ಭೇಟಿ, ಮಾತು । ಡಾ.ವೀರಭದ್ರಪ್ಪ ಚಿನಿವಾಲರ ಹೇಳಿಕೆ । ವೈದ್ಯಕೀಯ ಸಂಘ ಏಷ್ಯಾದಲ್ಲೇ ದೊಡ್ಡ ಎನ್‌ಜಿಒ
ಕನ್ನಡಪ್ರಭ ವಾರ್ತೆ ಕೊಪ್ಪಭಾರತೀಯ ವೈದ್ಯಕೀಯ ಸಂಘ (ಐಎಂಎ) ವೈದ್ಯರ ಹಿತ ಕಾಪಾಡುವ ಜತೆಗೆ ಸಮುದಾಯ ಕಾರ್ಯಕ್ರಮಗಳಿಗೂ ಒತ್ತು ಕೊಟ್ಟಿದೆ ಎಂದು ಐಎಂಎ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಾ.ವೀರಭದ್ರಪ್ಪ ಚಿನಿವಾಲರ ಹೇಳಿದರು.
ಪಟ್ಟಣದ ಹೊರವಲಯದ ಅಮ್ಮಡಿಯ ಭಾರತೀಯ ವೈದ್ಯಕೀಯ ಸಂಘದ ಕೊಪ್ಪ ಘಟಕಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿ, ದೇಶದಲ್ಲಿ ೧,೭೫೦ ಶಾಖೆಗಳನ್ನು ಹೊಂದಿ ಸುಮಾರು ೪ ಲಕ್ಷ ಸದಸ್ಯರನ್ನು ಹೊಂದಿರುವ ಐಎಂಎ ಏಷ್ಯಾದಲ್ಲಿಯೇ ದೊಡ್ಡ ಎನ್.ಜಿ.ಒ ಸಂಸ್ಥೆಯಾಗಿದೆ. ರಾಜ್ಯದಲ್ಲಿ ೧೮೦ ಶಾಖೆ ಹಾಗೂ ೩೦ ಸಾವಿರ ಸದಸ್ಯರನ್ನು ಹೊಂದಿದೆ. ಕಾರ್ಯನಿರತ ವೈದ್ಯರು ಮತ್ತು ಅವರ ಕುಟುಂಬಗಳಿಗೆ ಅನುಕೂಲವಾಗುವಂತೆ ಅನೇಕ ಯೋಜನೆಗಳಿದ್ದು ಅಧಿಕೃತ ಭೇಟಿ ಸಮಯದಲ್ಲಿ ಐಎಂಎ ಸದಸ್ಯರಿಗೆ ನಿಖರ ಮಾಹಿತಿ ನೀಡಲಾಗುತ್ತಿದೆ ಎಂದರು.ಭಾರತೀಯ ವೈದ್ಯಕೀಯ ಸಂಘದ ಕೊಪ್ಪ ಶಾಖೆ ಅಧ್ಯಕ್ಷ ಡಾ.ಅನಿತಾ ಎನ್.ಆರ್. ಮಾತನಾಡಿ, ಕೊಪ್ಪ ಐಎಂಎ ಶಾಖೆಯು ಶೃಂಗೇರಿ, ಕೊಪ್ಪ, ನ.ರಾ.ಪುರ ಸೇರಿದಂತೆ ಮೂರೂ ತಾಲೂಕು ಒಳಗೊಂಡಿದ್ದು ಒಟ್ಟು ೬೬ ಸದಸ್ಯರನ್ನು ಹೊಂದಿದೆ. ಐಎಂಎ ವೈದ್ಯರಿಗಾಗಿ ಮತ್ತು ಸಮುದಾಯಕ್ಕಾಗಿ ಎಂಬ ಎರಡು ಉದ್ದೇಶಗಳಲ್ಲಿ ಕೆಲಸ ಮಾಡುತ್ತಿದೆ. ಆರೋಗ್ಯ ಶಿಬಿರ, ಕ್ಯಾನ್ಸರ್, ಬ್ರೆಸ್ಟ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಪ್ಪ ಐಎಂಎಯಿಂದ ಆಗಾಗ ನಡೆಯುತ್ತಿದೆ. ವೈದ್ಯರಿಗಾಗಿ ವೈದ್ಯರ ಮತ್ತು ಅವರ ಕುಟುಂಬಗಳ ರಕ್ಷಣೆಗಾಗಿ ಕರ್ನಾಟಕ ಪ್ರೊಫೆಷನಲ್ ಪ್ರೊಟೆಕ್ಷನ್ ಸ್ಕೀಂ ಕೆಪಿಪಿಎಸ್ ಯೋಜನೆ ಇದ್ದು ಹಾಗೂ ಕರ್ನಾಟಕ ಸೋಷಿಯಲ್ ಸೆಕ್ಯೂರಿಟಿ ಸ್ಕೀಂ (ಕೆ.ಎಸ್.ಎಸ್.ಎಸ್.) ಆಕಸ್ಮಾತ್ ವೈದ್ಯರು ಮೃತಪಟ್ಟಲ್ಲಿ ಅವರ ಕುಟುಂಬದ ಸಹಾಯಕ್ಕೆ ಈ ಯೋಜನೆ ಅನುಕೂಲಕರವಾಗಿದೆ ಎಂದರು.
ಐಎಂಎ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಾ.ವೀರಭದ್ರಪ್ಪ ಚಿನಿವಾಲ, ರಾಜ್ಯ ಘಟಕದ ಉಪಾಧ್ಯಕ್ಷ ಮರಿಗೌಡ, ಡಾ. ಜಿ.ಕೆ.ಭಟ್‌ರನ್ನು ಗೌರವಿಸಲಾಯಿತು.ರಾಜ್ಯ ಘಟಕದ ಉಪಾಧ್ಯಕ್ಷ ಮರಿಗೌಡ, ಡಾ. ಜಿ.ಕೆ.ಭಟ್, ಕೊಪ್ಪ ಶಾಖೆಯ ಕಾರ್ಯದರ್ಶಿ ಡಾ.ಸಾನಿಯಾ, ಖಜಾಂಚಿ ಡಾ.ಹೇಮಂತ್ ಕುಮಾರ್, ಡಾ.ಉದಯಶಂಕರ್, ಐಎಂ.ಎ.ಯ ಡಾ. ಮೋಹನ್ ಶೆಟ್ಟಿ, ಡಾ. ಶಾನುಭೋಗ್, ಡಾ. ನಟರಾಜ್ ಎನ್.ರಾವ್, ಡಾ.ಅಮರ್ ಶೇಖರ್, ಡಾ.ಹರ್ಷ, ಡಾ.ಅನಿತಾ ನಟರಾಜ್ ಮತ್ತಿತರರು ಇದ್ದರು.