ಚಂದ್ರು ಕೊಂಚಿಗೇರಿ ಹೂವಿನಹಡಗಲಿ
ಹೌದು, ತಾಲೂಕಿನ ಹರವಿ, ಕುರುವತ್ತಿ, ಮೈಲಾರ ಇತರೆ ಕಡೆಗಳಲ್ಲಿ ಹಾಡಹಗಲೇ ಮರಳು ಅಕ್ರಮ ದಂಧೆ ನಿರಂತರವಾಗಿದೆ. ಹರವಿ-ಹರನಗಿರಿ ಸೇತುವೆ, ಮೈಲಾರ-ಕಂಚರಗಟ್ಟಿ ಸೇತುವೆಯಿಂದ 1 ಕಿಮೀ ಪ್ರದೇಶದಲ್ಲಿ ಯಾವುದೇ ಗಣಿಗಾರಿಕೆ ಮಾಡುವಂತಿಲ್ಲ ಮತ್ತು ಆ ಪ್ರದೇಶದಲ್ಲಿ ಮರಳು ಇದ್ದರೂ ಬ್ಲಾಕ್ ರಚನೆ ಮಾಡುವಂತಿಲ್ಲ, ಆದರೂ ಸೇತುವೆ ಬುಡದಲ್ಲೇ ಮರಳು ಲೂಟಿ ಎಗ್ಗಿಲ್ಲದೇ ಸಾಗಿದೆ. ಇದರಿಂದ ಸೇತುವೆಗಳಿಗೆ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಿದೆ.
ಮಳೆ ಇಲ್ಲದೇ ಕೆಲವೆಡೆ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿ ಮರಳು ನಿಕ್ಷೇಪ ತೆಗೆದುಕೊಂಡಿವೆ. ಹಗಲು ಹೊತ್ತಿನಲ್ಲಿ ಎತ್ತಿನ ಚಕ್ಕಡಿಯಲ್ಲಿ ಮರಳು ಸಾಗಣೆ ಮಾಡಿ ಕಣಗಳಲ್ಲಿ ಸಂಗ್ರಹಿಸಿ ರಾತ್ರಿ ವೇಳೆ ಲಾರಿಗಳ ಮೂಲಕ ನಗರ ಪ್ರದೇಶಗಳಿಗೆ ಅಕ್ರಮ ಸಾಗಣೆ ಮಾಡುತ್ತಾರೆ.ತಾಲೂಕಿನ ತುಂಗಭದ್ರಾ ನದಿ ತೀರದ ಹರವಿ, ಬನ್ನಿಮಟ್ಟಿ, ಕಂದಗಲ್ಲು, ಹಕ್ಕಂಡಿಯಲ್ಲಿ ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 6 ಮರಳಿನ ಬ್ಲಾಕ್ ಗುರುತಿಸಿತ್ತು. ಮರಳಿನ ಬ್ಲಾಕ್ ಟೆಂಡರ್ ಪ್ರಕ್ರಿಯೆಗೆ ಒಂದಲ್ಲ ಒಂದು ತೊಂದರೆ ಉಂಟಾಗಿ 4 ವರ್ಷದಿಂದ ಟೆಂಡರ್ ಆಗಿಲ್ಲ, ಇದನ್ನೇ ಬಂಡವಾಳ ಮಾಡಿಕೊಂಡ ಮರಳು ಅಕ್ರಮ ದಂಧೆಕೋರರು ಕಬ್ಬಿಣದ ತೆಪ್ಪ ಬಳಸಿ ಲೂಟಿ ಮಾಡಿದ್ದಾರೆ. ಉಳಿದ ಕಡೆ ಎತ್ತಿನ ಚಕ್ಕಡಿಯಲ್ಲಿ ಅಕ್ರಮ ಸಾಗಣೆ ಮಾಡುತ್ತಿದ್ದಾರೆ.
ಜನರು ಮನೆ ಕಟ್ಟಲು ಮರಳಿಗಾಗಿ ಪರದಾಡುತ್ತಿದ್ದು, ವಿಧಿ ಇಲ್ಲದೇ ದುಬಾರಿ ಬೆಲೆಗೆ ಮರಳು ಖರೀದಿಸುತ್ತಾರೆ, ಸರ್ಕಾರ ಮರಳಿನ ಬ್ಲಾಕ್ ಟೆಂಡರ್‌ನ ತೊಂದರೆ ಸರಿಪಡಿಸಿ ಜನರಿಗೆ ಕಡಿಮೆ ಬೆಲೆಯಲ್ಲಿ ಮರಳು ನೀಡಬೇಕು ಎಂದು ನದಿ ತೀರದ ಜನರು ತಿಳಿಸಿದ್ದಾರೆ.