ಹುಬ್ಬಳ್ಳಿ: ಆಗಸದಲ್ಲಿ ಎಲ್ಲಿ ನೋಡಿದರಲ್ಲಿ ಬಣ್ಣಬಣ್ಣದ ಗಾಳಿಪಟಗಳು. ಪುಟ್ಟ ಗಾಳಿಪಟದಿಂದ ಹಿಡಿದು ಆಳೆತ್ತರದ ಬಣ್ಣಬಣ್ಣದ, ವಿಭಿನ್ನ ಆಕಾರಗಳಲ್ಲಿ ಹಾರಾಡುತ್ತಿದ್ದ ಬಗೆಬಗೆಯ ಗಾಳಿಪಟಗಳು ನೋಡುಗರ ಮನಸೂರೆಗೊಳಿಸುವಲ್ಲಿ ಯಶಸ್ವಿಯಾದವು. ಕಗ್ಗತ್ತಲಲ್ಲೂ ಬಣ್ಣದ ಲೈಟಿನ ಹೊಳಪಿನೊಂದಿಗೆ ಗಾಳಿಪಟಗಳು ಕಂಗೊಳಿಸಿದವು. ಮತ್ತೊಂದೆಡೆ ಸಂಜೆ ಖ್ಯಾತ ಗಾಯಕ ಕೈಲಾಸ ಖೇರ್ ಮತ್ತು ಬಾಲ ಗಾಯಕಿ ಮಹನ್ಯ ಪಾಟೀಲ ಅವರ ಹಾಡುಗಳಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿದರು.
ಆಸ್ಟ್ರೇಲಿಯಾ, ಅಮೆರಿಕ, ಕೆನಡಾ, ಸಿಂಗಪುರ, ಟರ್ಕಿ ಸೇರಿದಂತೆ ಹಲವು ದೇಶಗಳಿಂದ ಆಗಮಿಸಿದ್ದ ಆಟಗಾರರು ತಮ್ಮದೇ ಶೈಲಿಯಲ್ಲಿ ಗಾಳಿಪಟ ತೇಲಿಬಿಟ್ಟು, ನಾನಾ ಕಸರತ್ತುಗಳನ್ನು ನಡೆಸುವ ಮೂಲಕ ನೋಡುಗರಿಗೆ ಮನರಂಜನೆ ಒದಗಿಸಿದರು.
ಮಕ್ಕಳ ಕಲರವ:ಉತ್ಸವದಲ್ಲಿ ಪಾಲ್ಗೊಂಡಿದ್ದ ನಗರದ ಹಲವಾರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಣ್ಣಬಣ್ಣದ, ಬಗೆ ಬಗೆಯ ಆಕಾರದ ಗಾಳಿಪಟಗಳನ್ನು ಹಾರಿಸಿ ಸಂಭ್ರಮಿಸಿದರು. ಕೆಲವೊಂದಿಷ್ಟು ಮಕ್ಕಳು ತಮ್ಮ ಕಲ್ಪನೆಯನ್ನು ಬಿಳಿಹಾಳೆ ಮೇಲೆ ಚಿತ್ರ ಬಿಡಿಸುವ ಮೂಲಕ ತಲ್ಲೀನರಾಗಿದ್ದರು.
ಗಾಳಿಪಟದೊಂದಿಗೆ ಸೆಲ್ಪಿಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಹಲವರು ಸ್ವತಃ ಗಾಳಿಪಟ ಹಾರಿಸಿ ಸಂಭ್ರಮಿಸಿದರು. ಜತೆಗೆ ವಿವಿಧ ರಂಗುರಂಗಿನ ಗಾಳಿಪಟದೊಂದಿಗೆ ಅಲ್ಲಿನ ಮಕ್ಕಳು, ಯುವಕಯುವತಿಯರು ಸೇರಿದಂತೆ ಬಹುತೇಕರು ಸೆಲ್ಫಿ ತೆಗೆದುಕೊಂಡರು. ಬೃಹದಾಕಾರದ ಗಾಳಿಪಟಗಳು ಆಕಾಶಕ್ಕೆ ಹಾರುತ್ತಿದ್ದಂತೆ ಯುವಕರು ಕೇಕೆ, ಶಿಳ್ಳೆ ಮತ್ತು ಚಪ್ಪಾಳೆ ಸದ್ದು ಮುಗಿಲು ಮುಟ್ಟುವಂತ್ತಿತ್ತು.