ಕುಂದುಕೊರತೆ ಸಭೆಯಲ್ಲಿ ಅಕ್ರಮ ಮದ್ಯ ಮಾರಾಟದ್ದೇ ಸದ್ದು

KannadaprabhaNewsNetwork |  
Published : Jul 29, 2025, 01:01 AM IST
ಫೋಟೋ - 27 ಹೆಚ್‌ಎಸ್‌ಕೆ 2ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಡವತ್ತಿ ಗ್ರಾಮದಲ್ಲಿ ನಡೆದ ಎಸ್ಸಿ ಎಸ್ಟಿ ಸಮುದಾಯದ ಕುಂದು ಕೊರತೆ ಸಭೆಯಲ್ಲಿ ಡಿವೈಎಸ್ಪಿ ಮಲ್ಲೇಶ್ ಮಾತನಾಡಿದರು | Kannada Prabha

ಸಾರಾಂಶ

ಹೊಸಕೋಟೆ: ತಾಲೂಕಿನ ತಿರುಮಲಶೆಟ್ಟಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಡವತ್ತಿ ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ತಾಲೂಕಿನ ಪ್ರತಿ ಗ್ರಾಮದ ಕಿರಾಣಿ ಅಂಗಡಿಗಳಲ್ಲಿಯೂ ಅಕ್ರಮ ಮದ್ಯ ಮಾರಾಟವಾಗುತ್ತಿದೆ ಎಂದು ವ್ಯಾಪಕವಾಗಿ ಕೇಳಿ ಬಂದಿತು.

ಹೊಸಕೋಟೆ: ತಾಲೂಕಿನ ತಿರುಮಲಶೆಟ್ಟಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಡವತ್ತಿ ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ತಾಲೂಕಿನ ಪ್ರತಿ ಗ್ರಾಮದ ಕಿರಾಣಿ ಅಂಗಡಿಗಳಲ್ಲಿಯೂ ಅಕ್ರಮ ಮದ್ಯ ಮಾರಾಟವಾಗುತ್ತಿದೆ ಎಂದು ವ್ಯಾಪಕವಾಗಿ ಕೇಳಿ ಬಂದಿತು.

ಹೊಸಕೋಟೆ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ, ಇದರಿಂದ ಅಪ್ರಾಪ್ತರು ದಾರಿ ತಪ್ಪುತ್ತಿದ್ದಾರೆ. ಅಬಕಾರಿ ಇಲಾಖೆ ನಿದ್ರಾವಸ್ಥೆ ತಲುಪಿದೆ. ರಸ್ತೆ ಬದಿಯಲ್ಲಿ, ಶಾಲೆ, ದೇವಾಲಯ ಎನ್ನದೆ ಅಕ್ಕಪಕ್ಕದ ಜಾಗದಲ್ಲೇ ಮದ್ಯ ಸೇವಿಸುವವರ ಸಂಖ್ಯೆ ಹೆಚ್ಚಾಗಿದ್ದು, ಸಂಜೆ ವೇಳೆ ಹಿರಿಯರು, ಹೆಣ್ಣು ಮಕ್ಕಳು ರಸ್ತೆಗಳಲ್ಲಿ ಓಡಾಡಲು ಸಮಸ್ಯೆ ಆಗುತ್ತಿದೆ. ಅಬಕಾರಿ ಇಲಾಖೆ ಹಾಗೂ ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಿ ಅಕ್ರಮ ಮದ್ಯ ಮಾರಾಟ ತಡೆಯುವಂತೆ ದಲಿತ ಮುಖಂಡರು ಒತ್ತಾಯಿಸಿದರು.

ತಹಸೀಲ್ದಾರ್ ಸೋಮಶೇಖರ್ ಮಾತನಾಡಿ, ಮುಗ್ಧ ದಲಿತರನ್ನು ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುತ್ತಿರುವ ವ್ಯಕ್ತಿಗಳಿಂದ ದೂರವಿರುವಂತೆ ಅರಿವು ಮೂಡಿಸುವ ಕೆಲಸ ಪ್ರಜ್ಞಾವಂತ ದಲಿತ ಮುಖಂಡರು ಮತ್ತು ದಲಿತ ಸಂಘಟನೆಗಳು ಮಾಡಬೇಕಿದೆ. ಸಭೆಯಲ್ಲಿ ಚರ್ಚೆಯಾದ ವಿಚಾರಗಳ ಬಗ್ಗೆ ವಿಶೇಷ ಗಮನ ಹರಿಸಲಾಗುವುದು. ಹಿಂದಿನ ಸಭೆಯಲ್ಲಿ ಹಲವು ಮುಖಂಡರು ತಿಳಿಸಿದ್ದ ಸಮಸ್ಯೆಗಳಿಗೆ ಕಾರ್ಯರೂಪದಲ್ಲಿ ಉತ್ತರ ನೀಡಿದ್ದೇವೆ. ಕೆಲ ಗ್ರಾಮಗಳಲ್ಲಿ ಅನಧಿಕೃತವಾಗಿ ಸರ್ಕಾರಿ ಜಮೀನು ಒತ್ತುವರಿಯನ್ನು ಯಾರ ಒತ್ತಡಕ್ಕೂ ಮಣಿಯದೆ ತೆರವುಗೊಳಿಸಿದ್ದೇವೆ. ವಸತಿ ರಹಿತರಿಗೆ ಸೂರು ಒದಗಿಸುವುದೇ ಸರ್ಕಾರದ ಮುಖ್ಯ ಧ್ಯೇಯವಾಗಿದೆ. ಆ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದವರ ಯಾವುದೇ ಸಮಸ್ಯೆ ಇದ್ದರೂ ಕಾನೂನಿನ ಚೌಕಟ್ಟಿನೊಳಗೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ದೇಗುಲ ಪ್ರವೇಶ ನಿರಾಕರಿಸಿದರೆ ಕ್ರಮ:

