ಕುಂದಗೋಳದಲ್ಲಿ ಅಕ್ರಮ ಮರಳು ದಂಧೆ ಜೋರು!

KannadaprabhaNewsNetwork |  
Published : Mar 04, 2025, 12:33 AM IST
3ಕೆಎನ್‌ಡಿ01ಕುಂದಗೋಳ ತಾಲ್ಲೂಕಿನ ರೊಟ್ಟಿಗವಾಡ- ಕೊಡ್ಲಿವಾಡ ಮಾರ್ಗ ಮಧ್ಯದಲ್ಲಿ ಇರುವ ಹಳ್ಳದಲ್ಲಿ ಅಕ್ರಮವಾಗಿ ಟ್ರ್ಯಾಕ್ಟರ್‌ನಲ್ಲಿ ಮರಳು ತುಂಬುತ್ತಿರುವುದು. | Kannada Prabha

ಸಾರಾಂಶ

ಕುಂದಗೋಳ ತಾಲೂಕಿನ ಬಹುತೇಕ ಹಳ್ಳಗಳಲ್ಲಿ ಹಗಲು-ರಾತ್ರಿ ಎನ್ನದೇ ಅಕ್ರಮ ಮರಳುಗಾರಿಕೆ ಯಗ್ಗಿಲ್ಲದೇ ನಡೆಯುತ್ತಿದ್ದು, ಯಾರೂ ಕೇಳುವವರೇ ಇಲ್ಲವೇನೋ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಗಂಗಾಧರ ಡಾಂಗೆ

ಕುಂದಗೋಳ: ತಾಲೂಕಿನ ಬಹುತೇಕ ಹಳ್ಳಗಳಲ್ಲಿ ಹಗಲು-ರಾತ್ರಿ ಎನ್ನದೇ ಅಕ್ರಮ ಮರಳುಗಾರಿಕೆ ಯಗ್ಗಿಲ್ಲದೇ ನಡೆಯುತ್ತಿದ್ದು, ಯಾರೂ ಕೇಳುವವರೇ ಇಲ್ಲವೇನೋ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಅದರಲ್ಲೂ ತಾಲೂಕಿನ ಯರಗುಪ್ಪಿ, ರೊಟ್ಟಿಗವಾಡ, ಕೊಡ್ಲಿವಾಡ, ಭರದ್ವಾಡ, ಹೀಗೆ ಕೆಲ ಗ್ರಾಮಗಳ ಪಕ್ಕದಲ್ಲಿ ಇರುವ ಹಳ್ಳಗಳಲ್ಲಿ ಹಗಲು-ರಾತ್ರಿ ಎನ್ನದೆ ಟ್ರ್ಯಾಕ್ಟರಗಳನ್ನು ತುಂಬಿಕೊಂಡು ಆಯಾ ಗ್ರಾಮಗಳ ಪಕ್ಕವೇ ಶೇಖರಣೆ ಮಾಡಿಕೊಂಡಿದ್ದಾರೆ. ಅದನ್ನು ಒಂದು ಟ್ರಿಪ್‌ ಅಂದಾಜು ನಾಲ್ಕಾರು ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ.

ರೊಟ್ಟಿಗವಾಡದಿಂದ ಕೋಳಿವಾಡ ರಸ್ತೆ ಹಾಗೂ ರೊಟ್ಟಿಗವಾಡ ದಿಂದ ಕೊಡ್ಲಿವಾಡ ರಸ್ತೆಯ ಪಕ್ಕದಲ್ಲಿ, ರೊಟ್ಟಿಗವಾಡ ಗ್ರಾಮದ ಹೊರ ವಲಯದಲ್ಲಿ ಹೆರಳವಾಗಿ ಮರಳು ಸಂಗ್ರಹಣೆ ಮಾಡಲಾಗಿದೆ. ನಿತ್ಯವೂ 50 ರಿಂದ 60 ಟ್ರಿಪ್ ಮರಳು ಸಂಗ್ರಹ ಮಾಡಲಾಗುತ್ತಿದೆ.ರೈತರ ಜಮೀನಿನಲ್ಲಿ ದಾರಿ

ಹಳ್ಳದ ಅಕ್ಕ ಪಕ್ಕದಲ್ಲಿರುವ ಸಿಕ್ಕ ಸಿಕ್ಕ ರೈತರ ಜಮೀನಿನಲ್ಲಿ ದಾರಿ ಮಾಡಿಕೊಂಡು ರೈತರ ಜಮೀನಿಗೂ ತೊಂದರೆ ಉಂಟು ಮಾಡುತ್ತಾ. ಈ ಅಕ್ರಮ ದಂದೆ ನಡೆಯುತ್ತಿದೆ. ಈ ಅಕ್ರಮ ಮರಳುಗಾರಿಕೆಯಿಂದಾಗಿ ಹಳ್ಳಗಳು ದೊಡ್ಡ ದೊಡ್ಡ ಖ್ವಾರಿಗಳಾಗಿವೆ. ಇದರ ಪರಿಣಾಮದಿಂದ ಹಳ್ಳಗಳ ಇಕ್ಕೆಲಗಳಲ್ಲಿನ ಕೊಳವೆ ಬಾವಿಗಳು ಬತ್ತುತ್ತಿವೆ. ಈಗಾಗಲೇ ಹಲವು ಕೊಳವೆ ಬಾವಿಗಳು ಬರಿದಾಗಿವೆ. ಅಂತರ್ಜಲ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಮಣ್ಣಿನ ಸವಕಳಿ, ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿದೆ.

