ಕನ್ನಡಪ್ರಭ ವಾರ್ತೆ ಕಾಗವಾಡಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಜೈನ ಸಮಾಜದ ವಿವಿಧ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರಕ್ಕೆ 10 ದಿನಗಳ ಕಾಲಮಿತಿ ಗಡುವು ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಸರ್ಕಾರದಿಂದ ಲಿಖಿತ ಭರವಸೆ ಸಿಗದಿದ್ದಲ್ಲಿ, ಬೃಹತ್ ಪಾದಯಾತ್ರೆ ನಡೆಸಿ ಬೆಳಗಾವಿಯ ಸುವರ್ಣಸೌಧದ ಎದುರು ’ಸಲ್ಲೇಖನ ವ್ರತ’ ಕೈಗೊಳ್ಳುವ ಮೂಲಕ ದೇಹತ್ಯಾಗ ಮಾಡುವುದಾಗಿ ವರೂರು ನವಗ್ರಹ ತೀರ್ಥಕ್ಷೇತ್ರದ ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಕಾಗವಾಡ
ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಜೈನ ಸಮಾಜದ ವಿವಿಧ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರಕ್ಕೆ 10 ದಿನಗಳ ಕಾಲಮಿತಿ ಗಡುವು ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಸರ್ಕಾರದಿಂದ ಲಿಖಿತ ಭರವಸೆ ಸಿಗದಿದ್ದಲ್ಲಿ, ಬೃಹತ್ ಪಾದಯಾತ್ರೆ ನಡೆಸಿ ಬೆಳಗಾವಿಯ ಸುವರ್ಣಸೌಧದ ಎದುರು ’ಸಲ್ಲೇಖನ ವ್ರತ’ ಕೈಗೊಳ್ಳುವ ಮೂಲಕ ದೇಹತ್ಯಾಗ ಮಾಡುವುದಾಗಿ ವರೂರು ನವಗ್ರಹ ತೀರ್ಥಕ್ಷೇತ್ರದ ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಮುನಿಗಳು, ಕಳೆದ ಮೂರು ವರ್ಷಗಳಿಂದ ಸರ್ಕಾರದ ಗಮನ ಸೆಳೆಯುತ್ತಿದ್ದರೂ ಬೇಡಿಕೆಗಳು ಈಡೇರಿಲ್ಲ. ಧಾರ್ಮಿಕ ಪರಂಪರೆ ಮತ್ತು ಸಮಾಜದ ಹಿತಾಸಕ್ತಿ ರಕ್ಷಣೆಯ ವಿಷಯದಲ್ಲಿ ಇನ್ನು ಕಾಯಲು ಸಾಧ್ಯವಿಲ್ಲ. ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಬೆಳಗಾವಿ ಜಿಲ್ಲೆಯ ಬಸ್ತವಾಡದಲ್ಲಿ ಏರ್ಪಡಿಸಿದ ಜೈನ ಸಮಾವೇಶದಲ್ಲಿ ಅಂದಿನ ಉಪಮುಖ್ಯಮಂತ್ರಿ ಹಾಗೂ ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸಭೆಗೆ ಬಂದು ಆಶ್ವಾಸನೆ ನೀಡಿದ್ದರು. ಆದರೆ ಮುರು ವರ್ಷ ಕಳೆದರೂ ಇನ್ನೂ ಜೈನ ನಿಗಮ ಮಂಡಳಿಯ ಭರವಸೆ ಈಡೇರಿಲ್ಲ. ಆದ್ದರಿಂದ ಸಮಾಜದ ಹಿತದೃಷ್ಟಿಯಿಂದ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮುನಿಗಳು ತಿಳಿಸಿದರು.