ತಾಲೂಕಿನ ಹಲವು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ದೇವಸ್ಥಾನಗಳಲ್ಲಿ ಪ್ರವೇಶ ನಿರಾಕರಣೆ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ದೂರು ಕೇಳಿಬಂತು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಇಂತಹ ಘಟನೆಗಳು ಕಂಡು ಬಂದಲ್ಲಿ ತಕ್ಷಣ ಸಮೀಪದ ಠಾಣೆಗೆ ದೂರು ನೀಡಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ತಾಲೂಕಿನ ಎಲ್ಲಾ ದೇವಾಲಯಗಳ ಮುಂದೆ ಅಸ್ಪೃಶ್ಯತೆ ಆಚರಣೆ ಕಾನೂನು ಬಾಹಿರ, ಎಲ್ಲಾ ಜಾತಿಯ ಜನರಿಗೂ ದೇಗುಲದಲ್ಲಿ ಮುಕ್ತ ಅವಕಾಶ ಇದೆ ಎಂಬ ಫಲಕವನ್ನು ಮುಜರಾಯಿ ಇಲಾಖೆಯಿಂದ ಅಳವಡಿಸಲಾಗುವುದು ಎಂದರು.

ಸಭೆಯಲ್ಲಿ ತಾಪಂ ಇಒ ಡಾ.ನಾರಾಯಣಸ್ವಾಮಿ, ಹೊಸಕೋಟೆ ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಗೋವಿಂದ್, ತಿರುಮಲಶೆಟ್ಟಿಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಸುಂದರ್, ಅನುಗೊಂಡನಹಳ್ಳಿ ಪೋಲಿಸ್ ಇನ್ಸ್‌ಪೆಕ್ಟರ್ ಬಿಎಂ.ಗೋವಿಂದ್, ನಂದಗುಡಿ ಪೊಲೀಸ್ ಇನ್ಸ್‌ಪೆಕ್ಟರ್ ಶಾಂತಾರಾಂ, ಹೊಸಕೋಟೆ ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಕಂಠಯ್ಯ , ಸಮೇತನಹಳ್ಳಿ ಗ್ರಾಪಂ ಅಧ್ಯಕ್ಷ ಕಾಂತರಾಜು, ಪಿಡಿಒ ಪ್ರಸಾದ್, ಕಂದಾಯ ನಿರೀಕ್ಷಕ ಚಂದ್ರಶೇಖರ್, ಪೊಲೀಸ್ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ, ಸದಸ್ಯರು, ದಲಿತಪರ ಸಂಘಟನೆಗಳ ಮುಖಂಡರು ಹಾಜರಿದ್ದರು.

ಕೋಟ್.............

ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಒಗ್ಗೂಡಿಸಿ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಕುಂದುಕೊರತೆ ಸಭೆ ನಡೆಸಿ ಮನೆ ಮನೆಗೆ ಪೋಲಿಸ್ ವ್ಯವಸ್ಥೆಯಡಿ ಸಭೆ ನಡೆಸಲಾಗುವುದು. ಪ್ರತಿ ತಿಂಗಳಿಗೊಮ್ಮೆ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು.

-ಮಲ್ಲೇಶ್, ಡಿವೈಎಸ್ಪಿ, ಹೊಸಕೋಟೆ

(ಫೋಟೊ ಕ್ಯಾಪ್ಷನ್‌)

ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಡವತ್ತಿ ಗ್ರಾಮದಲ್ಲಿ ನಡೆದ ಎಸ್ಸಿ ಎಸ್ಟಿ ಸಮುದಾಯದ ಕುಂದು ಕೊರತೆ ಸಭೆಯಲ್ಲಿ ಡಿವೈಎಸ್ಪಿ ಮಲ್ಲೇಶ್ ಮಾತನಾಡಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್