ಕುಂದಗೋಳ ತಹಸೀಲ್ದಾರರಾಗಲಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾಗಲಿ ಈ ವರೆಗೆ ಇತ್ತ ಕಡೆ ತಲೆ ಎತ್ತಿ ನೊಡಿಲ್ಲ. ನಿತ್ಯ ಇಷ್ಟೊಂದು ಪ್ರಮಾಣದಲ್ಲಿ ಟ್ರ್ಯಾಕ್ಟರ್‌ ಗಳು ಅಕ್ರಮ ಮರಳು ಹೊತ್ತಿ ತಿರುಗಾಡುತ್ತಿದ್ದರೂ ಪೊಲೀಸರು ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

ಕಳ್ಳ ದಾರಿಯಲ್ಲಿ ಮರಳು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ದಾರಿಯಲ್ಲಿ ಮರಳು ಬೀಳುತ್ತಿದೆ. ಅವಸರದಲ್ಲಿ ಟ್ರಾಕ್ಟರ್ ಗಳನ್ನು ಅಡ್ಡಾದಿಡ್ಡಿ ಒವರ್ ಸ್ಪೀಡ್‌ನಲ್ಲಿ ಓಡಿಸುತ್ತಿದ್ದರಿಂದ ಗ್ರಾಮೀಣ ಭಾಗದ ಜನತೆ ಜೀವ ಭಯದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಜಾಣ ಮೌನ ವಹಿಸಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ರೊಟ್ಟಿಗವಾಡ, ಯರಗುಪ್ಪಿ, ಗ್ರಾಮದ ಮಂಜುನಾಥ, ರಾಜೇಶ, ಯಲ್ಲಪ್ಪ, ರವಿಯವರು ಆತಂಕ ವ್ಯಕ್ತಪಡಿಸಿದರು.

ಪರಿಶೀಲನೆ...

ಗ್ರಾಮೀಣ ಭಾಗದ ಹಳ್ಳದಲ್ಲಿ ಆಕ್ರಮವಾಗಿ ಹಳ್ಳದ ಉಸುಕು ತೆಗೆದುಕೊಂಡು ಹೋಗುತ್ತಿರುವದು ನನ್ನ ಗಮನದಲ್ಲಿ ಇಲ್ಲಾ ಖಂಡಿತಾ ಆ ಸ್ಥಳಕ್ಕೆ ನಮ್ಮ ಅಧಿಕಾರಿಗಳನ್ನು ಭೇಟಿ ನೀಡಲು ಹೇಳುತ್ತೆನೆ.

-ಉಮೇಶ ಭಗರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಧಾರವಾಡ.ಕ್ರಮ‌...

ತಾಲೂಕಿನ ಕೆಲ ಗ್ರಾಮದ ಹಳ್ಳದಲ್ಲಿ ಮರಳು ದಂದೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸುತ್ತೇನೆ. ಹಾಗೂ ಸದ್ಯ ನಮ್ಮ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳನ್ನು ಕಳಿಸಿ ಮಾಹಿತಿ ತೆಗೆದುಕೊಳ್ಳುತ್ತೇನೆ, ಹೀಗೆ ಮಾಡುವವರ ವಿರುದ್ದ ಕ್ರಮ‌ ಜರುಗಿಸುತ್ತೇನೆಂದು ಹೇಳಿದರು.

-ರಾಜು ಮಾವರಕ, ತಹಸೀಲ್ದಾರ್‌

ಬೀಟ್...

ಹಳ್ಳದಲ್ಲಿ ಉಸುಗು ತುಂಬಿಕೊಂಡು ಹೋಗುವದು ತಪ್ಪು ಇದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿರುತ್ತದೆ. ದಿನ ನಿತ್ಯ ಇಲ್ಲಿ ಬೀಟ್ ವ್ಯವಸ್ಥೆ ಮಾಡಲು ನಮ್ಮ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪರಿಶೀಲನೆಗೆ ಬಂದರೆ ಅವರಿಗೆ ನಾವು ಇಲಾಖೆಯಿಂದ ಬೀಟ್ ವ್ಯವಸ್ಥೆ ಮಾಡುತ್ತೇವೆ.

-ಶಿವಾನಂದ ಅಂಬಿಗೇರ, ಸಿಪಿಐ ಕುಂದಗೋಳ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ
ಚಳಿ ಹೆಚ್ಚಿದಂತೆ ಏರುತ್ತಿದೆ ಮೊಟ್ಟೆ ದರ