ಐದು ಪ್ರಮುಖ ಬೇಡಿಕೆಗಳು:ಸ್ವತಂತ್ರ ಜೈನ ಅಭಿವೃದ್ಧಿ ನಿಗಮವನ್ನು ತಕ್ಷಣವೇ ಸ್ಥಾಪಿಸಬೇಕು. ಸಾಧು-ಸಾಧ್ವಿಯರ ಸುರಕ್ಷತೆ ಮಾಡಬೇಕು. ಊರಿನಿಂದ ಊರಿಗೆ ಕಾಲ್ನಡಿಗೆಯಲ್ಲಿ (ವಿಹಾರ) ಸಂಚರಿಸುವ ಜೈನ ಸಾಧು ಮತ್ತು ಸಾಧ್ವಿಯರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಧಾರ್ಮಿಕ ಸಂಸ್ಥೆಗಳ ರಕ್ಷಣೆಗೆ ಒತ್ತು ನೀಡಬೇಕು. ಜೈನ ತೀರ್ಥಕ್ಷೇತ್ರಗಳು ಹಾಗೂ ಧಾರ್ಮಿಕ ಸಂಸ್ಥೆಗಳ ಸಂರಕ್ಷಣೆಗೆ ವಿಶೇಷ ನಿಯಮ/ಯೋಜನೆ ರೂಪಿಸಬೇಕು. ಇದರ ಜೊತೆಗೆ ಉಚಿತ ಸಮ್ಮೇದ ಶಿಖರ್ಜಿ ಯಾತ್ರೆಗೆ ಅವಕಾಶ ಕಲ್ಪಿಸಬೇಕು. ಸಮಾಜದ ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ಶ್ರಾವಕರಿಗೆ ಉಚಿತವಾಗಿ ಶ್ರೀ ಸಮ್ಮೇದ ಶಿಖರ್ಜಿ ವಾರ್ಷಿಕ ತೀರ್ಥಯಾತ್ರೆ ಕೈಗೊಳ್ಳಲು ವ್ಯವಸ್ಥೆ ಮಾಡಬೇಕು. ವಿಶ್ರಾಂತಿಗೆ ವ್ಯವಸ್ಥೆ ಮಾಡಬೇಕು. ಅಂದರೆ ಸಾಧು-ಸಾಧ್ವಿಯರ ರಾತ್ರಿ ವಿಶ್ರಾಂತಿಗೆ ಮಾರ್ಗಮಧ್ಯದ ಗ್ರಾಮ/ನಗರಗಳಲ್ಲಿರುವ ಸರ್ಕಾರಿ ಶಾಲೆ ಅಥವಾ ಕಟ್ಟಡಗಳಲ್ಲಿ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
10 ದಿನಗಳ ಗಡುವು:ಸರ್ಕಾರ ಉನ್ನತ ಮಟ್ಟದ ಸಭೆ ನಡೆಸಿ, ಅಧಿಕಾರಿಗಳು ಹಾಗೂ ಸಮಾಜದ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಬೇಕು. ನಂತರ ಮುಂದಿನ 10 ದಿನಗಳೊಳಗೆ ಲಿಖಿತ ಭರವಸೆ ನೀಡಬೇಕು. ಇಲ್ಲದಿದ್ದರೆ ನ.10 ರಂದು ವರೂರದಿಂದ ಪಾದಯಾತ್ರೆ ಆರಂಭ ಮಾಡಲಾಗುತ್ತದೆ. ಒಂದು ವೇಳೆ ರಾಜ್ಯ ಸರ್ಕಾರ ಇದಕ್ಕೂ ಸ್ಪಂದಿಸದಿದ್ದರೆ ನವೆಂಬರ್ 10ರಂದು ವರೂರಿನಿಂದ ಚಿಕ್ಕೋಡಿಗೆ ಪಾದಯಾತ್ರೆ ಕೈಗೊಳ್ಳಲಾಗುವುದು ಎಂದು ಮುನಿಗಳು ಎಚ್ಚರಿಕೆ ನೀಡಿದ್ದಾರೆ.
ಇದರ ಜತೆಗೆ ಜೈಲ ಸಮುದಾಯ ಹೆಚ್ಚಿರುವ ಪ್ರದೇಶಗಳಾದ ಜಮಖಂಡಿ, ತೇರದಾಳ, ಕಾಗವಾಡ, ಅಥಣಿ, ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ಹಾಗೂ ಬೆಳಗಾವಿ ಭಾಗಗಳ ಶಾಸಕರ ಮನೆಗಳಿಗೆ ತೆರಳಿ ಮನವಿ ಸಲ್ಲಿಸಲಾಗುವುದು. ಇವೆಲ್ಲದರ ನಡುವೆ ನವೆಂಬರ್ 30ರಂದು ಚಿಕ್ಕೋಡಿಯಿಂದ ಬೆಳಗಾವಿ ಸುವರ್ಣಸೌಧದವರೆಗೆ ಬೃಹತ್ ಪಾದಯಾತ್ರೆ ನಡೆಸಿ ಸತ್ಯಾಗ್ರಹ ಆರಂಭಿಸಲಾಗುವು ಎಂದು ಮುನಿಗಳು ಹೇಳಿದ್ದಾರೆ.ಸಲ್ಲೇಖನ ವ್ರತ, ದೇಹತ್ಯಾಗ:
ನವೆಂಬರ್ ಹೋರಾಟದ ಬಳಿಕವೂ ಸರ್ಕಾರ ಸ್ಪಂದಿಸದಿದ್ದರೆ, ಡಿಸೆಂಬರ್ನಲ್ಲಿ ಅನ್ನ-ನೀರು ತ್ಯಜಿಸಿ ಸುವರ್ಣಸೌಧದ ಎದುರು ಸಲ್ಲೇಖನ ವ್ರತ ಕೈಗೊಂಡು ದೇಹತ್ಯಾಗ ಮಾಡಲಾಗುವುದು. ಒಂದು ವೇಳೆ ಪೊಲೀಸರು ಪಾದಯಾತ್ರೆಯನ್ನು ಮಾರ್ಗಮಧ್ಯದಲ್ಲೇ ತಡೆದರೆ, ಯಾವ ಸ್ಥಳದಲ್ಲಿ ತಡೆಯುತ್ತಾರೋ ಅದೇ ಜಾಗದಲ್ಲೇ ತಕ್ಷಣದಿಂದ ಸಲ್ಲೇಖನ ವ್ರತ ಆರಂಭಿಸುವುದಾಗಿ ಮುನಿಗಳು ತಿಳಿಸಿದ್ದಾರೆ. ಈ ಹೋರಾಟ ಸಂಪೂರ್ಣ ಅಹಿಂಸಾತ್ಮಕವಾಗಿರಲಿದೆ. ಯಾವುದೇ ರಾಜಕೀಯ ಪಕ್ಷ ಅಥವಾ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.