ದೀಪಾವಳಿ ಹಬ್ಬದ ಆಚರಣೆ ಹಿನ್ನೆಲೆ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಹಾನಿ ಆಗದಂತೆ ಸರ್ಕಾರದ ನಿಯಮಗಳನ್ನು ಪಟಾಕಿ ಅಂಗಡಿ ಮಾಲೀಕರು ಕಡ್ಡಾಯವಾಗಿ ಪಾಲಿಸಬೇಕು ಎಂದು ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.

- ಎಸಿ ಸಂತೋಷ್‌ಕುಮಾರ್‌ ಅಧ್ಯಕ್ಷತೆಯಲ್ಲಿ ವರ್ತಕರೊಂದಿಗೆ ಪೂರ್ವಸಿದ್ಧತಾ ಸಭೆ । ಸುರಕ್ಷತಾ ಕ್ರಮ ಕೈಗೊಳ್ಳಲು ತಾಕೀತು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದೀಪಾವಳಿ ಹಬ್ಬದ ಆಚರಣೆ ಹಿನ್ನೆಲೆ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಹಾನಿ ಆಗದಂತೆ ಸರ್ಕಾರದ ನಿಯಮಗಳನ್ನು ಪಟಾಕಿ ಅಂಗಡಿ ಮಾಲೀಕರು ಕಡ್ಡಾಯವಾಗಿ ಪಾಲಿಸಬೇಕು ಎಂದು ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ತಿಳಿಸಿದರು.

ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಪಟಾಕಿ ಮಾರಾಟ ಮಾಡಲು ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮದ ಬಗ್ಗೆ ಏರ್ಪಡಿಸಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಿಯಮಗಳ ಪ್ರಕಾರ, ಪಟಾಕಿ ಅಂಗಡಿಗಳು ಮತ್ತು ಘಟಕಗಳನ್ನು ತೆರೆಯಲು ಜಿಲ್ಲಾಧಿಕಾರಿ ಅವರಿಂದ ಪರವಾನಗಿ ಕಡ್ಡಾಯ ಪಡೆಯಬೇಕು. ದಾವಣಗೆರೆ, ಹರಿಹರ, ಮಾಯಕೊಂಡ ಮತ್ತು ಜಗಳೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಿಯಮಾನುಸಾರ ಅರ್ಜಿಗಳನ್ನು ಪರಿಶೀಲಿಸಿ ಲೈಸೆನ್ಸ್ ವಿತರಿಸಲಾಗುವುದು ಎಂದರು.

ನಗರದ ಎಂ.ಸಿ.ಸಿ. ಬಿ ಬ್ಲಾಕ್‌ನಲ್ಲಿರುವ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಸುರಕ್ಷತಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸುಪ್ರೀಂ ಕೋರ್ಟ್ ಆದೇಶ ಹಾಗೂ ಸ್ಫೋಟಕ ನಿಯಮಗಳ ಅಡಿಯಲ್ಲಿ ಕೇವಲ ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅನುಮತಿ ಇದೆ. ಬೇರೆ ವಿಧದ ಅನಧಿಕೃತ ಪಟಾಕಿಗಳ ಮಾರಾಟ ನಿಷೇಧಿಸಲಾಗಿದೆ. ನಿಯಮ ಮೀರಿ ಮಾರಾಟ ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಡ್ಡಾಯ ಪಾಲನೆ ನಿಯಮಗಳು:

ಪ್ರತಿ ಪಟಾಕಿ ಮಳಿಗೆಯು 10*10 ಅಡಿಗೆ ಸೀಮಿತವಾಗಿರಬೇಕು. 2 ಮಳಿಗೆಗಳ ನಡುವೆ ಕನಿಷ್ಠ 10 ಅಡಿ (3 ಮೀಟರ್) ಅಂತರ ಇರಬೇಕು. ಯಾವುದೇ ಹೆಚ್ಚಿನ ದಾಸ್ತಾನಿನ ವ್ಯವಸ್ಥೆ ಇರಬಾರದು. ಯಾವುದೇ ಮಳಿಗೆ ಮತ್ತೊಂದು ಮಳಿಗೆಗೆ ಮುಖ ಮಾಡಿರಬಾರದು. ಪ್ರತಿ ಮಳಿಗೆಯಲ್ಲಿ ಹಿಂಭಾಗ ಮತ್ತು ಮುಂಭಾಗ ಎರಡು ಕಡೆಯಿಂದ ಸರಾಗವಾಗಿ ಗಾಳಿ ಆಡುವಂತಿರಬೇಕು. ಮಳಿಗೆಗಳನ್ನು ನಿರ್ಮಿಸುವಾಗ ಸುಲಭವಾಗಿ ಬೆಂಕಿಗೆ ಸುಡುವ ವಸ್ತುಗಳನ್ನು ಬಳಸದೇ, ಬದಲಾಗಿ ಬೆಂಕಿಯನ್ನು ತಡೆಯುವ ಜಿಂಕ್ ಶೀಟುಗಳನ್ನು ಬಳಸಿ ನಿರ್ಮಿಸಬೇಕು. ಮಳಿಗೆಯ ಒಳಗೆ ಯಾವುದೇ ವಿದ್ಯುತ್ ದೀಪಗಳ ವ್ಯವಸ್ಥೆ ಇರಬಾರದು. ಪ್ರತಿ ಮಳಿಗೆಗೆ ಮುಂದಿನಿಂದ ಹಾಗೂ ಹಿಂದಿನಿಂದ ಪ್ರವೇಶಿಸುವ ವ್ಯವಸ್ಥೆ ಇರಬೇಕು. ತಾತ್ಕಾಲಿಕ ಪಟಾಕಿ ಮಳಿಗೆ ನಿರ್ಮಿಸಲಿರುವ ಜಾಗದಲ್ಲಿ ತುರ್ತು ಸಂದರ್ಭದಲ್ಲಿ ಅಗ್ನಿಶಾಮಕ ವಾಹನ ಪ್ರವೇಶಿಸಲು ನಿರ್ದಿಷ್ಟ ಪ್ರವೇಶ ದ್ವಾರಕ್ಕೆ ಸ್ಥಳ ಅವಕಾಶ ಹೊರತುಪಡಿಸಿ, ಮಳಿಗೆಗಳನ್ನು ನಿರ್ಮಿಸುವುದು, 5 ಮಳಿಗೆ ನಂತರ 7 ಮೀಟರ್ ಖಾಲಿ ಜಾಗ ಬಿಟ್ಟಿರಬೇಕು.

