ಅಯ್ಯೋ ರಾಮ, ಅಯ್ಯೋ ರಾಮ ಹೆಸರಿನಲ್ಲಿ ಘೋಷಣೆ ಕೂಗಿ ಆಕ್ರೋಶ

ಅಯೋಧ್ಯೆ ಹುಂಡಿ ಕಳ್ಳತನದ ಬಗ್ಗೆ ಪ್ರತಿಕ್ರಿಯಿಸುವಂತೆ ಮೋದಿಗೆ ಆಗ್ರಹ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಅಯೋಧ್ಯೆ ರಾಮ ಮಂದಿರದ ದೇಣಿಗೆ ಹಣ ಲೂಟಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.

ನಗರದ ಸತ್ತಿರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಚಾಲಕ ಎಸ್. ನಾರಾಯಣ್‌, ಜಿಲ್ಲಾಧ್ಯಕ್ಷ ಮಧುಸೂಧನ್ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು, ಮುಖಂಡರು ಪಂಜು ಹಿಡಿದು ಅಲ್ಲಿಂದ ಮೆರವಣಿಗೆ ಹೊರಟು ಸತ್ತಿರಸ್ತೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಡಿವಿಯೇಷನ್ ರಸ್ತೆ ಮೂಲಕ ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ಅಯೋಧ್ಯೆ ರಾಮಮಂದಿರದಲ್ಲಿ ನಡೆದಿರುವ ದೇಣಿಗೆ ಹಣ ಲೂಟಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.


‘ಮೋದಿಜೀ ನಮಸ್ತೆ ಜೀ, ಕಳ್ಳ ಯಾರು ಹೇಳು ಜೀ, ಅಯ್ಯೋ ಅಯ್ಯೋ ರಾಮ, ನಿಂಗೆ ಯಾರು ಎಳೆದರೋ ನಾಮ, ಯೋಗೀಜಿ ಯೋಗೀಜಿ ಲೂಟಿಕೋರ ಎಲ್ಲಿ ಜೀ’ ಎಂಬಿತ್ಯಾದಿ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಚಾಲಕ, ನಟ, ನಿರ್ದೇಶಕ ಎಸ್. ನಾರಾಯಣ್ ಮಾತನಾಡಿ, ದೇಶದ ಭಕ್ತರು ಅಯೋಧ್ಯೆ ರಾಮಮಂದಿರಕ್ಕೆನಂಬಿಕೆಯಿಂದ ನೀಡಿದ ದೇಣಿಗೆಯನ್ನು ಕೋಟಿ-ಕೋಟಿ ಹಣವನ್ನು ಲೂಟಿ ಮಾಡಿರುವುದು ಇಡೀ ದೇಶದ ಜನತೆ ತಲೆತಗ್ಗಿಸುವ ವಿಚಾರವಾಗಿದೆ. ಲೂಟಿ ಹಣದ ಬಗ್ಗೆ ಮೋದಿ ಮಾತನಾಡಬೇಕು ಎಂದು ಒತ್ತಾಯಿಸಿದರು.

ಸಾವಿರಾರು ಕೋಟಿ ಲೂಟಿಯಾಗಿದೆ. ವಾಹನಗಳಲ್ಲಿ ಹಣ ಸಾಗಿಸಿದ್ದಾರೆ. ಉತ್ತರ ಪ್ರದೇಶ ನಿಮ್ಮದೇ ಸರ್ಕಾರ ಇದೆ. ದೊಡ್ಡ ಹಗರಣ ಆಗಿದೆ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು. ಇದುವರೆಗೂ ಇದರ ಬಗ್ಗೆಯೂ ಸಹ ಮೋದಿ‌ಯವರು ಮಾತನಾಡಲಿಲ್ಲ. ಇತರೆ ವಿಚಾರಗಳ ಬಗ್ಗೆ ತಕ್ಷಣವೇ ಪ್ರತಿಕ್ರಿಯೆ ನೀಡುವ ಮೋದಿಯವರು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಅಯೋಧ್ಯ ರಾಮಮಂದಿರ ದೇಣಿಗೆ ಲೂಟಿ ಪ್ರಕರಣದಲ್ಲಿ ಈಗಾಗಲೇ ಬಂಧಿಸಿರುವ ಆರೋಪಿಗಳ ಅಲ್ಲದೆ ಇದರ ಹಿಂದಿರುವ ಪ್ರಮುಖ ಆರೋಪಗಳನ್ನು ಪತ್ತೆಹಚ್ಚಿ ಬಂಧಿಸಿ ಕಠಿಣ ಕ್ರಮ ವಿಧಿಸಬೇಕು ಆಗ್ರಹಿಸಿದರು.

ಮೆರವಣಿಗೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಹೊಸಹಳ್ಳಿ ‌ಮಧುಸೂಧನ್, ಜಿಲ್ಲಾ ಸಂಯೋಜಕರಾದ ಕೆರೆಹಳ್ಳಿ ರಾಜಕುಮಾರ್‌, ಹರವೆ ನಾಗೇಶ್, ಮರಿಯಾಲ ನಾಗರಾಜು, ಬ್ಲಾಕ್ ಅಧ್ಯಕ್ಷ ಬಿಸಲವಾಡಿ ರವಿ, ಟೌನ್ ಅಧ್ಯಕ್ಷ ಅಫ್ಸರ್‌ ಅಹಮದ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಾಗರತ್ನ ಕೆಂಗಾಕಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಯೋಗೇಂದ್ರ, ಚಾಮರಾಜನಗರ ಕ್ಷೇತ್ರದ ಅಧ್ಯಕ್ಷ ಅಕ್ಷಯ್, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಮೋಹನ್ ನಗು, ಟೌನ್ ಅಧ್ಯಕ್ಷ ಪದ್ಮಾ ಜ್ಯೋತಿ ಪ್ರಕಾಶ್, ಪುರಷೋತ್ತಮ್, ಶಿವಕುಮಾರ್‌, ಅಕ್ಷಯ್ ಇತರರು ಭಾಗವಹಿಸಿದ್ದರು.-

8ಸಿಎಚ್ಎನ್‌10

ಅಯೋಧ್ಯೆ ರಾಮ ಮಂದಿರದ ದೇಣಿಗೆ ಹಣ ಲೂಟಿ ವಿರುದ್ಧ ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಪಂಜಿನ ‌ಮೆರವಣಿಗೆ ನಡೆಸಲಾಯಿತು.