ಇಂದೂರ ಅರಣ್ಯ ವಲಯದಲ್ಲಿ ಅಕ್ರಮ ಮಣ್ಣು ಸಾಗಾಟ: ಟ್ರ್ಯಾಕ್ಟರ್‌, ಜೆಸಿಬಿ ವಶ

KannadaprabhaNewsNetwork | Published : Feb 17, 2025 12:34 AM

ಸಾರಾಂಶ

ಇಂದೂರ ಸಮೀಪದ ಮಲಬಾರ್ ಕಾಲನಿ ಅರಣ್ಯ ಪ್ರದೇಶದ ಸರ್ವೆ ನಂ. ೪೮ ಕೆರೆಯಲ್ಲಿ ಅಕ್ರಮ ಮಣ್ಣು ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯವರು ದಾಳಿ ಮಾಡಿದ್ದರು.

ಮುಂಡಗೋಡ: ಅಕ್ರಮವಾಗಿ ಮಣ್ಣು ಅಗೆದು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಮತ್ತು ಜೆಸಿಬಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ತಾಲೂಕಿನ ಇಂದೂರ ಅರಣ್ಯ ವಲಯದಲ್ಲಿ ಭಾನುವಾರ ನಡೆದಿದೆ.

ತಾಲೂಕಿನ ಇಂದೂರ ಸಮೀಪದ ಮಲಬಾರ್ ಕಾಲನಿ ಅರಣ್ಯ ಪ್ರದೇಶದ ಸರ್ವೆ ನಂ. ೪೮ ಕೆರೆಯಲ್ಲಿ ಅಕ್ರಮ ಮಣ್ಣು ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯವರು ದಾಳಿ ಮಾಡಿದ್ದು, ಮಣ್ಣು ಸಾಗಾಟದಲ್ಲಿ ತೊಡಗಿದ್ದ ಒಂದು ಜೆಸಿಬಿ ಹಾಗೂ ಟ್ರ‍್ಯಾಕ್ಟರ್ ವಶಕ್ಕೆ ಪಡೆದಿದ್ದಾರೆ.

ಉಪ ವಲಯ ಅರಣ್ಯಾಧಿಕಾರಿ ಶ್ರೀಕಾಂತ್ ವೆರ್ಣೇಕರ್, ಗಸ್ತು ಅರಣ್ಯ ಪಾಲಕ ನಾರಾಯಣ ಸಿಂಗ್ ರಜಪೂತ್ ಹಾಗೂ ಈರಪ್ಪ ಉಗ್ನಿಕೇರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಹುಚ್ಚುನಾಯಿ ಕಚ್ಚಿ ಮೂವರು ಮಕ್ಕಳಿಗೆ ಗಾಯ

ಮುಂಡಗೋಡ: ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮೂವರು ಮಕ್ಕಳಿಗೆ ಹುಚ್ಚುನಾಯಿ ಕಚ್ಚಿ ಗಾಯಗೊಳಿಸಿದ ಘಟನೆ ಪಟ್ಟಣದಲ್ಲಿ ಭಾನುವಾರ ನಡೆದಿದೆ.ಪಟ್ಟಣದ ಕಿಲ್ಲೇ ಓಣಿಯ ಶಾದಾಬ್ ಸಮೀರ್‌ ನಿಗೋಣಿ (೫), ಅಸ್ಲಾನ್ (೩) ಹಾಗೂ ಲಮಾಣಿ ತಾಂಡಾ ನಿವಾಸಿ ಅನನ್ಯ ಲಮಾಣಿ (೨) ಈ ಮೂವರು ಮಕ್ಕಳಿಗೆ ಹುಚ್ಚುನಾಯಿ ಕಚ್ಚಿ ಗಾಯಗೊಳಿಸಿದೆ.ಶಾದಾಬ್ ನಿಗೋಣಿಗೆ ತಲೆ, ಕಣ್ಣು, ಕೈ ಹೀಗೆ ಹಲವು ಭಾಗಗಳಲ್ಲಿ ಕಚ್ಚಿದೆ. ಅನನ್ಯ ಲಮಾಣಿಗೆ ಕೈಗೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ. ಇವರಿಗೆ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ತೆರಳುವಂತೆ ಸೂಚಿಸಲಾಗಿದೆ. ಇನ್ನೋರ್ವ ಬಾಲಕ ಅಸ್ಲಾನ್‌ಗೆ ಸಣ್ಣ ಪ್ರಮಾಣದಲ್ಲಿ ಗಾಯವಾಗಿದ್ದರಿಂದ ಇಲ್ಲಿಯ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದ್ದು, ಸಾರ್ವಜನಿಕರು ಧೈರ್ಯದಿಂದ ತಿರುಗುವುದು ಕಷ್ಟಸಾಧ್ಯವಾಗಿದೆ. ತಕ್ಷಣ ಪಪಂನವರು ಬೀದಿನಾಯಿಗಳನ್ನು ಹಿಡಿದು ಸ್ಥಳಾಂತರ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.ಹೃದಯಾಘಾತದಿಂದ ಪ್ರವಾಸಿಗ ಸಾವು

ಶಿರಸಿ: ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಫೆ. 15ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಮಹಾರಾಷ್ಟ್ರದ ಚಿಂಚವಾಡಾ ಸಮೀಪದ ಪಾವನಾನಗರ ಕಾಲನಿಯ ಪ್ರದೀಪ ವಸಂತ ಪ್ರಧಾನ (೭೦) ಮೃತಪಟ್ಟ ವ್ಯಕ್ತಿ. ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ಫೆ. ೮ರಂದು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರವಾಸಕ್ಕೆ ಬಂದು ಶಿರಸಿ- ಹುಬ್ಬಳ್ಳಿ ರಸ್ತೆಯ ಗ್ರೀನ್ ವರ್ಲ್ಡ್ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು.ಫೆ. ೧೪ರಂದು ಕೆಮ್ಮು, ಕಫ ಹೆಚ್ಚಾಗಿದ್ದರಿಂದ ಶಿರಸಿಯ ಟಿಎಸ್ಎಸ್ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಲಾಗಿತ್ತು. ಫೆ. ೧೫ರಂದು ವೈದ್ಯರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು ಎಂದು ಅವರ ಪತ್ನಿ ಸುಲಭಾ ಪ್ರದೀಪ ಪ್ರಧಾನ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Share this article