ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಸಂಘಟನೆಗಳ ಕಾರ್ಯಕರ್ತರು, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಘೋಷಣೆ ಕೂಗಿದರು.
ಕರುನಾಡ ಸೇವಕರು ಸಂಘಟನೆ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಸರ್ಕಾರದ ಅನುಮತಿಯಿಲ್ಲದೆ ೧೬ ಕೋಟಿ ರು. ಬೆಲೆ ಬಾಳುವ ಬಿ-ಮಿಲ್‌ನ್ನು ೪.೫೦ ಕೋಟಿ ರು.ಗೆ ಮಾರಾಟ ಮಾಡಿದ ಕುರಿತು ಸರ್ಕಾರಕ್ಕೆ ದೂರು ಸಲ್ಲಿಸಿದ ಪರಿಣಾಮ ವಾಣಿಜ್ಯ ಮತ್ತು ಉದ್ದಿಮೆಗಳ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ಈ ಕುರಿತು ತನಿಖೆಗೆ ಮಂಡ್ಯ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಸಂಬಂದ ಜಿಲ್ಲಾಧಿಕಾರಿಗಳು ತನಿಖಾ ಸಮಿತಿ ರಚಿಸಿದ್ದರೂ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ತನಿಖೆಗೆ ಸಹಕಾರ ನೀಡದೆ ಭಂಡಾಟ ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.ಅಧ್ಯಕ್ಷರನ್ನು ಪದಚ್ಯುತಗೊಳಿಸಿ ವ್ಯವಸ್ಥಾಪಕ ನಿರ್ದೇಶಕರನ್ನು ಅಮಾನತ್ತಿನಲ್ಲಿರಿಸಿದರೆ ಮಾತ್ರವೇ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ಸಾಧ್ಯವಿದೆ. ಈ ಕುರಿತು ಜಿಲ್ಲೆಯ ಜನಪ್ರತಿನಿಧಿಗಳು ಕಾರ್ಖಾನೆ ಉಳಿವಿಗಾಗಿ ಈರ್ವರನ್ನು ಪದಚ್ಯುತಗೊಳಿಸಿ ತನಿಖಾ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು ಎಂದು ಒತ್ತಾಯಿಸಿದರು.
ರೈತಸಂಘದ ಶಿವಳ್ಳಿ ಚಂದ್ರಶೇಖರ್ ಮಾತನಾಡಿ, ಮೈಷುಗರ್ ಹಗರಣಗಳ ಕೊಂಪೆಯಾಗಿದೆ. ಆಡಳಿತ ಮಂಡಳಿಯ ಮೇಲಿನ ಹಗರಣಗಳ ತನಿಖೆಗೆ ಸರ್ಕಾರವೇ ನೇಮಿಸಿದ್ದ ಮಹಾರಾಷ್ಟದ ನಿವೃತ್ತ ಸಕ್ಕರೆ ಆಯುಕ್ತರ ಸಮಿತಿ ವರದಿ ನೀಡಿದ್ದು, ಬಹುತೇಕ ಆರೋಪಗಳು ತನಿಖೆಯಲ್ಲಿ ಸಾಬೀತಾಗಿದ್ದರೂ ಉಸ್ತುವಾರಿ ಸಚಿವರು ಮೌನಕ್ಕೆ ಜಾರಿರುವ ಕಾರಣವನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಕರವೇ ಆಟೋ ಘಟಕದ ವೆಂಕಟೇಶ್, ಸೋಮಶೇಖರ್, ಗೋವಿಂದರಾಜ್, ಅಮರ್ ಕಬ್ಬನಹಳ್ಳಿ, ಸುಹಾಸ್, ಮಹದೇವ ಬೂದನೂರು, ಬಸವರಾಜು, ರೈತಸಂಘದ ಜವರೇಗೌಡ, ಗೋಪಾಲಪುರ ಸುರೇಶ್, ನಿಂಗೇಗೌಡ, ಹಾಡ್ಯ ಕೆಂಪೇಗೌಡ ಮೊದಲಾದವರಿದ್ದರು.