ಕನ್ನಡಪ್ರಭ ವಾರ್ತೆ, ತುಮಕೂರು
ಶಾಂತಿ, ಅಹಿಂಸೆ ಸಾರುವ ಜೈನ ಸಮಾಜವು ತ್ಯಾಗ ಮತ್ತು ಸೇವೆಗೆ ಹೆಸರಾಗಿದೆ. ಮುನಿಗಳು ತ್ಯಾಗ ಮಾಡಿದರೆ, ಜೈನ ಸಮಾಜದವರು ಸೇವಾಕಾರ್ಯ ಮಾಡುತ್ತಾರೆ. ಈ ಗುರು-ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.ನಗರದ ಗಾಜಿನಮನೆಯಲ್ಲಿ ಭಾನುವಾರ ಏರ್ಪಾಟಾಗಿದ್ದ ಆಚಾರ್ಯ ಶ್ರೀ 108 ಪ್ರಮುಖ್ ಸಾಗರ್ಜೀ ಮಹಾರಾಜರವರ ಹಾಗೂ ಸಂಘದ 31ನೇ ಪುಷ್ಪ ಪ್ರಮುಖ್ ವರ್ಷಾಯೋಗದ ಅಂಗವಾಗಿ ಭವ್ಯಜಿನೇಶ್ವರಿ ಜಿನದೀಕ್ಷಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರಿನಲ್ಲಿ ಇದೇ ಮೊದಲ ಬಾರಿಗೆ ಜೈನ ಸಮಾಜದ ಮುನಿದೀಕ್ಷಾ ಕಾರ್ಯಕ್ರಮ ನಡೆಯುತ್ತಿದೆ. ಇದೊಂದು ಸುವರ್ಣಾಕ್ಷರಗಳಿಂದ ಬರೆಯುವ ಕಾರ್ಯಕ್ರಮ ಎಂದು ಅಭಿನಂದಿಸಿರು.
ತಮ್ಮ ಸಂದೇಶಗಳ ಮೂಲಕ ಸಮಾಜಕ್ಕೆ ಬೆಳಕು ನೀಡುತ್ತಿರುವ ಆಚಾರ್ಯ ಪ್ರಮುಖ್ ಸಾಗರ್ಜೀ ಅವರು ಮಹಾದೀಪ, ಮುನಿಗಳು ತುಮಕೂರಿನಲ್ಲಿ ಚಾತುರ್ಮಾಸ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಾರೆ. ಇದರ ಅಂಗವಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಿದ್ಧಗಂಗಾ ಮಠಕ್ಕೂ ಜೈನ ಸಮುದಾಯಕ್ಕೂ ಹಿಂದಿನಿಂದಲೂ ಉತ್ತಮ ಬಾಂಧವ್ಯವಿದೆ. ಈ ದೀಕ್ಷಾಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಸಿದ್ಧಲಿಂಗ ಸ್ವಾಮೀಜಿ ಹಾರೈಸಿದರು.ಈ ವೇಳೆ ಆಚಾರ್ಯಶ್ರೀ 108 ಪ್ರಮುಖ್ ಸಾಗರ್ ಮಹಾರಾಜರ 26ನೇ ಮುನಿದೀಕ್ಷಾ ಮಹೋತ್ಸವ ನೆರವೇರಿತು. ಅಲ್ಲದೆ, ಆಚಾರ್ಯ ಪ್ರಮುಖ್ ಸಾಗರ್ ಜೀ ಅವರ ದಿವ್ಯ ನೇತೃತ್ವದಲ್ಲಿ ಜೈನಧರ್ಮದ ಮುನಿದೀಕ್ಷಾ ಕಾರ್ಯಕ್ರಮ ನಡೆಯಿತು. ದರ್ಶನ್ ಹಾಗೂ ರಚನಾ ದೀದಿ ಅವರು ಸನ್ಯಾಸತ್ವ ಸ್ವೀಕಾರ ಮಾಡಿದರು. ಪ್ರಮುಖ್ ಸಾಗರ್ಜಿ ಅವರು ಧಾರ್ಮಿಕ ವಿಧಿವಿಧಾನಗಳೊಂದಿಗೆ ದೀಕ್ಷಾ ಕಾರ್ಯಕ್ರಮ ನೆರವೇರಿಸಿದರು.
ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮುನಿಗಳ ಭಾವಚಿತ್ರ ಅನಾವರಣಗೊಳಿಸಿದರು. ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಭಾಗವಹಿಸಿದ್ದರು. ದಿಗಂಬರ ಜೈನಶ್ರೀ ಪಾರ್ಶ್ವನಾಥಸ್ವಾಮಿ ಜಿನಮಂದಿರ ಅಧ್ಯಕ್ಷ ಟಿ.ಡಿ. ಬಾಹುಬಲಿ ಬಾಬು ಅಧ್ಯಕ್ಷತೆ ವಹಿಸಿದ್ದರು. ಇದರ ಪ್ರಯುಕ್ತ 26 ಕುಟುಂಬಗಳಿಂದ ಪಾದಪ್ರಕ್ಷಾಲನೆ, 26 ಕುಟುಂಬಗಳಿಂದ ಶಾಸ್ತ್ರದಾನ, 26 ಕುಟುಂಬಗಳಿಂದ ಪಾದ ಪೂಜೆ, 26 ಕುಟುಂಬಗಳಿಂದ ಆರತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜೈನ ಸಮಾಜದ ಮುಖಂಡರಾದ ಆರ್.ಎ. ಸುರೇಶ್ಕುಮಾರ್, ಎನ್.ಡಿ. ವಿನಯ್ಜೈನ್, ಶುಭೋದ್ ಕುಮಾರ್ ಜೈನ್, ಬಿ.ಎಲ್. ಚಂದ್ರಕೀರ್ತಿ, ಎನ್.ಡಿ. ವಿನಯ್ ಜೈನ್, ಬಿ.ಎಸ್. ಪಾರ್ಶ್ವನಾಥ್, ಟಿ.ಎನ್. ಜಿನೇಶ್, ಬ್ರಹ್ಮ ಪ್ರಕಾಶ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.