ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾನೂನು ಉಲ್ಲಂಘನೆಗೆ ಯತ್ನಿಸುವ ತಮ್ಮ ಸಂಬಂಧಿಕರಾಗಲಿ, ಬೆಂಬಲಿಗರಾಗಲಿ, ಜಾತಿ ಬಾಂಧವರಾಗಿರಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೇ 5ರಂದು ಯುವಕರನ್ನು ಬೆತ್ತಲೆಗೊಳಿಸಿ ಥಳಿಸಿದ ಘಟನೆಯನ್ನು ತಾವು ವೈಯಕ್ತಿಕವಾಗಿ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಖಂಡಿಸುವುದಾಗಿ ಹೇಳಿದ ಸಚಿವ ಪ್ರಿಯಾಂಕ್, ಈ ಘಟನೆ ಕುರಿತಂತೆ ಬಿಜೆಪಿ ನಾಯಕರು ಸೇರಿದಂತೆ ಕೆಲವು ಸ್ವಯಂಘೋಷಿತ ಸಮಾಜ ಸೇವಕರು ಸರ್ಕಾರವನ್ನು ಮುಜುಗರಕ್ಕೆ ಒಳಪಡಿಸಲು ಯತ್ನಿಸುತ್ತಿದ್ದಾರೆ. ಕೆಲವು ಘಟನೆಗಳು ವೈಯಕ್ತಿಕ ಕಾರಣದ ಹಿನ್ನೆಲೆಯಲ್ಲಿ ನಡೆಯುತ್ತವೆ. ಎಲ್ಲವೂ ಗೃಹ ಇಲಾಖೆಯ ಗಮನದಲ್ಲಿ ಇರಬೇಕು ಎಂದೇನೂ ಇಲ್ಲ. ಬೆತ್ತಲೆಗೊಳಿಸಿ ಥಳಿಸಿದ ಪ್ರಕರಣ ಸ್ವತಃ ಪೊಲೀಸರ ಗಮನಕ್ಕೆ ಬಂದು ಪೊಲೀಸರೇ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ನುಡಿದರು.ಈ ಪ್ರಕರಣ ಕುರಿತಂತೆ ಬಿಜೆಪಿ ನಾಯಕರು ಹಾಗೂ ಆ ಪಕ್ಷದ ಅವಿಭಾಜ್ಯ ಅಂಗವಾಗಿರುವ ಶ್ರೀರಾಮಸೇನೆಯ ಕೆಲವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ವಿರುದ್ಧ ನೇರ ದಾಳಿ ನಡೆಸಿದ ಪ್ರಿಯಾಂಕ್, ಮರ್ಯಾದಾ ಪುರುಷೋತ್ತಮನ ಹೆಸರಿನಲ್ಲಿ ಮರ್ಯಾದೆಗೆಟ್ಟ ಕೆಲಸ ಮಾಡುವುದು ಈ ಸೇನೆ ಕೆಲಸವಾಗಿದೆ. ಅವರ ಸ್ಕ್ರಿಪ್ಟ್‌ಗೆ ತಕ್ಕಂತೆ ಬಿಜೆಪಿ ನಾಯಕರು ಕೆಲಸ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ ಅವಧಿಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ನಡೆದ ಅಪರಾಧ ಪ್ರಕರಣಗಳ ಪಟ್ಟಿಯೊಂದಿಗೆ ಬಿಜೆಪಿ ನಾಯಕರು ರೌಡಿಗಳೊಂದಿಗೆ ತೆಗೆಸಿಕೊಂಡಿರುವ ಕೆಲ ಫೋಟೊಗಳನ್ನು ಸಚಿವ ಪ್ರಿಯಾಂಕ್ ಇದೇ ವೇಳೆ ಪ್ರದರ್ಶಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ್, ಚಂದ್ರಶೇಖರ ಪಾಟೀಲ್ ಹುಮನಾಬಾದ್, ಜಿಡಿಎ ಅಧ್ಯಕ್ಷ ಮಜರ್ ಆಲಂಖಾನ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ರಾಜಗೋಪಾಲರೆಡ್ಡಿ, ಶಿವಾನಂದ ಹೊನಗುಂಟಿ, ಭೀಮಣ್ಣ ಸಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಳೆದ 9 ತಿಂಗಳಿಂದ ಶ್ರೀರಾಮಸೇನೆಯ ಸಿದ್ದಲಿಂಗ ಸ್ವಾಮೀಜಿ ಬಾಯಿಗೆ ಬಂದಂತೆ ಮಾತನಾಡಿದ್ದನ್ನು ಗಮನಿಸುತ್ತಾ ಬಂದಿದ್ದೇನೆ. ಇನ್ನು ಮುಂದೆ ಯಾವುದನ್ನೂ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು. ಆಂದೋಲಾ ಶ್ರೀ ಮೇಲೆ 39 ಪ್ರಕರಣಗಳಿವೆ. ಇಂತಹ ಮನುಷ್ಯ ಮುಖ್ಯಮಂತ್ರಿಗೆ ಡಾಕು ಎನ್ನುವುದಾದರೆ ನೀನು ಯಾರು? ಎಂದು ಖಾರವಾಗಿ ಪ್ರಶ್ನಿಸಿದರು.