ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ (ವಿಶೇಷ ಶೀಘ್ರ ಮತಪಟ್ಟಿ ಪರಿಷ್ಕರಣೆ) ಜಾಗೃತಿ ಕಂಡು ಬಿಜೆಪಿಯೇ ಆತಂಕಗೊಂಡಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ಲೇವಡಿ ಮಾಡಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಹಿಂದುಳಿದ ವರ್ಗಗಳ ವಿಭಾಗದ ಎಸ್‌ಐಆರ್ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯು ಬಿರುಸಾಗಿ ನಡೆಯುತ್ತಿದೆ. ಅದು ವೇಗವಾಗಿ ನಡೆಯಲು ಪಕ್ಷದ ಬಿಎಲ್‌ಎಗಳು ಕೂಡ ಕಾರಣರಾಗಿದ್ದಾರೆ. ಈಗಾಗಲೇ ಪರಿಷ್ಕರಣೆ ಕಾರ್ಯಕ್ಕೆ 9 ದಿನಗಳಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಈ ಕಾರ್ಯ ಹೇಗೆ ನಡೆಯುತ್ತಿದೆ ಎಂಬ ಹಿನ್ನೆಲೆಯಲ್ಲಿ ಇಲ್ಲಿ ಸಭೆ ಕರೆದು ತಾವು ಪರಿಶೀಲನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಕೂಡ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದರು.

ಎಸ್‌ಐಆರ್ ಪ್ರಕ್ರಿಯೆಯನ್ನು ಬಿಜೆಪಿಯವರೇ ಪ್ರಾರಂಭ ಮಾಡಿದ್ದು. ಆದರೆ, ಈಗ ಕರ್ನಾಟಕದಲ್ಲಿ ಅದು ಸಮರ್ಪಕವಾಗಿ ನಡೆಯುತ್ತಿರುವುದನ್ನು ಕಂಡು ಬಿಜೆಪಿಯ ಕೆಲವರು ಇದು ಬೇಡವಾಗಿತ್ತು ಎಂದು ಮಾತನಾಡತೊಡಗಿದ್ದಾರೆ. ಅವರಿಗೆ ಈಗ ಆತಂಕವಾಗಿದೆ. ಕಾರಣ ರಾಜ್ಯದಲ್ಲಿ ಕಾಂಗ್ರೆಸ್ ಸದೃಢವಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವನ್ನು ಅದು ಯಶಸ್ವಿಯಾಗಿ ಮಾಡುತ್ತದೆ. ಇದು ಬಿಜೆಪಿ ಪಕ್ಷಕ್ಕೆ ತಿರುಮಂತ್ರವಾಗಬಹುದು ಎಂಬ ಆತಂಕ ಎದುರಾಗಿದೆ ಎಂದು ಕುಟುಕಿದರು.

ಪರಿಷ್ಕರಣಾ ಕಾರ್ಯದಲ್ಲಿ ಕೆಲವು ಲೋಪದೋಷಗಳು ಇರುವುದು ನಿಜ. ಅದನ್ನೆಲ್ಲಾ ಸರಿ ಮಾಡುವತ್ತ ನಮ್ಮ ಪಕ್ಷದ ಬಿಎಲ್‌ಎ ಕಾರ್ಯಕರ್ತರು ಸಿದ್ಧರಾಗಿದ್ದಾರೆ. ರಾಜ್ಯಮಟ್ಟದ ಕಾರ್ಯಕರ್ತರು ಕೂಡ ಈ ಬಗ್ಗೆ ಆಗಾಗ ಸೂಚನೆಗಳನ್ನು ನೀಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿಯೂ ಕೂಡ ಬೂತ್ ಮಟ್ಟದಿಂದ ಇದು ಯಶಸ್ವಿಯಾಗುತ್ತಿದೆ. ಈಗ ಹಿಂದುಳಿದ ವರ್ಗಗಳ ವಿಭಾಗದಿಂದ ಬೂತ್ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಕನಿಷ್ಠ ಮೂರು ಜನ ಮಹಿಳೆಯರು ಇರಬೇಕಾಗುತ್ತದೆ. ಒಟ್ಟು 11 ಅಥವಾ ಅದಕ್ಕೂ ಹೆಚ್ಚು ಸದಸ್ಯರನ್ನು ಸಮಿತಿಯಲ್ಲಿ ಸೇರಿಸಲಾಗುತ್ತದೆ. ಇವರೆಲ್ಲರೂ ಕೂಡ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪರೋಕ್ಷವಾಗಿ ಭಾಗವಹಿಸಿ ಮತದಾರರ ಪಟ್ಟಿಯಿಂದ ಯಾರೂ ಹೊರಗೆ ಹೋಗಬಾರದು ಎಂಬ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.


ರಾಜ್ಯದಲ್ಲಿಯೇ ಈ ಪ್ರಕ್ರಿಯೆ ಬಹುದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬಹುಶಃ ಯಾವ ತೊಂದರೆಗಳು ಆಗುವುದಿಲ್ಲ. ಆದರೆ, ನಗರ ಪ್ರದೇಶಗಳಲ್ಲಿ ಅದರಲ್ಲೂ ಮಹಾನಗರ ಪಾಲಿಕೆಯಂತಹ ಪ್ರದೇಶಗಳಲ್ಲಿ ಸ್ವಲ್ಪ ಕಷ್ಟವಾಗಬಹುದು ಎಂದರು.

