ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಅಕ್ರಮ ಗಣಿಗಾರಿಕೆ: ರೈತರ ಆರೋಪ

KannadaprabhaNewsNetwork |  
Published : Nov 11, 2025, 02:00 AM IST
೪ಕೆಎಂಎನ್‌ಡಿ-೪ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿದರು. | Kannada Prabha

ಸಾರಾಂಶ

ಕಾಳೇನಹಳ್ಳಿ-ಆಲಗೂಡು ಗ್ರಾಮಗಳ ಹಾದುಹೋಗುವ ವಿಶ್ವೇಶ್ವರಯ್ಯ ಸಂಪರ್ಕ ನಾಲೆಯ ೧.೨ ಕಿ.ಮೀ ಉದ್ದದ ಸುರಂಗದ ಪಕ್ಕದಲ್ಲಿ ೨೦ ಗಣಿಗಾರಿಕೆಗಳು ಅಕ್ರಮವಾಗಿ ನಡೆಯುತ್ತಿವೆ. ೫ ಕ್ರಷರ್‌ಗಳು ಎಗ್ಗಿಲ್ಲದೇ ರಿಗ್ ಬೋರ್ ಬ್ಲಾಸ್ಟಿಂಗ್ ಮಾಡುತ್ತಿದ್ದಾರೆ. ಇದರಿಂದ ನಾಲಾ ಸುರಂಗ ಕುಸಿಯುವ ಭೀತಿ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಂಗಪಟ್ಟಣ ತಾಲೂಕಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ವಿಫಲರಾಗಿರುವ ಅಧಿಕಾರಿಗಳು ಸ್ವತಃ ತಾವೇ ಗಣಿಗಾರಿಕೆಯಲ್ಲಿ ಶಾಮೀಲಾಗಿರುವ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಶಂಕೆ ವ್ಯಕ್ತಪಡಿಸಿದರು.

ಕೃಷ್ಣರಾಜಸಾಗರ ಜಲಾಶಯದ ಹಿತದೃಷ್ಟಿಯಿಂದ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆ ನಡೆಸದಂತೆ ಹೈಕೋರ್ಟ್ ಆದೇಶ ಹೊರಡಿಸಿದ್ದರೂ ಸಹ ತಾಲೂಕಿನಲ್ಲಿ ನಡೆಯುತ್ತಿರುವ ಗಣಿಗಾರಿಕೆ ತಡೆಯಲು ತಾಲೂಕು ಆಡಳಿತ ಮತ್ತು ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿ ನ್ಯಾಯಾಲಯ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕಾಳೇನಹಳ್ಳಿ-ಆಲಗೂಡು ಗ್ರಾಮಗಳ ಹಾದುಹೋಗುವ ವಿಶ್ವೇಶ್ವರಯ್ಯ ಸಂಪರ್ಕ ನಾಲೆಯ ೧.೨ ಕಿ.ಮೀ ಉದ್ದದ ಸುರಂಗದ ಪಕ್ಕದಲ್ಲಿ ೨೦ ಗಣಿಗಾರಿಕೆಗಳು ಅಕ್ರಮವಾಗಿ ನಡೆಯುತ್ತಿವೆ. ೫ ಕ್ರಷರ್‌ಗಳು ಎಗ್ಗಿಲ್ಲದೇ ರಿಗ್ ಬೋರ್ ಬ್ಲಾಸ್ಟಿಂಗ್ ಮಾಡುತ್ತಿದ್ದಾರೆ. ಇದರಿಂದ ನಾಲಾ ಸುರಂಗ ಕುಸಿಯುವ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಸುರಂಗಕ್ಕೆ ಹಾನಿಯಾದರೆ ಬನ್ನೂರು, ಟಿ.ನರಸೀಪುರ, ಮಳವಳ್ಳಿ ಭಾಗದ ರೈತರಿಗೆ ನೀರು ಪೂರೈಸಲು ಸಾಧ್ಯವಾಗುವುದಿಲ್ಲ. ಕಾಳೇನಹಳ್ಳಿ ಸರ್ವೇ ನಂ.೨೧ರಲ್ಲಿ ೭.೨೦ ಎಕರೆಯ ಕೆರೆ ಮತ್ತು ಗೋಮಾಳ ಅತಿಕ್ರಮಿಸಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವುದು ಇದಕ್ಕೆ ಕಾರಣವಾಗಿದೆ. ಇದರಿಂದ ಪರಿಸರ, ಪ್ರಾಣಿ, ಪಕ್ಷಿ ಸಂಕುಲ ಸೇರಿದಂತೆ ಮೇವು, ಕುಡಿಯುವ ನೀರಿನ ತೊಡಕು ಎದುರಾಗಲಿದೆ ಎಂದು ದೂರಿದರು.

ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಶ್‌ಗೌಡ ಮಾತನಾಡಿ, ಜಿಲ್ಲಾಧಿಕಾರಿ, ತಹಸೀಲ್ದಾರ್ ಅವರಿಗೆ ಮನವಿ ಮಾಡಿದಾಗ ಅಧಿಕಾರಿಗಳು ಗಣಿಗಾರಿಕೆ ಮುಚ್ಚಿಸಿದ್ದರು. ಆದರೆ, ಅದು ಈಗ ಕಡತಗಳಲ್ಲಿ ಮಾತ್ರ ಸ್ಥಗಿತಗೊಂಡು. ರಾತ್ರೋರಾತ್ರಿ ಮರು ಪ್ರಾರಂಭವಾಗಿದೆ ಎಂದು ಹೇಳಿದರು.

ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ೨೪ ಕ್ವಾರಿಗಳಿಗೆ ಅನುಮತಿ ಪಡೆಯಲಾಗಿದೆ. ೧೭ ಬ್ಲಾಸ್ಟಿಂಗ್ ಕ್ರಷರ್‌ಗಳಿಗೆ ಅನುಮತಿ ಪಡೆಯಲಾಗಿದೆ. ಆದರೆ, ವಾಸ್ತವದಲ್ಲಿ ಅಕ್ರಮವಾಗಿ ೫೨ಕ್ಕೂ ಹೆಚ್ಚು ಕ್ರಷರ್‌ಗಳು ನಡೆಯುತ್ತಿವೆ. ಇದರ ಹಿಂದೆ ಮಂಡ್ಯ ಹಾಗೂ ಮೈಸೂರಿನ ರಾಜಕಾರಣಿಗಳ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದರು.

ಇದು ಮಾತ್ರವಲ್ಲದೇ, ಅನುಮತಿ ಪಡೆದದ್ದಕ್ಕಿಂತ ಹೆಚ್ಚು ನೈಸರ್ಗಿಕ ಸಂಪನ್ಮೂಲ ದೋಚಿ, ರಾಜಧನ ಲೂಟಿ ಮಾಡಲಾಗುತ್ತಿದೆ. ಅಕ್ರಮ ಗಣಿಗಾರಿಕೆ, ಕ್ರಷರ್ ಸಂಬಂಧ ಕ್ರಮ ಕೈಗೊಳ್ಳಲು ಮತ್ತೊಮ್ಮೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುವುದು. ಮತ್ತೆ ಮುಂದುವರೆದಲ್ಲಿ ಹೋರಾಟ ಮಾಡಲಾಗುವುದು. ಸಮಸ್ಯೆ ಬಗೆಹರಿಯದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರಸ್ವಾಮಿ, ಶ್ರೀರಂಗಪಟ್ಟಣ ತಾಲೂಕು ಕಾರ್ಯಾಧ್ಯಕ್ಷ ಡಿ.ಎಸ್.ಚಂದ್ರಶೇಖರ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ರವೀಚಂದ್ರ, ಟಿ.ನರಸೀಪುರ ಡಿಎಸ್‌ಎಸ್ ಮುಖಂಡ ಕುಕ್ಕೂರ್ ರಾಜು ಇದ್ದರು.

PREV

Recommended Stories

90ರ ವಯಸ್ಸಲ್ಲೂ ಪಾಠ ಮಾಡುವ ಸುಬ್ರಾಯ ಮೇಷ್ಟ್ರು!
25 ರಿಂದ ಕಳಶಾಭಿಷೇಕ; ವಿಶೇಷ ಧಾರ್ಮಿಕ ಕಾರ್ಯಕ್ರಮ