ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರವು ವೋಟ್ ಬ್ಯಾಂಕ್ ರಾಜಕಾರಣದ ಉದ್ದೇಶದಿಂದ ಕಾನೂನುಬಾಹಿರವಾಗಿ ಶಾಶ್ವತ ನಿವಾಸಿ ಪ್ರಮಾಣಪತ್ರ(ಪಿಆರ್‌ಸಿ) ನೀಡುತ್ತಿರುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಲಿಖಿತವಾಗಿ ದೂರು ನೀಡಿರುವ ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಖಾತೆ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ತಕ್ಷಣ ಪ್ರಮಾಣ ಪತ್ರ ವಿತರಣೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರವು ಈ ಪಿಆರ್‌ಸಿ ಪ್ರಮಾಣ ಪತ್ರ ನೀಡಲು ಮುಂದಾಗಿರುವುದರ ಉದ್ದೇಶವೇನು? ಇದರ ಹಿಂದಿನ ಷಡ್ಯಂತ್ರವೇನು ಎಂಬುದನ್ನು ಸ್ಪಷ್ಟಪಡಿಸಬೇಕು. ರಾಜ್ಯದಲ್ಲಿ ಎಸ್‌ಐಆರ್ ಆರಂಭವಾದ ನಂತರ ಈ ಪಿಆರ್‌ಸಿ ಪ್ರಮಾಣ ಪತ್ರ ನೀಡಲು ಸರ್ಕಾರ ಮುಂದಾಗಿದೆ ಎಂದು ಕಿಡಿಕಾರಿದರು.
ಸಂವಿಧಾನದ ಆರ್ಟಿಕಲ್ 14ರ ಅಡಿ ಭಾರತದಲ್ಲಿ ‘ಒಂದು ದೇಶ ಒಂದು ಪೌರತ್ವ’ ನಿಯಮವಿದೆ. ಇದಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರ ಪಿಆರ್‌ಸಿ ಪ್ರಮಾಣ ಪತ್ರ ವಿತರಣೆಗೆ ಮುಂದಾಗಿದೆ. ದೇಶದ ನಾಗರಿಕರಿಗೆ ಪೌರತ್ವ ನೀಡುವ ಅಧಿಕಾರ ಹಾಗೂ ವಿದೇಶಿಗ, ವಲಸೆ ಪ್ರಮಾಣ ಪತ್ರ ನೀಡುವ ಅಧಿಕಾರ ಇರುವುದೂ ಕೇಂದ್ರ ಸರ್ಕಾರಕ್ಕೆ ಮಾತ್ರ. ಆದರೆ, ರಾಜ್ಯ ಸರ್ಕಾರ ಈಗ ಪಿಆರ್‌ಸಿ ಪ್ರಮಾಣ ಪತ್ರ ನೀಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಆಂತರಿಕ ಭದ್ರತೆಗೆ ದೊಡ್ಡ ಸವಾಲು:
ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಹಳ್ಳ ಹಿಡಿಸಿದ ಬಳಿಕ ಈ ಸರ್ಕಾರ ಅಕ್ರಮ ವಲಸಿಗರ ರಕ್ಷಿಸಲು, ಸೌಲಭ್ಯ ನೀಡಲು, ಮತಪಟ್ಟಿಗೆ ಸೇರಿಸಲು ಈ ಶಾಶ್ವತ ನಿವಾಸಿ ಪ್ರಮಾಣ ಪತ್ರ ನೀಡಲು ಆಲೋಚಿಸಿದೆ. ಅಕ್ರಮ ವಲಸಿಗರನ್ನು ಕಾನೂನುಬದ್ಧಗೊಳಿಸಲು ಪಿಆರ್‌ಸಿ ನೀಡಲಾಗುತ್ತದೆ. ಕಂದಾಯ ಅಧಿಕಾರಿಗೂ ಪಿಆರ್‌ಸಿ ಪ್ರಮಾಣ ಪತ್ರ ನೀಡಲು ಅವಕಾಶ ನೀಡಲಾಗಿದೆ. ಎರಡು ದಿನದ ಹಿಂದೆಯಷ್ಟೇ ಈ ಪಿಆರ್‌ಸಿ ಅಧಿಸೂಚನೆ ಹೊರಬಿದ್ದಿದೆ. ಈ ಅಧಿಸೂಚನೆ ಸಂವಿಧಾನ ವಿರೋಧಿಯಾಗಿದ್ದು, ಆಂತರಿಕ ಭದ್ರತೆಗೆ ದೊಡ್ಡ ಸವಾಲು ಎಂದು ಆರೋಪಿಸಿದರು.