ಬಿಜೆಪಿಯವರಿಗೆ ಬೆಂಗಳೂರಿನ ಸುಮಾರು 8 ಕ್ಷೇತ್ರಗಳ ಬಗ್ಗೆ ಆತಂಕ ಪ್ರಾರಂಭವಾಗಿದೆ. ಮಹಾದೇವಪುರ ಸೇರಿದಂತೆ ಕೆಲವು ಕ್ಷೇತ್ರಗಳನ್ನು ಎಲ್ಲಿ ಕಳೆದುಕೊಳ್ಳುತ್ತೇವೋ ಎಂಬ ಆತಂಕ ಅವರಿಗಾಗಿದೆ. ಕಾರಣ ಮತಪಟ್ಟಿಯ ಬಗ್ಗೆ ಈಗ ಅಲ್ಲಿ ಜಾಗೃತಿ ಹೆಚ್ಚಾಗಿದೆ. ಬೇರೆ ರಾಜ್ಯದವರು ಅಲ್ಲಿ ಇದ್ದಾರೆ. ಒಟ್ಟಾರೆ ಎಸ್‌ಐಆರ್ ಪ್ರಕ್ರಿಯೆ ರಾಜ್ಯದಲ್ಲಿ ಮಾತ್ರ ಬಿಜೆಪಿಯವರಿಗೆ ಒಂದು ರೀತಿಯ ತಲೆನೋವಾಗಿದೆ ಎಂದಯ ವ್ಯಂಗ್ಯವಾಡಿದರು.

ಮುಂದಿನ ದಿನಗಳಲ್ಲಿ ಶಿವಮೊಗ್ಗದಲ್ಲಿ ಹಿಂದುಳಿದ ವರ್ಗಗಳ ವಿಭಾಗದಿಂದ ಎರಡು ಬೃಹತ್ ಮಟ್ಟದ ಸಭೆಯನ್ನು ಕರೆದು ಎಸ್‌ಐಆರ್ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಲಾಗುವುದು. ಒಟ್ಟಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಗ್ಯಾರಂಟಿಗಳ ಜೊತೆಗೆ ಈ ಜಾಗೃತಿಯೂ ಕಾರಣವಾಗಲಿದೆ ಎಂದು ಹೇಳಿದರು.

ಹಾಗೆಯೇ ರಾಹುಲ್‌ಗಾಂಧಿಯವರು ನೀಟ್ ಪರೀಕ್ಷೆಯ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬಹುದೊಡ್ಡ ಹೋರಾಟವನ್ನು ರಾಷ್ಟ್ರವ್ಯಾಪಿ ನಡೆಸಿದ್ದಾರೆ. ‘ಛಾತ್ರೋನ್ ಕಿ ಗೂಂಜ್’ ಆಂದೋಲನಕ್ಕೆ ನಾವು ಕೂಡ ಕೈಜೋಡಿಸಿದ್ದೇವೆ. ಶಿಕ್ಷಣ ಉಳಿಸಿ ವಿದ್ಯಾರ್ಥಿಗಳ ಭವಿಷ್ಯ ಉಳಿಸಿ ಎಂಬ ಹಿನ್ನಲೆಯಲ್ಲಿ ಇದನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಈ ಅಭಿಯಾನವನ್ನು ಬಲಪಡಿಸಲು ಎಚ್.ಎಸ್. ಮಂಜುನಾಥ ಗೌಡ ಅವರನ್ನು ನಿಯೋಜಿಸಲಾಗಿದೆ. ಅವರ ಜೊತೆಗೆ ನಾವೂ ಕೂಡ ಇದ್ದೇವೆ. ಶಿವಮೊಗ್ಗದಿಂದ ರಮೇಶ್ ಶಂಕರ ಘಟ್ಟ ಅವರ ಹೆಸರನ್ನೂ ಕೂಡ ಸೂಚಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ರಮೇಶ್ ಶಂಕರಘಟ್ಟ, ಹಿಂದುಳಿದ ವರ್ಗಗಳ ವಿಭಾಗದ ಕೆಪಿಸಿಸಿ ರಾಜ್ಯ ಸಂಯೋಜಕ ಜಿ.ಡಿ. ಮಂಜುನಾಥ್, ಪ್ರಮುಖರಾದ ಎಸ್.ಟಿ. ಹಾಲಪ್ಪ, ಪಿ.ಎಸ್. ಗಿರೀಶ್‌ರಾವ್, ವಿಶ್ವನಾಥ್ ಕಾಶಿ, ಉಮಾಪತಿ, ರಮೇಶ್ ಇಕ್ಕೇರಿ, ಸಿ.ಹೆಚ್. ಪಾಲಾಕ್ಷಿ, ಕುಮಾರ್, ಭಾಸ್ಕರ್, ರವಿ, ಅಶೋಕ್‌ಕುಮಾರ್ ಸೇರಿ ಹಲವರಿದ್ದರು.

-----------

ಪೊಟೋ: 08ಎಸ್‌ಎಂಜಿಕೆಪಿ01: