ಕನ್ನಡಪ್ರಭ ವಾರ್ತೆ ಮಂಡ್ಯ
ಅನಧಿಕೃತ ಗಣಿಗಾರಿಕೆ, ಸಾಗಣೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೆ, ರಸ್ತೆಗಳು ಗುಂಡಿಬಿದ್ದು ಸಾರ್ವಜನಿಕ ಸಂಚಾರಕ್ಕೆ ಯೋಗ್ಯವಲ್ಲದ ರೀತಿ ಹಾಳಾಗಿವೆ. ಗಣಿಗಾರಿಕೆ ಸಂಬಂಧ ನಿಯಮ ಮೀರಿ ಸ್ಫೋಟಕಗಳನ್ನು ಬಳಸುತ್ತಿರುವುದರಿಂದ ಕೃಷಿ ಜಮೀನಿಗೆ ಧಕ್ಕೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಕಳೆದ ವರ್ಷ ಮೇ ೨೭ರಂದು ಗಣಿ ಇಲಾಖೆ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ ಸಮಯದಲ್ಲಿ ಹಲವು ನ್ಯೂನ್ಯತೆಗಳು ಕಂಡುಬಂದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಅನಧಿಕೃತ ಗಣಿಗಾರಿಕೆ, ಸಾಗಣೆ ತಡೆಗಟ್ಟಲು ಸೂಚಿಸಿದ್ದರು. ಅಲ್ಲದೆ, ವಿಶ್ವೇಶ್ವರಯ್ಯ ನಾಲಾ ವ್ಯಾಪ್ತಿಯಲ್ಲಿ ಬರುವ ಸಂಪರ್ಕ ನಾಲೆಯ ಸರಪಳಿ ೧೬-೧೮ನೇ ಕಿ.ಮೀ.ವರೆಗೆ ೧.೩೦ ಕಿ.ಮೀ. ಉದ್ದದ ಸುರಂಗವಿದೆ. ಇದರ ಸಮೀಪದ ಸುತ್ತಲಿನ ಗ್ರಾಮಗಳಾದ ಟಿ.ಎಂ.ಹೊಸೂರು-ಆಲಗೋಡು ಗ್ರಾಮಗಳ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಯುತ್ತಿರುವುದರಿಂದ ಸುರಂಗಕ್ಕೆ ಅಪಾಯ ಎದುರಾಗುವ ಸಾಧ್ಯತೆಗಳಿವೆ. ಆದ್ದರಿಂದ ನಾಲೆಯ ೧೦೦ ಮೀ. ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಗಣಿ ಇಲಾಖೆಯನ್ನು ಕೋರಿರುವುದರಿಂದ ನಿಷೇಧಾಜ್ಞೆ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗೆ ಗಣಿ ಅಧಿಕಾರಿಗಳು ಶಿಫಾರಸ್ಸು ಮಾಡಿದ್ದರು.ಶ್ರೀರಂಗಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ ತಡೆಗಟ್ಟು ಸಂಬಂಧ ಹಗಲು-ರಾತ್ರಿ ಗಸ್ತು ಕಾರ್ಯಾಚರಣೆ ಕೈಗೊಂಡು ಕಳೆದ ಮೂರು ವರ್ಷಗಳಲ್ಲಿ ೨೯ ಪ್ರಕರಣಗಳನ್ನು ನ್ಯಾಯಾಲಯಗಳಲ್ಲಿ ದಾಖಲಿಸಲಾಗಿದೆ. ಅನಧಿಕೃತ ಗಣಿ ಸಾಮಗ್ರಿಗಳ ಸಾಗಣೆ ಸಂಬಂಧ ವಾಹನಗಳನ್ನು ಪತ್ತೆಹಚ್ಚಿ ಸುಮಾರು ₹೯೦ ಲಕ್ಷ ವರೆಗೆ ದಂಡ ವಸೂಲಿ ಮಾಡಲಾಗಿದೆ.
ಇವೆಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ೯ ಗ್ರಾಮಗಳ ವ್ಯಾಪ್ತಿಯಲ್ಲಿ ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ ಮೇಲೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ನಿಷೇಧಾಜ್ಞೆ ಉಲ್ಲಂಘಿಸಿ ಗಣಿಗಾರಿಕೆ, ಸಾಗಾಣಿಕೆ ನಡೆಸಿದರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ೨೦೨೩ರ ಸೆಕ್ಷನ್ ೧೬೩ರಡಿ ಹೊರಡಿಸಿದ ಆದೇಶವನ್ನು ಉಲ್ಲಂಘಿಸಿದಲ್ಲಿ ಭಾರತೀಯ ನ್ಯಾಯಸಂಹಿತೆ ೨೦೨೩ರ ಕಲಂ ೨೨೩ರಡಿ ಕ್ರಮ ಕೈಗೊಳ್ಳುವಂತೆ ಪೊಲೀಸರು, ಹಿರಿಯ ಭೂ ವಿಜ್ಞಾನಿಗಳು, ತಹಸೀಲ್ದಾರ್, ಸಹಾಯಕ-ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.