ವೋಟ್ ಬ್ಯಾಂಕ್ ರಾಜಕಾರಣ:
ರಾಜ್ಯ ಸರ್ಕಾರ ಈ ಪಿಆರ್‌ಸಿ ಪ್ರಮಾಣ ಪತ್ರ ನೀಡುವ ಹಿಂದಿನ ಉದ್ದೇಶ ವೋಟ್ ಬ್ಯಾಂಕ್ ರಾಜಕಾರಣ. ಎಸ್‍ಐಆರ್ ಪ್ರಕ್ರಿಯೆ ಆರಂಭವಾಗಿರುವಾಗಲೇ ಈ ಪಿಆರ್‌ಸಿ ಪ್ರಮಾಣಪತ್ರ ನೀಡಲು ಮುಂದಾಗಿರುವುದು ಏಕೆ? ಇಷ್ಟು ವರ್ಷಗಳಿಂದ ಬಾಂಗ್ಲಾದೇಶದಿಂದ ಬಂದವರಿಗೆ ಈಗ ರಾಜ್ಯದ ನಾಗರಿಕರನ್ನು ಮಾಡಲು ಹೊರಟಿದ್ದಾರೆ. ರಾಜ್ಯದ ಪ್ರಜೆಗಳ ಹಕ್ಕು ಕಸಿಯಲಿದ್ದಾರೆ. ಈ ಪಿಆರ್‌ಸಿ ಪ್ರಮಾಣ ಪತ್ರ ಪಡೆದವರು ಸರ್ಕಾರದ ಎಲ್ಲಾ ಸೌಲಭ್ಯ ಪಡೆಯಲಿದ್ದಾರೆ. ಮತ ಪಡೆಯಲು ದೇಶದ ಭದ್ರತೆಗೆ ಧಕ್ಕೆ ತರುವ ಕೆಲಸವನ್ನು ಮುಖ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೈಜ ನಿವಾಸಿಗಳ ಹಿತಬೇಕಿಲ್ಲ:
ಬೇರೆ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಅಕ್ರಮ ಬಾಂಗ್ಲಾ ವಲಸಿಗರು ಬಂದಿರುವುದನ್ನು ನಾವು ಪತ್ತೆ ಮಾಡಿದ್ದೇವೆ. ಈ ಸರ್ಕಾರಕ್ಕೆ ನಮ್ಮ ರಾಜ್ಯದ ನೈಜ ನಿವಾಸಿಗಳ ಹಿತ ಬೇಕಿಲ್ಲ. ಅಲ್ಪಸಂಖ್ಯಾತ ಮತದಾರರನ್ನು ಕಾನೂನುಬಾಹಿರವಾಗಿ ಮತಪಟ್ಟಿಗೆ ಸೇರಿಸುವ ಕೆಲಸವೂ ನಡೆಯುತ್ತಿದೆ. ಇದನ್ನೇ ವೋಟ್ ಚೋರಿ. ಕಾಂಗ್ರೆಸ್ ಅಂದರೆ ಮತಗಳ್ಳತನ ಆಗಿದೆ. ಹೀಗಾಗಿ ಇದನ್ನು ಬಿಜೆಪಿ ವಿರೋಧ ಮಾಡಿದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
50 ರುಪಾಯಿ ಪಡೆದು ಎನ್ಯುಮರೇಷನ್ ಫಾರ್ಮ್‌ಗಳನ್ನು ನೀಡಿದವರು ಮುಂದೆ ಹಣ ಪಡೆದು ಶಾಶ್ವತ ನಿವಾಸಿ ಪ್ರಮಾಣ ಪತ್ರ ನೀಡುವುದಿಲ್ಲ ಎಂಬುದನ್ನು ನಂಬಲು ಸಾಧ್ಯವೇ?
-ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
