ಹಿರಿಯೂರು: ತಾಲೂಕಿನ ಜೆಜಿ ಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಹಾಲಿ ಸದಸ್ಯರು ಮೇಲಾಧಿಕಾರಿಗಳಿಗೆ ಅರ್ಜಿ ಮೇಲೆ ಅರ್ಜಿ ಕೊಡುತ್ತಿದ್ದರು ಸಹ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ಗ್ರಾಮ ಪಂಚಾಯ್ತಿಯಲ್ಲಿ 2019 ರಿಂದೀಚೆಗೆ ನಡೆದ ಅವ್ಯವಹಾರಗಳ ಬಗ್ಗೆ ಈಗಾಗಲೇ ಪಂಚಾಯ್ತಿಯ ಕೆಲ ಸದಸ್ಯರು ತಾಲೂಕು ಪಂಚಾಯ್ತಿಗೆ, ಜಿಲ್ಲಾ ಪಂಚಾಯ್ತಿಗೆ, ಪಂಚಾಯತ್ ರಾಜ್ ಇಲಾಖೆಯ ಕಮಿಷನರ್ ಗೆ ಹತ್ತಾರು ದೂರು ಸಲ್ಲಿಸಿದ್ದು, ಇದುವರೆಗೂ ಸಂಬಂಧಪಟ್ಟ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯರು ದೂರಿದ್ದಾರೆ.2021ರಿಂದ ಪ್ರಸ್ತುತ ಇಲ್ಲಿಯವರೆಗೆ ಪಿಡಿಒ ಈಶ್ವರ್ ರವರಿಗೆ ಅರ್ಜಿ ಮುಖೇನ ಹಲವು ಮಾಹಿತಿ ಕೇಳಿದರು ಸಹ ಯಾವುದನ್ನು ಸದಸ್ಯರಿಗೆ ನೀಡುತ್ತಿಲ್ಲ. 14ನೇ ಹಣಕಾಸು, 15ನೇ ಹಣಕಾಸು, ವಿವಿಧ ಖಾತೆಗಳ ಪಾಸ್ ಶೀಟ್, ಸಾಮಾನ್ಯ ಸಭೆಯ ಅಧಿಕೃತ ಸಭಾ ನಡಾವಳಿಗಳು, ಇ-ಸ್ವತ್ತು ವಿವರಗಳು, ಪಂಚಾಯ್ತಿ ವ್ಯಾಪ್ತಿಯ ಕಾರ್ಖಾನೆ, ಲೇಔಟ್, ಮಳಿಗೆಗಳು ಹಾಗೂ ಹೋಟೆಲ್‌ಗಳ ಕಂದಾಯ ವಸೂಲಿ ಬಗ್ಗೆ ಸದಸ್ಯರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಸದಸ್ಯರ ಅಧಿಕಾರ ಮೊಟಕುಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ. 15ನೇ ಹಣಕಾಸಿನ ಕ್ರಿಯಾಯೋಜನೆ ಅನುಮೋದನೆ ಕುರಿತಂತೆ ಗ್ರಾಮ ಸಭೆ ನಡೆಸದೆ ಕಾನೂನು ಬಾಹಿರವಾಗಿ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಆ ಕ್ರಿಯಾ ಯೋಜನೆ ತಡೆ ಹಿಡಿಯುವಂತೆ ಮಾಡಿದ ಮನವಿಯನ್ನು ಸಹ ಪುರಸ್ಕರಿಸಲಿಲ್ಲ ಎಂದು ಆರೋಪಿಸಿದ್ದಾರೆ.
ಗೋಲ್ಡನ್ ಫೀಡ್ಸ್ ಕೈಗಾರಿಕೆಗೆ ಸಂಬಂಧಪಟ್ಟಂತೆ ಪಂಚಾಯ್ತಿಯಿಂದ ಪಡೆದಿರುವ ಎನ್‌ಓಸಿ ಸೇರಿದಂತೆ ಹಲವು ಅನುಮತಿಗಳ ಮಾಹಿತಿ ನೀಡಿ ಎಂದು ಸದಸ್ಯರೇ 2023ರಿಂದಲೂ ಕೇಳುತ್ತಿದ್ದರೂ ಮಾಹಿತಿ ಒದಗಿಸಿಲ್ಲ. ಪಂಚಾಯ್ತಿ ವ್ಯಾಪ್ತಿಯ ಕಾಟನಾಯಕನಹಳ್ಳಿಯ ಶಾಲೆಗೆ 14ನೇ ಹಣಕಾಸು ಯೋಜನೆಯಡಿ 2 ಗಣಕ ಯಂತ್ರ ಖರೀದಿಸಿ ವಿತರಿಸಿಲ್ಲ. ಲೈಬ್ರರಿ ಡಿಜಿಟಲೀಕರಣ ಹಣವೂ ದುರುಪಯೋಗ ಆಗಿದೆ. 15ನೇ ಹಣಕಾಸು ಯೋಜನೆಯನ್ನು ಮೇಲಾಧಿಕಾರಿಗಳ ಅನುಮತಿಗೆ ಸಲ್ಲಿಸದೆ ಸದರಿ ಯೋಜನೆಯಡಿ ಹಣ ದುರುಪಯೋಗ ಮಾಡಲಾಗಿದೆ.