ರಾಜ್ಯ ಸರ್ಕಾರದ ನಿಗಮ ಮಂಡಳಿ ನೇಮಕಾತಿ ನವಲಗುಂದ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಕಿಡಿ ಹೊತ್ತಿಸಿದೆ.

ನವಲಗುಂದ:

ರಾಜ್ಯ ಸರ್ಕಾರದ ನಿಗಮ ಮಂಡಳಿ ನೇಮಕಾತಿ ನವಲಗುಂದ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಕಿಡಿ ಹೊತ್ತಿಸಿದೆ.

ಮೂವರು ಮುಖಂಡರಿಗೆ ನಿರ್ದೇಶಕ ಸ್ಥಾನ ಸಿಕ್ಕಿರುವುದು ಬೆಂಬಲಿಗರಲ್ಲಿ ಸಂಭ್ರಮ ಮೂಡಿಸಿದ್ದರೆ, ದಶಕಗಳಿಂದ ಪಕ್ಷಕ್ಕಾಗಿ ದುಡಿದ ಹಿರಿಯ ಕಾರ್ಯಕರ್ತರಿಗೆ ಅವಕಾಶ ಕೈತಪ್ಪಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಲಿಂಗಾಯತ, ಕುರುಬ, ದಲಿತ ಹಾಗೂ ಒಕ್ಕಲಿಗ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗದಿರುವುದು ಶಾಸಕ ಎನ್.ಎಚ್. ಕೋನರಡ್ಡಿ ಅವರಿಗೆ ರಾಜಕೀಯ ಸವಾಲಾಗಿ ಪರಿಣಮಿಸಿದೆ.

ಸರ್ಕಾರದ ಪಟ್ಟಿಯಲ್ಲಿ ಕ್ಷೇತ್ರದ ಮೂವರಿಗೆ ಸ್ಥಾನ ಲಭಿಸಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕರಾಗಿ ಪುರಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಉಸ್ಮಾನಸಾಬ ಬಬರ್ಚಿ, ಮಲಪ್ರಭಾ ಮತ್ತು ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಕಾಡಾ) ನಿರ್ದೇಶಕರಾಗಿ ಜಿಪಂ ಮಾಜಿ ಅಧ್ಯಕ್ಷೆ, ಹಣಸಿ ಗ್ರಾಮದ ಶಾಂತವ್ವ ಗುಜ್ಜಳ ಹಾಗೂ ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ನಿರ್ದೇಶಕರಾಗಿ ಸುಲೇಮಾನ್ ನಾಸಿಪುಡಿ ನೇಮಕಗೊಂಡಿದ್ದಾರೆ.

ನಿಷ್ಠಾವಂತರಿಗೆ ನಿರಾಸೆ:

ನಿಗಮ ಮಂಡಳಿ ಸ್ಥಾನಗಳ ನಿರೀಕ್ಷೆಯಲ್ಲಿದ್ದ ಹಲವು ಹಿರಿಯ ಕಾರ್ಯಕರ್ತರಿಗೆ ಅವಕಾಶ ಸಿಗದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಷ ಸಂಘಟನೆ, ಚುನಾವಣೆ ಹಾಗೂ ಹೋರಾಟಗಳಲ್ಲಿ ದಶಕಗಳಿಂದ ತೊಡಗಿಸಿಕೊಂಡಿದ್ದರೂ ತಮ್ಮನ್ನು ಕಡೆಗಣಿಸಲಾಗಿದೆ ಎಂಬ ನೋವು ಅವರಲ್ಲಿದೆ. ಸದ್ಯ ಬಹಿರಂಗವಾಗಿ ಮಾತನಾಡದಿದ್ದರೂ ಪಕ್ಷದ ವೇದಿಕೆಯಲ್ಲಿ ಅಸಮಾಧಾನ ಹೊರಹಾಕಲು ಸಜ್ಜಾಗಿದ್ದಾರೆ.

