ಎಲ್.ವಿ.ನವೀನ್ ಕುಮಾರ್
ಕಾವೇರಿ ನದಿ ಪಕ್ಕದಲ್ಲೇ ಹರಿದರೂ ತಾಲೂಕಿನ ಹಮದೇವಪುರ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಸಿಗದೆ ಪರಿತಪ್ಪಿಸುತ್ತಿದ್ದು, ದೀಪ ಜನತ್ತಿಗೆಲ್ಲ ಬೆಳಕನ್ನು ಕೊಟ್ಟರೂ ತನ್ನ ಬುಡಕ್ಕೇ ಕತ್ತಲು ಎಂಬ ಮಾತಿನಂತಾಗಿದೆ.
ಗ್ರಾಮದ 5 ಮತ್ತು 6ನೇ ಬ್ಲಾಕ್ ಜನರಿಗೆ 3 ರಿಂದ 4 ದಿನಗಳಿಗೊಮ್ಮೆ ಹೊಳೆಯ ಕಚ್ಚಾ ನೀರನ್ನೇ ನೇರವಾಗಿ ಸರಬರಾಜು ಮಾಡುತ್ತಿದ್ದಾರೆ. ಕಾಲು, ಕೈ ತೊಳೆಯಲೂ ಯೋಗ್ಯವಲ್ಲದ ನೀರನ್ನೇ ನಲ್ಲಿಗಳ ಮೂಲಕ ಜನರು ಕುಡಿಯಲು ಹರಿಸುತ್ತಿದ್ದಾರೆ. ಇದರಿಂದ ಇಲ್ಲಿನ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿಗೆ ಹಾಹಾಕಾರ ಎದುರಿಸುವಂತಾಗಿದೆ.ಈ ಹಿಂದೆ ಗ್ರಾಪಂನಿಂದ ಸುಮಾರು 23 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ವರ್ಷಗಳೇ ಕಳೆದಿವೆ. ಇದನ್ನು ರಿಪೇರಿ ಮಾಡಿಸಲೂ ಸಹ ಮುಂದಾಗಿಲ್ಲ. ಈ ಘಟಕ ನಿಷ್ಕ್ರಿಯಗೊಂಡು ಬಾಗಿಲಿನ ಬೀಗದಿಂದ ಹಿಡಿದ ಎಲ್ಲಾ ವಸ್ತುಗಳು ತುಕ್ಕು ಹಿಡಿಯುತ್ತಿವೆ.
ಕುಡಿಯುವ ನೀರಿಗೆ ಗ್ರಾಮದ ಜನರು ತೊಂದರೆ ಅನುಭವಿಸುತ್ತಿರುವುದು ಒಂದೆಡೆಯಾದರೆ, ಇನ್ನು ಕೋಡಿಶೆಟ್ಟಿಪುರ, ಚನ್ನನಕೆರೆ ಗ್ರಾಮಗಳ ಜನರ ಪರಿಸ್ಥಿತಿ ಹೇಳತೀರದಾಗಿದೆ. ಇಲ್ಲಿನ ಕೊಳವೆ ಬಾವಿಗಳು ಸಂಪೂರ್ಣ ಬತ್ತಿ ಹೋಗಿರುವ ಕಾರಣ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
ತಾಲೂಕಿನಲ್ಲಿ ಒಟ್ಟಾರೆ 75 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 67 ಘಟಕಗಳನ್ನು ಗ್ರಾಪಂ ಸುಪರ್ದಿಗೆ ನೀಡಲಾಗಿದೆ. ಇನ್ನು ವಡಿಯಾಂಡಹಳ್ಳಿ, ಅಲಗೂಡು, ಕೊಡಿಯಾಲ, ನೇರಲೆಕೆರೆ ಸೇರಿದಂತೆ ಗ್ರಾಮಗಳಲ್ಲಿನ 8 ಘಟಕಗಳು ದುರಸ್ತಿಯಲ್ಲಿದ್ದು, ಸುಮಾರು 20ಕ್ಕೂ ಹೆಚ್ಚು ನೀರಿನ ಘಟಕಗಳು ಕೆಟ್ಟು ನಿಂತಿವೆ.
ಕಾವೇರಿ ನದಿಯಿಂದ ಶುದ್ಧೀಕರಿಸದೆ ನೇರವಾಗಿ ನೀರನ್ನೇ ಉಪಯೋಗಿಸುತ್ತಿರುವುದರಿಂದ ಮಹದೇವಪುರ ಗ್ರಾಮದ 5 ಮತ್ತು 6 ನೇ ಬ್ಲಾಕ್ ನ ಹಲವಾರು ಮಂದಿ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಶುದ್ಧ ಕುಡಿಯುವ ನೀರು ಪೂರೈಸಬೇಕು.
ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆಗಳು ಹೆಚ್ಚಾಗುತ್ತಿದೆ. ಗ್ರಾಮಗಳಲ್ಲಿ ಕೆಟ್ಟು ನಿಂತಿರುವ ಬೋರ್‌ವೆಲ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಕಾರ್ಯಕ್ಕೆ ಸಂಬಂಧಿಸಿದ ಅಧಿಕಾರಿಗಳು ಇನ್ನೂ ಮುಂದಾಗುತ್ತಿಲ್ಲ. ಹಲವು ಗ್ರಾಮಗಳ ಜನರು ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸುವಂತಾಗಿದೆ. ಇನ್ನಾದೂ ಅಧಿಕಾರಿಗಳು ಇತ್ತ ಗಮನ ಹರಿಸಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಬೇಕು.
ಮುಖ್ಯಾಂಶ
- ಮಹದೇವಪುರ ಗ್ರಾಮಸ್ಥರಿಗೆ ಕೈ- ಕಾಲು ತೊಳೆಯಲೂ ಯೋಗ್ಯವಲ್ಲದ ಕಚ್ಚಾ ನೀರು ಪೂರೈಕೆ- ಕಾವೇರಿ ನದಿ ಪಕ್ಕದಲ್ಲೇ ಹರಿದರೂ ಜನರಿಗೆ ಶುದ್ಧ ಕುಡಿಯುವ ನೀರಿಲ್ಲ
- ನಿಷ್ಕ್ರಿಯಗೊಂಡ ತಾಲೂಕಿನ ಬಹುತೇಕ ಕುಡಿಯುವ ನೀರಿನ ಘಟಕಗಳು- ದುರಸ್ತಿ ಮಾಡಿಸದ ಸಂಬಂಧಪಟ್ಟ ಅಧಿಕಾರಿಗಳು; ಆಕ್ರೋಶ