ಜೈನ ನಿಗಮ ಮಂಡಳಿ ಸ್ಥಾಪನೆ ಸೇರಿದಂತೆ ಐದು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.4ರಂದು ಚಿಕ್ಕೋಡಿಯಿಂದ ಬೆಳಗಾವಿಯ ಸುವರ್ಣಸೌಧದ ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಬೇಡಿಕೆ ಈಡೇರದಿದ್ದರೆ ಸುವರ್ಣಸೌಧದ ಎದುರು ಸಲ್ಲೇಖನ ವ್ರತ ಕೈಗೊಳ್ಳಲಾಗುವುದು

ಹುಬ್ಬಳ್ಳಿ : ಜೈನ ನಿಗಮ ಮಂಡಳಿ ಸ್ಥಾಪನೆ ಸೇರಿದಂತೆ ಐದು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.4ರಂದು ಚಿಕ್ಕೋಡಿಯಿಂದ ಬೆಳಗಾವಿಯ ಸುವರ್ಣಸೌಧದ ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಬೇಡಿಕೆ ಈಡೇರದಿದ್ದರೆ ಸುವರ್ಣಸೌಧದ ಎದುರು ಸಲ್ಲೇಖನ ವ್ರತ ಕೈಗೊಳ್ಳಲಾಗುವುದು ಎಂದು ವರೂರಿನ ಆಚಾರ್ಯ ಗುಣಧರನಂದಿ ಮಹಾರಾಜರು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೈನ ನಿಗಮ ಮಂಡಳಿ ಸ್ಥಾಪನೆ, ಸಾಧು-ಸಂತರಿಗೆ ರಕ್ಷಣೆ, ಬಡ ಜೈನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ಹಾಗೂ ಜೈನ ಸಾಧು-ಸಂತರ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಸೇರಿದಂತೆ ಐದು ಬೇಡಿಕೆಗಳ ಈಡೇರಿಕೆಗೆ ಹಲವು ಬಾರಿ ಸರ್ಕಾರದ ಗಮನ ಸೆಳೆಯಲಾಗಿದೆ. ಆದರೂ ಸ್ಪಂದನೆ ದೊರೆತಿಲ್ಲ. ಬೇಡಿಕೆ ಈಡೇರುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಘೋಷಿಸಿದರು.

ಜೈನ ಸಮಾಜದಲ್ಲಿ ಎಲ್ಲರೂ ಶ್ರೀಮಂತರಲ್ಲ. ಶೇ.90ರಷ್ಟು ಜನರು ಬಡವರ್ಗಕ್ಕೆ ಸೇರಿದವರಾಗಿದ್ದಾರೆ. ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ. ಬಡವರ ಪರ ಇರಬೇಕಾದ ಸರ್ಕಾರವೇ ನಿರ್ಲಕ್ಷ್ಯ ವಹಿಸಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆಯೂ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಹಾಗೂ ಸಲ್ಲೇಖನ ವ್ರತ ಆರಂಭಿಸುವುದಾಗಿ ತಿಳಿಸಿದ್ದೆ. ಆಗ ಸಚಿವರಾದ ಸಂತೋಷ ಲಾಡ್‌, ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಕರೆ ಮಾಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ, ನಂತರ ಯಾವುದೇ ಬೆಳವಣಿಗೆಯಾಗಿಲ್ಲ. ಹೀಗಾಗಿ ನ.19ರಂದು ಬಾಗಲಕೋಟೆ ಜಿಲ್ಲೆಯ ತೆರಳದಾಳದಿಂದ ದೀಪ ಪ್ರಜ್ವಲಿಸುವ ಮೂಲಕ ನಿವೇದನಾ ಯಾತ್ರೆ ಆರಂಭಿಸಲಾಗುವುದು. ಒಂದು ಲಕ್ಷ ಜನರನ್ನು ಸಂಘಟಿಸಿ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಶಿಕ್ಷಣ ಸಚಿವರನ್ನು ವಜಾಗೊಳಿಸಿ:

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಜೈನ ಸಾಧು-ಸಂತರಿಗೆ ಸ್ಥಳೀಯ ಶಾಲೆಗಳಲ್ಲಿ ರಾತ್ರಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರೂ ಸಚಿವರಿಂದ ಸ್ಪಂದನೆ ಸಿಕ್ಕಿಲ್ಲ. ಇಂತಹ ಮನವಿಗೂ ಸ್ಪಂದಿಸದ ಸಚಿವರು ಆ ಸ್ಥಾನದಲ್ಲಿರುವುದೇಕೆ?. ಅವರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬೇಡಿಕೆಗಳು ಏನು?

- ಜೈನ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು

- ಜೈನ ಸಾಧು-ಸಂತರಿಗೆ ಸರ್ಕಾರ ರಕ್ಷಣೆ ನೀಡಬೇಕು

- ಬಡ ಜೈನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ಕಟ್ಟಿಸಿ

- ಶ್ರೀಗಳಿಗೆ ಶಾಲೆಗಳಲ್ಲಿ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಬೇಕು

- ಬೇಡಿಕೆಗೆ ಸ್ಪಂದಿಸದ ಸಚಿವ ಮಧು ವಜಾ ಮಾಡಬೇಕು

- ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.4ರಿಂದ ಪಾದಯಾತ್ರೆ