ಕ್ಷೇತ್ರದ ಪ್ರಬಲ ಸಮುದಾಯಗಳಾದ ಲಿಂಗಾಯತ, ಕುರುಬ, ದಲಿತ ಹಾಗೂ ಒಕ್ಕಲಿಗ ಮುಖಂಡರಿಗೆ ಸ್ಥಾನ ಕಲ್ಪಿಸದಿರುವುದೂ ಆಕ್ರೋಶ ಹೆಚ್ಚಿಸಿದೆ. ಈಗಾಗಲೇ ವಿವಿಧ ಅಧಿಕಾರ ಅನುಭವಿಸಿದವರಿಗೇ ಮತ್ತೆ ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಾಮಾಜಿಕ ಪ್ರಾತಿನಿಧ್ಯಕ್ಕೆ ಆದ್ಯತೆ ನೀಡಿಲ್ಲ ಎಂಬ ಅಸಮಾಧಾನವೂ ಪಕ್ಷದೊಳಗೆ ವ್ಯಕ್ತವಾಗುತ್ತಿದೆ.

ಸಿಕ್ಕ ಸ್ಥಾನದಲ್ಲೂ ಸಮಾಧಾನವಿಲ್ಲ:

ನೇಮಕಗೊಂಡವರ ಪೈಕಿ ಕೆಲವರಿಗೆ ತಮಗೆ ಲಭಿಸಿದ ನಿಗಮಕ್ಕಿಂತ ಬೇರೆ ನಿಗಮದಲ್ಲಿ ಪ್ರಮುಖ ಸ್ಥಾನ ಸಿಗಬೇಕಿತ್ತು ಎಂಬ ನಿರೀಕ್ಷೆಯಿತ್ತು ಎನ್ನಲಾಗಿದೆ. ಹೀಗಾಗಿ ನೇಮಕಾತಿ ಪಟ್ಟಿಯಲ್ಲೂ ಅತೃಪ್ತಿಯ ಮಾತುಗಳು ಕೇಳಿಬರುತ್ತಿವೆ. ಆದರೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ಸ್ಥಾನ ದೊರೆತಿರುವುದು ಸಮಾಧಾನ ತಂದಿದೆ ಎಂದು ಉಸ್ಮಾನಸಾಬ ಬಬರ್ಚಿ ತಿಳಿಸಿದ್ದಾರೆ.

ಮೂವರಿಗೆ ಸ್ಥಾನ ಸಿಕ್ಕಿದ್ದರೂ ಅವಕಾಶ ವಂಚಿತರ ಅಸಮಾಧಾನವೇ ಕ್ಷೇತ್ರ ಕಾಂಗ್ರೆಸ್‌ನಲ್ಲಿ ಮುನ್ನೆಲೆಗೆ ಬಂದಿದೆ. ಮುಂದಿನ ಪಟ್ಟಿಯಲ್ಲಿ ನಿಷ್ಠಾವಂತ ಕಾರ್ಯಕರ್ತರು ಹಾಗೂ ವಿವಿಧ ಸಮುದಾಯಗಳ ಮುಖಂಡರಿಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆಯಿದೆ. ಈ ಅಸಮಾಧಾನವನ್ನು ಶಾಸಕ ಕೋನರಡ್ಡಿ ಹೇಗೆ ಶಮನಗೊಳಿಸುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.

ನವಲಗುಂದ ಕ್ಷೇತ್ರದ ಕಾರ್ಯಕರ್ತರಿಗೆ ಈಗಾಗಲೇ ಮೂರು ಸ್ಥಾನಗಳು ಲಭಿಸಿವೆ. ಇನ್ನೂ ಅನೇಕರ ಹೆಸರನ್ನು ಶಿಫಾರಸು ಮಾಡಲಾಗಿದೆ. ಮುಂದಿನ ಪಟ್ಟಿಯಲ್ಲಿ ಅವರಿಗೂ ಸ್ಥಾನ ಸಿಗುವ ಆಶಾಭಾವನೆ ಇದೆ.

ಎನ್.ಎಚ್. ಕೋನರಡ್ಡಿ, ಶಾಸಕ

ಕಳೆದ 52 ವರ್ಷಗಳಿಂದ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ಹಲವು ದಶಕಗಳಿಂದ ಸೇವಾದಳದಲ್ಲಿಯೂ ಕೆಲಸ ಮಾಡಿದ್ದೇನೆ. ನಮ್ಮಂತಹ ಹಿರಿಯರನ್ನು ಕೈಬಿಟ್ಟಿರುವುದು ಮನಸ್ಸಿಗೆ ತುಂಬಾ ನೋವು ತಂದಿದೆ.

ವಿಜಯಗೌಡ ಪಾಟೀಲ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಉಪಾಧ್ಯಕ್ಷ