ಕನ್ನಡಪ್ರಭ ವಾರ್ತೆ ಮಂಡ್ಯ
ಸಾರಿಗೆ ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿ ಹೆಚ್ಚಿನ ವೇಗದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕಾನೂನುಬದ್ಧ ದಾಖಲೆಗಳಿಲ್ಲದೆ ಮಾರಾಟ ಮಾಡಲಾಗುತ್ತಿದೆ. ಗಂಟೆಗೆ ಸುಮಾರು ೬೦ ಕಿ.ಮೀ. ವೇಗ ಹೊಂದಿರುವ ಸ್ಕೂಟರ್‌ಗಳನ್ನು ೧,೧೧,೦೦೦ ರು. ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಈ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಕಾನೂನು ಬದ್ಧತೆ ಕುರಿತು ಸ್ಪಷ್ಟತೆ ಇಲ್ಲ. ನೋಂದಣಿ, ವಿಮೆ, ರಸ್ತೆ ಬಳಕೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಲಿವೆ. ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿ ವಾಹನಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ಜನರಿಗೆ ಜಾಗೃತಿ ಇಲ್ಲದಿರುವ ಕಾರಣ ಆರ್ಥಿಕ ನಷ್ಟ ಅನುಭವಿಸುವ ಆತಂಕ ವ್ಯಕ್ತಪಡಿಸಿದರು.ನೋಂದಾಯಿಸದ ಕಂಪನಿಯ ವಾಹನಗಳಿಗೆ ಕಾನೂನಿನಲ್ಲಿ ಅವಕಾಶವಿದ್ದರೂ ಅವುಗಳ ವೇಗಮಿತಿ ಕೇವಲ ೨೫ ಕಿ.ಮೀ.ವರೆಗೆ ಇರಬೇಕು. ಮೋಟಾರ್‌ನ ಶಕ್ತಿ ೦.೨೫ ಕಿಲೋ ವ್ಯಾಟ್‌ಗಿಂತ ಕಡಿಮೆ ಇರಬೇಕು. ಲೋಡ್ ಮಾಡದ ತೂಕ ೬೦ ಕೆ.ಜಿ.ಗಿಂತ ಕಡಿಮೆ ಇರಬೇಕು. ಎಐಎಸ್ ಮಾನದಂಡಗಳಿಗೆ ಅನುಗುಣವಾದ ಪರೀಕ್ಷೆ ಮತ್ತು ರೂಲ್ ೧೨೬ರ ಪ್ರಕಾರ ಪರೀಕ್ಷಾ ಸಂಸ್ಥೆಯಿಂದ ಪ್ರಮಾಣೀಕರಣ ಪಡೆದಿರಬೇಕು. ಅಂತಹ ವಾಹನಗಳಿಗೆ ನಂಬರ್ ಪ್ಲೇಟ್, ಹೆಲ್ಮೆಟ್, ವಿಮೆ, ವಾಹನ ಚಾಲನೆ ಪರವಾನಗಿ ಅಗತ್ಯವಿರುವುದಿಲ್ಲ ಎಂದರು.
ಸರಪಳಿ ಕಮಿಷನ್ ಆಧಾರಿತ ಯೋಜನೆಗಳ ಮೂಲಕ ಷೋರೂಂನವರು ಜನರನ್ನು ಆಕರ್ಷಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ಷೋಂರೂಂನಿಂದ ಒಂದು ಎಲೆಕ್ಟ್ರಿಕ್ ವಾಹನ ಮಾರಾಟ ಮಾಡಿಸಿದರೆ ಆತನಿಗೆ ೧೦ ಸಾವಿರ ರು. ಕಮಿಷನ್ ನೀಡುತ್ತಿದ್ದಾರೆ. ಅದನ್ನು ಚೈನ್‌ಲಿಂಕ್‌ಗೆ ಪರಿವರ್ತಿಸಿ ಜನರನ್ನು ಎಲೆಕ್ಟ್ರಿಕ್ ವಾಹನಗಳನ್ನು ಕೊಳ್ಳುವಂತೆ ಪ್ರಚೋದಿಸುತ್ತಿದ್ದಾರೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ಜಾಗೃತಿ, ಕಾನೂನಿನ ತಿಳಿವಳಿಕೆ ಇಲ್ಲದೆ ಎಷ್ಟೋ ಜನರು ಕೊಂಡು ಓಡಾಡುತ್ತಿದ್ದಾರೆ. ಈ ವಾಹನಗಳಿಗೆ ಷೋರೂಂ ಕಡೆಯಿಂದ ಯಾವುದೇ ಸರ್ವೀಸ್ ಕೂಡ ಇರುವುದಿಲ್ಲ ಎಂದರು.
ಆರ್‌ಟಿಒ ಅಧಿಕಾರಿ ಹೇಮಾವತಿ ಅವರಿಗೆ ಈ ಕುರಿತು ದೂರು ನೀಡಿದರೆ ಒಂದೆರಡು ನೋಟಿಸ್ ನೀಡಿ ಮೌನ ವಹಿಸಿದ್ದಾರೆ. ಅದರಿಂದ ಮುಂದಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಷಯವಾಗಿ ಪ್ರಶ್ನಿಸಿದರೆ ದೂರು ನೀಡಿದವರ ವಿರುದ್ಧವೇ ಕೆಂಡಾಮಂಡಲರಾಗುತ್ತಾರೆ. ಇನ್ನು ಪೊಲೀಸರಿಗೆ ದೂರು ನೀಡಲು ಹೋದರೆ ನೀನು ಗ್ರಾಹಕನೇ ಅಲ್ಲ. ನಿನ್ನಿಂದ ದೂರನ್ನು ಹೇಗೆ ಪಡೆಯುವುದು ಎಂದು ಹೇಳಿ ನಿರಾಕರಿಸುತ್ತಿದ್ದಾರೆ ಎಂದು ಅಧಿಕಾರಿಗಳ ವೈಫಲ್ಯವನ್ನು ವಿವರಿಸಿದರು.
ಕೂಡಲೇ ಮೋಟಾರು ವಾಹನಗಳ ಕಾಯ್ದೆ ೧೯೮೮ ಮತ್ತು ಗ್ರಾಹಕರ ರಕ್ಷಣೆ ಕಾಯ್ದೆ ೨೦೧೯ರ ಅಡಿ ಯಶಸ್ವಿ ಮೋಟಾರ್ಸ್ ವಿರುದ್ಧ ಕಾನೂನು ಕ್ರಮ ಕೈಗೊಂಡು ಈಗಾಗಲೇ ಮಾರಾಟ ಮಾಡಿರುವ ನಿಯಮಬಾಹೀರ ವಾಹನಗಳು ರಸ್ತೆಗಿಳಿಯದಂತೆ ಜಪ್ತಿ ಮಾಡಿ ಹಣ ಹಿಂತಿರುಗಿಸುವಂತೆ ಒತ್ತಾಯಿಸಿದರು.