ಶಿವಕುಮಾರ ಕುಷ್ಟಗಿಕನ್ನಡಪ್ರಭ ವಾರ್ತೆ ಗದಗಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ವ್ಯಾಪ್ತಿಯಲ್ಲಿ ಹರಿಯುವ ಮಲಪ್ರಭಾ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಮರಳುಗಳ್ಳರ ದಾಹಕ್ಕೆ ಬರಡಾಗಿದೆ.ಮಲಪ್ರಭಾ ನದಿ ತೀರದ ಬಲಭಾಗದ ಸರ್ವೆ ನಂಬರ್ 30 ಹಾಗೂ 31/1ರಲ್ಲಿ ನಿಯಮ ಮೀರಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಪಟ್ಟಾ ಜಮೀನಿನಲ್ಲಿ ಬೋಟ್ ಬಳಸಿ ಮರಳು ತೆಗೆಯುತ್ತಿದ್ದು, ಫಲವತ್ತಾದ ಜಮೀನು ಬರಡು ಭೂಮಿಯಾಗುತ್ತಿದೆ.ನಿಯಮ ಬಾಹಿರ:ಪಟ್ಟಾ ಜಮೀನಿನಲ್ಲಿ ಸಂಗ್ರಹವಾದ ನೀರಿನಲ್ಲಿ ಬೋಟ್ ನಿಲ್ಲಿಸಿ, ಮೋಟರ್ ಸಹಾಯದಿಂದ ನೀರು ಪಂಪ್ ಮಾಡಿ, ಸಾಣಿಗೆ ಮೂಲಕ ಮರಳು ಬೇರ್ಪಡಿಸಲಾಗುತ್ತದೆ. ಹೀಗೆ ಸಂಗ್ರಹಿಸಿದ ಮರಳನ್ನು ಯಾವುದೇ ಪಾಸ್ ಇಲ್ಲದೇ ಹುಬ್ಬಳ್ಳಿ, ಬಾಗಲಕೋಟೆಗೆ ಸಾಗಾಟ ಮಾಡುತ್ತಾರೆ. ಅಗತ್ಯ ಕ್ರಮಗಳಿಲ್ಲ: ಸ್ಯಾಂಡ್ ಪಾಯಿಂಟ್‌ನಲ್ಲಿ ಸಿಸಿಟಿವಿ, ವೇಬ್ರಿಡ್ಜ್, ಕಾರ್ಮಿಕರಿಗೆ ಸುರಕ್ಷಾ ಸಾಧನಗಳು, ಮರಳು ಗಣಿಗಾರಿಕೆ ನಡೆಸುವ ಮಾಲೀಕರ ಹೆಸರು ಹಾಗೂ ಪರವಾನಗಿ ಇರುವ ಮಾಹಿತಿ ಫಲಕ ಸಹಿತ ಯಾವುದೇ ನಿಯಮಗಳನ್ನು ಪಾಲನೆ ಮಾಡದೇ ರಾಜಾರೋಷವಾಗಿ ಅಕ್ರಮ ಮಾರ್ಗದಲ್ಲಿ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ.ಅಧಿಕಾರಿಗಳ ಮೌನ: ಹೊಳೆಆಲೂರ ಗ್ರಾಮದ ಕೂಗಳತೆ ದೂರದ ಜಮೀನುಗಳಲ್ಲಿ ಅಕ್ರಮ ದಂಧೆ ನಡೆಯುತ್ತಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಜಾಣ ಮೌನ ಪ್ರದರ್ಶಿಸುತ್ತಿದ್ದಾರೆ. ಆಟಕ್ಕುಂಟು ಲೆಕ್ಕಕ್ಕಿಲ್ಲ: ಇನ್ನು ಹೊಳೆಆಲೂರ ಗ್ರಾಮದ ಮುಂಭಾಗದಲ್ಲಿಯೇ ಗಣಿ ಮತ್ತು ಭೂವಿಜ್ಞಾನ ಇಲಾಖೆ ತನಿಖಾ ಠಾಣೆ ಇದೆ. ಆದರೆ ಅಲ್ಲಿ ಸಿಬ್ಬಂದಿಗಳಿಲ್ಲದ ಕಾರಣಕ್ಕೆ ತನಿಖಾ ಠಾಣೆಯ ಕಿಟಕಿ ಬಾಗಿಲುಗಳು ಕಳ್ಳರ ಪಾಲಾಗಿದ್ದು, ತನಿಖಾ ಠಾಣೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.ಪ್ರತ್ಯೇಕ ನಿಯಮ ಅಗತ್ಯ: ನದಿ ಪಾತ್ರದಲ್ಲಿ ನಡೆಸುವ ಮರಳು ಗಣಿಗಾರಿಕೆಗೆ ಕಠಿಣ ನಿಯಮಗಳಿವೆ. ಆದರೆ ಪಟ್ಟಾ ಜಮೀನಿನಲ್ಲಿ ನಡೆಸುವ ಮರಳುಗಾರಿಕೆಗೆ ಯಾವುದೇ ಕಠಿಣ ನಿಯಮಗಳಿಲ್ಲದೇ ಇರುವುದೇ ಅಕ್ರಮಕ್ಕೆ ಕಾರಣವಾಗಿದೆ.ಹೊಳೆಆಲೂರ ಗ್ರಾಮದ ವ್ಯಾಪ್ತಿಯ ಪಟ್ಟಾ ಜಮೀನಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುವ ಮಾಹಿತಿ ಇದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ರೋಣ ತಹಸೀಲ್ದಾರ್ ನಾಗರಾಜ ಹೇಳಿದರು.