ ಗೆದ್ದಲಗಟ್ಟೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 13 ಮನೆಗಳಿಗೆ ತಹಸೀಲ್ದಾರ್ ಕೆ.ವಿ. ನೇತ್ರಾವತಿ ಅವರು ತಾತ್ಕಾಲಿಕವಾಗಿ ನೀರು ಸರಬರಾಜು ಬಂದ್ ಮಾಡಿಸಿದ್ದಾರೆ.
ತಹಸೀಲ್ದಾರ್ ಕ್ರಮಕ್ಕೆ ಜನರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದರೆ, ಅಕ್ರಮ ಮದ್ಯ ಮಾರಾಟಗಾರರು ಬೆಚ್ಚಿಬಿದ್ದಿದ್ದಾರೆ.ಕೂಡ್ಲಿಗಿ ತಾಲೂಕಿನ ಗೆದ್ದಲಗಟ್ಟೆ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮಂದಿ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದಾರೆ. ಇದರಿಂದ ಅಪ್ರಾಪ್ತರೂ ಕುಡಿತದ ಚಟಕ್ಕೆ ದಾಸರಾಗುತ್ತಿದ್ದಾರೆ. ಈ ಕುರಿತು ಗ್ರಾಮದ 30ಕ್ಕೂ ಹೆಚ್ಚು ಮಹಿಳೆಯರು ಮತ್ತು ಕಟ್ಟಡ ಕಾರ್ಮಿಕರು ಸೇರಿ ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾ ಖಜಾಂಚಿ ಗುನ್ನಳ್ಳಿ ರಾಘವೇಂದ್ರ ನೇತೃತ್ವದಲ್ಲಿ ಕೂಡ್ಲಿಗಿ ತಹಸೀಲ್ದಾರ್, ಕೂಡ್ಲಿಗಿ ಡಿವೈಎಸ್ಪಿ ಹಾಗೂ ಕೂಡ್ಲಿಗಿ ಅಬಕಾರಿ ನಿರೀಕ್ಷಕರಿಗೆ ಇತ್ತೀಚೆಗೆ ದೂರು ನೀಡಿದ್ದರು.
ಗ್ರಾಮದಲ್ಲಿ ಇನ್ನು ಮುಂದೆ ಅಕ್ರಮ ಮದ್ಯ ಮಾರಾಟ ಮಾಡಿದಲ್ಲಿ ತಕ್ಷಣ ಕರೆ ಮಾಡಿ ಎಂದು ತಹಸೀಲ್ದಾರ್ ನೇತ್ರಾವತಿ ಅವರು ಗ್ರಾಮದ ಮಹಿಳೆಯರಿಗೆ ಸೂಚಿಸಿದರು. ಗ್ರಾಮದ ಜನರೊಂದಿಗೆ ಸಭೆ ನಡೆಸಿದ ಕೂಡ್ಲಿಗಿ ಅಬಕಾರಿ ನಿರೀಕ್ಷಕ ಬಸವರಾಜ್ ಹಾಗೂ ಸಿಬ್ಬಂದಿ, ಗುಡೇಕೋಟೆ ಪಿಎಸ್ಐ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿ ಸೇರಿ ಗ್ರಾಮದಲ್ಲಿ ಇನ್ನು ಮುಂದೆ ಯಾವುದೇ ಅಕ್ರಮ ಮದ್ಯ ಮಾರಾಟದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ 13 ಮನೆಗಳಿಗೆ ತಾತ್ಕಾಲಿಕವಾಗಿ ನೀರು ಸರಬರಾಜು ಬಂದ್ ಮಾಡಲು ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ಪಡಿತರ ಸಹ ತಡೆಯಲಾಗುವುದು ಎಂದು ಎಚ್ಚರಿಕೆ ನೀಡಿದ್ದೇನೆ ಎನ್ನುತ್ತಾರೆ ಕೂಡ್ಲಿಗಿ ತಹಸೀಲ್ದಾರ್ ವಿ.ಕೆ. ನೇತ್ರಾವತಿ.