ಈಗಾಗಲೇ ಒಮ್ಮೆ ಪಂಚಾಯ್ತಿಯನ್ನು ಸೂಪರ್ ಸೀಡ್ ಮಾಡಿ ಹತ್ತು ಲಕ್ಷಕ್ಕೂ ಹೆಚ್ಚು ದಂಡ ಕಟ್ಟಿಸಲಾಗಿದೆ. ಆನಂತರ ಬಂದ ಪಿಡಿಒ ಈಶ್ವರ್ ಪಂಚಾಯ್ತಿಯ ಉಳಿತಾಯ ಖಾತೆಯಲ್ಲಿದ್ದ ಸುಮಾರು 80 ಲಕ್ಷದಷ್ಟು ಹಣವನ್ನು ನಕಲಿ ಬಿಲ್ ಮತ್ತು ವೋಚರ್ ಬಳಸಿ ಅಂದಿನ ಅಮಾನತ್ತು ಆದ ಅಧ್ಯಕ್ಷರ ಸಹಿ ಪಡೆದು ಕೇವಲ 8 ದಿನಗಳಲ್ಲಿ ಎಲ್ಲಾ ಹಣವನ್ನು ಡ್ರಾ ಮಾಡಿದ್ದಾರೆ. ಆನಂತರ ಸದಸ್ಯರ ದೂರಿನ ನಂತರ ಸಂಬಂಧಪಟ್ಟ ಪಿಡಿಒ ಮೇಲೆ ತನಿಖೆಗೆ ಆದೇಶಿಸಿ 7 ದಿನಗಳೊಳಗೆ ವರದಿ ಒಪ್ಪಿಸಲು ಸೂಚಿಸಲಾಗಿತ್ತು. ಆದರೆ ದಿಢೀರನೇ ತನಿಖೆ ತಡೆ ಹಿಡಿದು ಪಿಡಿಒ ರವರಿಗೆ 7 ತಿಂಗಳು ರಜೆ ನೀಡಿ ಅವರನ್ನು ರಕ್ಷಿಸುವ ಕೆಲಸ ನಡೆಯಿತು.
ಹೀಗೆ ಸುಮಾರು 3 ರಿಂದ ನಾಲ್ಕು ಕೋಟಿಯ ಅವ್ಯವಹಾರ ನಡೆದಿದ್ದು, ಕೋರo ಇಲ್ಲದೇ ಸಭೆ ನಡೆಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಸುಮಾರು 200ಕ್ಕೂ ಹೆಚ್ಚು ಬಾರಿ ಮನವಿ ಸಲ್ಲಿಸಿ ದೂರು ನೀಡಿದರು ಸಹ ಅಕ್ರಮವೆಸಗಿರುವ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪಂಚಾಯ್ತಿಯ ಸದಸ್ಯರಾದ ಶಶಿಕಾಂತ್ ಸೇರಿದಂತೆ ಹಲವು ಸದಸ್ಯರು ಆರೋಪಿಸಿದ್ದಾರೆ.ಭ್ರಷ್ಟರ ವಿರುದ್ಧ ನಮ್ಮ ಹೋರಾಟ ನಿರಂತರ
ಪಂಚಾಯ್ತಿಯನ್ನು ದಿವಾಳಿ ಎಬ್ಬಿಸಲು ಹೊರಟಿರುವವರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ದೂರುದಾರ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯ ಶಶಿಕಾಂತ್ ತಿಳಿಸಿದ್ದಾರೆ.
ಜೆಜಿ ಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಸಂವಿಧಾನ ಕೊಟ್ಟ ಸದಸ್ಯರ ಅಧಿಕಾರವನ್ನು ಬಳಸಲು ಸಹ ಆಗದಂತಾಗಿದೆ. ಚುನಾಯಿತ ಅಧ್ಯಕ್ಷರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಪಂಚಾಯ್ತಿಯನ್ನು ಲೂಟಿಯ ಕೇಂದ್ರವನ್ನಾಗಿಸಿದ್ದಾರೆ. ಇವರನ್ನು ರಕ್ಷಿಸಲು ಮೇಲಾಧಿಕಾರಿಗಳೇ ಟೊಂಕ ಕಟ್ಟಿ ನಿಂತಿದ್ದಾರೆ. ದುರುಪಯೋಗವಾದ ಹಣದ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿದರೂ ಒಬ್ಬ ಭ್ರಷ್ಟ ಅಧಿಕಾರಿಯ ಬೆನ್ನಿಗೆ ನಿಂತು ಅವನನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಕೆಲಸ. ಪಂಚಾಯ್ತಿಯನ್ನು ದಿವಾಳಿ ಎಬ್ಬಿಸಲು ಹೊರಟಿರುವವರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಹಣ ದುರುಪಯೋಗದ ಸಂಪೂರ್ಣ ದಾಖಲೆಗಳನ್ನು ಈಗಾಗಲೇ ಲಾಯರ್ ಜಗದೀಶ್ ಬಳಿ ಕೊಂಡೊಯ್ದು ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸುತ್ತೇವೆ ಎಂದು ಹೇಳಿದ್ದಾರೆ.