ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಅಕ್ರಮ ಪಡಿತರ ಅಕ್ಕಿ ದಂಧೆ ನಿಯಂತ್ರಣಕ್ಕಾಗಿ ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಇದರ ಭಾಗವಾಗಿ ನಿಪ್ಪಾಣಿ ನಗರದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸಾವಿರಾರು ಕೆಜಿ ಪಡಿತರ ಅಕ್ಕಿ ಪತ್ತೆಯಾಗಿದೆ.ಮೊದಲ ಪ್ರಕರಣದಲ್ಲಿ ನಿಪ್ಪಾಣಿಯ ಸಂದೀಪ್ ಬಾಲಾಸಾಹೇಬ ಗಂಗಾಳಿ ಎಂಬಾತ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 5,200 ಕೆಜಿ ಪಡಿತರ ಅಕ್ಕಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜಪ್ತಿಯಾದ ಅಕ್ಕಿಯ ಮೌಲ್ಯ ಸುಮಾರು ₹1.76 ಲಕ್ಷ ಎಂದು ಅಂದಾಜಿಸಲಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಬಡವರಿಗೆ ನೀಡಲಾಗುವ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟಕ್ಕೆ ಸಿದ್ಧತೆ ನಡೆಸಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ.ಇನ್ನೊಂದು ಪ್ರಕರಣದಲ್ಲಿ ಮೂಲತಃ ಮಹಾರಾಷ್ಟ್ರದ ಕೊಲ್ಲಾಪುರ ನಿವಾಸಿಯಾಗಿದ್ದು, ಪ್ರಸ್ತುತ ನಿಪ್ಪಾಣಿಯ ಗಾಂಧಿಚೌಕ್ ಪ್ರದೇಶದಲ್ಲಿ ವಾಸವಾಗಿರುವ ಸೋಹೇಲ್ ಆಲಂ ಢಾಲಾಯಿತ್ ಎಂಬಾತನು ಹಿದಾಯತ್ ನಗರದ ಶೆಡ್ ಒಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 2,500 ಕೆಜಿ ಪಡಿತರ ಅಕ್ಕಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜಪ್ತಿಯಾದ ಅಕ್ಕಿಯ ಮೌಲ್ಯ ಸುಮಾರು ₹85 ಸಾವಿರ ಎಂದು ಅಂದಾಜಿಸಲಾಗಿದೆ.ಎರಡು ಪ್ರಕರಣಗಳಲ್ಲಿ ಒಟ್ಟು 7,700 ಕೆಜಿ ಪಡಿತರ ಅಕ್ಕಿ ಜಪ್ತಿಯಾಗಿದ್ದು, ಇದರ ಒಟ್ಟು ಮೌಲ್ಯ ಸುಮಾರು ₹2.61 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಕಿಯನ್ನು ಎಲ್ಲಿಂದ ಸಂಗ್ರಹಿಸಲಾಗಿದೆ, ಇದರ ಹಿಂದೆ ದೊಡ್ಡ ಮಟ್ಟದ ಜಾಲ ಕಾರ್ಯನಿರ್ವಹಿಸುತ್ತಿದೆಯೇ, ಬೇರೆ ಜಿಲ್ಲೆಗಳು ಅಥವಾ ರಾಜ್ಯಗಳಿಗೆ ಅಕ್ರಮವಾಗಿ ಸಾಗಣೆ ಮಾಡುವ ಉದ್ದೇಶವಿತ್ತೇ ಎಂಬ ಕುರಿತು ತನಿಖೆ ಮುಂದುವರಿದಿದೆ.ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತಾಲೂಕು ಮಟ್ಟದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಪಡಿತರ ಅಕ್ಕಿ ಅಕ್ರಮ ಸಂಗ್ರಹ, ಸಾಗಣೆ ಹಾಗೂ ಕಾಳಸಂತೆ ಮಾರಾಟದ ವಿರುದ್ಧ ಜಿಲ್ಲಾದ್ಯಂತ ತೀವ್ರ ನಿಗಾ ವಹಿಸಲಾಗಿದೆ. ಬಡವರ ಹಕ್ಕಿನ ಆಹಾರಧಾನ್ಯವನ್ನು ಅಕ್ರಮವಾಗಿ ಖರೀದಿಸಿ ಲಾಭಕ್ಕಾಗಿ ಮಾರಾಟ ಮಾಡುವ ದಂಧೆಕೋರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆ ಎಚ್ಚರಿಕೆ ನೀಡಿದೆ.
ಅಧಿಕಾರಿಗಳ ಪ್ರಕಾರ, ಕೆಲವು ಮಧ್ಯವರ್ತಿಗಳು ಪಡಿತರ ಚೀಟಿದಾರರಿಗೆ ಹಣದ ಆಮಿಷ ಒಡ್ಡಿ ಕಡಿಮೆ ಬೆಲೆಗೆ ಅಕ್ಕಿಯನ್ನು ಖರೀದಿಸಿ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲ ನಡೆಸುತ್ತಿದ್ದಾರೆ. ಇಂತಹ ಕೃತ್ಯಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲ ಉದ್ದೇಶಕ್ಕೆ ಧಕ್ಕೆ ತರುತ್ತಿದ್ದು, ಬಡವರ ಆಹಾರ ಭದ್ರತೆಗೆ ಅಪಾಯ ಉಂಟುಮಾಡುತ್ತಿವೆ.ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಿಂದ ಪಡೆಯುವ ಆಹಾರ ಧಾನ್ಯವನ್ನು ತಮ್ಮ ಕುಟುಂಬದ ಬಳಕೆಗೆ ಮಾತ್ರ ಬಳಸಬೇಕು. ಯಾವುದೇ ಕಾರಣಕ್ಕೂ ಪಡಿತರ ಅಕ್ಕಿಯನ್ನು ಹೊರಗಡೆ ಮಾರಾಟ ಮಾಡುವುದು ಅಥವಾ ಮಧ್ಯವರ್ತಿಗಳಿಗೆ ನೀಡುವುದು ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ.-ಮಲ್ಲಿಕಾರ್ಜುನ ನಾಯಕ,