ಪ್ರತಿ ಮಳಿಗೆಯಲ್ಲಿರಲಿ ಅಗ್ನಿಶಮನ ಉಪಕರಣಗಳು:

ಪ್ರತಿ ಮಳಿಗೆಯಲ್ಲಿ 9 ಲೀಟರ್ ಸಾಮರ್ಥ್ಯದ ವಾಟರ್ ಪ್ರೆಷರ್ ಮಾದರಿಯ ಅಥವಾ ಎ.ಬಿ.ಸಿ. ಮಾದರಿಯ 2 ಅಗ್ನಿಶಾಮಕಗಳು, ಮರಳು ತುಂಬಿದ 4 ಬಕೆಟುಗಳು ಹಾಗೂ ನೀರು ತುಂಬಿದ 4 ಬಕೆಟುಗಳನ್ನು ಕಡ್ಡಾಯವಾಗಿ ಇಡಬೇಕು. ಅಲ್ಲದೆ, ಮಳಿಗೆಯ ಮುಂಭಾಗದಲ್ಲಿ 2 ಡ್ರಮ್‌ಗಳಲ್ಲಿ ಕನಿಷ್ಠ 400 ಲೀಟರ್ ನೀರನ್ನು ಶೇಖರಿಸಿಡಬೇಕು. ಮಳಿಗೆಗಳಲ್ಲಿ ಅಡುಗೆ ಅಥವಾ ಧೂಮಪಾನ ಮಾಡಲು ಅವಕಾಶ ನೀಡಬಾರದು ಹಾಗೂ ಧೂಮಪಾನ ನಿಷೇಧ ಸೂಚನಾ ಫಲಕವನ್ನು ಕಡ್ಡಾಯವಾಗಿ ಹಾಕಿರಬೇಕು. ಯಾವುದೇ ಕಾರಣಕ್ಕೂ ಮಳಿಗೆಗಳಲ್ಲಿ ರಾಸಾಯನಿಕ ವಸ್ತುಗಳು ಹಾಗೂ ಎಲ್.ಪಿ.ಜಿ. ಸಿಲಿಂಡರ್‌ಗಳನ್ನು ಶೇಖರಿಸಬಾರದು. ಪಟಾಕಿಗಳನ್ನು ಹಗಲಿನ ವೇಳೆಯಲ್ಲಿ ಮಾತ್ರ ಮಾರಾಟ ಮಾಡತಕ್ಕದ್ದು. ಈ ನಿಯಮಗಳನ್ನು ಹಾಗೂ ಎಚ್ಚರಿಕೆ ಕ್ರಮಗಳನ್ನು ಪಟಾಕಿ ವ್ಯಾಪಾರಿಗಳು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಮೀರಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಟಾಕಿ ವ್ಯಾಪಾರ ಸಂಘದವರು ಉಪಸ್ಥಿತರಿದ್ದರು.

- - -

-31ಕೆಡಿವಿಜಿ35:

ದಾವಣಗೆರೆಯಲ್ಲಿ ಎಸಿ ಸಂತೋಷ್ ಕುಮಾರ್ ಅಧ್ಯಕ್ಷತೆಯಲ್ಲಿ ಪಟಾಕಿ ಮಾರಾಟದ ಮುಂಜಾಗ್ರತೆ ಕ್ರಮಗಳ ಕುರಿತು ವರ್ತಕರೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಕಡ್ಡಾಯ ಸೂಚನೆಗಳನ್ನು ತಿಳಿಸಲಾಯಿತು.