ಖಾಸಗಿ ಟ್ರಸ್ಟ್‌ನಿಂದ ಆರಂಭ । ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನ । ವ್ಯಾಪಾರಕ್ಕೆ ಕೇಂದ್ರವಾದ ರಾಮೇಶ್ವರನ ಆಲಯ
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ (ಕೆಆರ್‌ಸಿ) ರಸ್ತೆಯಲ್ಲಿರುವ ಶ್ರೀರಾಮೇಶ್ವರ ದೇವಸ್ಥಾನ ಸಾವಿರ ವರ್ಷಗಳ ಇತಿಹಾಸವಿದೆ. ಆದರೆ ಪಟ್ಟಣದ ಖಾಸಗಿ ಟ್ರಸ್ಟ್‌ವೊಂದು ದೇವಸ್ಥಾನ ಆಕ್ರಮಿಸಿಕೊಂಡು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಹಣ ಸಂಪಾದನೆ ಮಾಡುತ್ತಿದೆ. ಆದರೆ ಮುಜರಾಯಿ ಇಲಾಖೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ದೂರಲಾಗಿದೆ.
ಪಟ್ಟಣದ ಶ್ರೀ ರಾಮೇಶ್ವರ ಸೇವಾ ಟ್ರಸ್ಟ್ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದೆ. ಇದು ಕಾನೂನುಬಾಹಿರ. ಆದರೂ ತಾಲೂಕು ಆಡಳಿತ ಜಾಣ ಮೌನ ವಹಿಸಿದೆ. ಇದು ಸಾರ್ವಜನಿಕರು ಹಾಗೂ ರಾಮನ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.ಖಾಸಗಿ ಟ್ರಸ್ಟ್ ಮುಜರಾಯಿ ಇಲಾಖೆಗೆ ಸೇರಿದ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಅಕ್ರಮವಾಗಿ ಅತಿಕ್ರಮಿಸಿ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಹಣ ಮಾಡಲು ಮುಂದಾಗಿದೆ.
ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ನೀರಿನ ವ್ಯಾಪಾರ ಮಾಡಲು ಹೊರಟ ಖಾಸಗಿ ಟ್ರಸ್ಟ್ ಬಗ್ಗೆ ಸ್ಥಳೀಯ ತಹಸೀಲ್ದಾರ್ ಅವರ ಗಮನಕ್ಕೆ ಮೌಖಿಕವಾಗಿ ತಂದರೂ ತಹಸೀಲ್ದಾರ್ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಒಂದು ವೇಳೆ ಮುಜರಾಯಿ ಇಲಾಖೆ ಖಾಸಗಿ ಟ್ರಸ್ಟ್‌ಗೆ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲು ಅನುಮತಿ ನೀಡಿದ್ದರೆ ಕೂಡಲೇ ರದ್ದುಪಡಿಸಬೇಕು ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ನಿವೇಶನಗಳು ಹಾಗೂ ಅವಶೇಷಗಳು ಅಧಿನಿಯಮ ೧೯೬೧ರ ಕಲಂ ೩ ರಡಿ ದೇವಸ್ಥಾನವನ್ನು ಒಂದು ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾಗಿದೆ. ಅದೇ ಅಧಿನಿಯಮದ ಕಲಂ ೨೬ರ ಪ್ರಕಾರ ಈ ಸಂರಕ್ಷಿತ ಸ್ಮಾರಕವನ್ನು ಯಾರಾದರೂ ನಾಶಗೊಳಿಸುವುದು, ತೆಗೆದು ಹಾಕುವುದು, ವಿರೂಪಗೊಳಿಸುವುದು, ಸ್ಥಳಾಂತರಗೊಳಿಸುವುದು, ಅತಿಕ್ರಮಿಸುವುದು, ಅಪಾಯ ತರುವುದು, ದುರುಪಯೋಗಪಡಿಸುವುದು ಅಪರಾಧ. ಈ ಕೃತ್ಯಗಳಲ್ಲಿ ತೊಡಗಿದರೆ ಮೂರು ತಿಂಗಳ ಜೈಲುಶಿಕ್ಷೆ ಅಥವಾ ೨ ಸಾವಿರ ರು. ದಂಡ ಅಥವಾ ಎರಡೂ ಶಿಕ್ಷೆಗೆ ಒಳಪಡಿಸಬಹುದು ಎಂದು ಮೈಸೂರು ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯ ಆದೇಶಿಸಿದೆ.
-ಟಿ.ರಮೇಶ್ ಬಾಬು,ತಹಸೀಲ್ದಾರ್