ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಕುಟುಂಬದ ಧ್ವೇಷ ಭಾಷಣ ಮಾಡಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ನಗರದ ಜಟ್ಕಾ ಸ್ಟ್ಯಾಂಡ್ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು.

ಉಡುಪಿ: ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಕುಟುಂಬದ ಧ್ವೇಷ ಭಾಷಣ ಮಾಡಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ನಗರದ ಜಟ್ಕಾ ಸ್ಟ್ಯಾಂಡ್ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ರಾಜ್ಯ ಕಾಂಗ್ರೆಸ್ ವಕ್ತಾರ, ನಿಕೇತ್ ರಾಜ್ ಮೌರ್ಯ, ಕಾಂಗ್ರೆಸಿಗರು ಗಾಂಧಿ ಸಂತತಿಯವರು, ಬಿಜೆಪಿಯವರು ಗೋಡ್ಸೆ ಸಂತತಿಯರು, ಅವರು ಗೋಡ್ಸೆ ಅವರಿಂದ ಪ್ರೇರಣೆ ಪಡೆದಿದ್ದಾರೆ ಎಂದು ಟೀಕಿಸಿದರು.ಯಶ್‌ಪಾಲ್ ಸುವರ್ಣ ಅವರು ರಾಹುಲ್ ಗಾಂಧಿ ವಂಶವನ್ನು ನಾಶ ಮಾಡುವುದಾಗಿ ಹೇಳಿದ್ದಾರೆ. ಆದರೆ ರಾಹುಲ್ ಅವರದ್ದು ಈ ದೇಶಕ್ಕಾಗಿ ರಕ್ತ ಚೆಲ್ಲಿದ ಗಾಂಧಿ ವಂಶ. ದೇಶದ ವಿಭಜನೆಯನ್ನು ತಡೆಯಲು ಇಂದಿರಾ ಗಾಂಧಿ ಪ್ರಾಣ ತ್ಯಾಗ ಮಾಡಿದರು. ಅಂತಾರಾಷ್ಟ್ರೀಯ ಶಾಂತಿ ಕಾಪಾಡುವುದಕ್ಕಾಗಿ ರಾಜೀವ್ ಗಾಂಧಿ ಬಲಿಯಾದರು. ಎಂತಹ ತ್ಯಾಗಕ್ಕೂ ಸಿದ್ದವಿರುವ ಕುಟುಂಬ ಅವರದ್ದು. ಅಂತಹ ವಂಶವನ್ನು ನಾಶ ಮಾಡಲು ಬಿಜೆಪಿಯರಿಗೆ ಸಾಧ್ಯವಿಲ್ಲ ಎಂದರು. ಎಲ್ಲ್ಲಜಿಲ್ಲೆಗಳಲ್ಲೂ ದೂರು: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ, ದೇಶಕ್ಕೆ ಮೂವರು ಪ್ರಧಾನಿಗಳನ್ನು ನೀಡಿದ ಗಾಂಧಿ ಕುಟುಂಬದ ದೇಶ ಪ್ರೇಮ, ಸಾಮಾಜಿಕ ನ್ಯಾಯ ಮತ್ತು ತ್ಯಾಗಗಳ ಇತಿಹಾಸದ ಬಗ್ಗೆ ಉಡುಪಿ ಶಾಸಕರಿಗೆ ಗೊತ್ತಿಲ್ಲ. ಅವರು ಬಾವಿಯೊಳಗೆ ಇರುವ ಕಪ್ಪೆಯಂತೆ ಮಾತನಾಡುತಿದ್ದಾರೆ ಎಂದರು.

ಯಶ್‌ಪಾಲ್ ಸುವರ್ಣ ಅವರ ವಿರುದ್ಧ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ಕಾಂಗ್ರೆಸ್ ಕಾರ್ಯಕರ್ತರು ದೂರು ದಾಖಲಿಸಲಿದ್ದಾರೆ. ಉಡುಪಿಯಲ್ಲಿ ಆರಂಭವಾಗಿರುವ ಈ ಪ್ರತಿಭಟನೆ ರಾಜ್ಯದ ಎಲ್ಲ ಕಡೆಗಳಲ್ಲಿಯೂ ನಡೆಸಲಾಗುವುದು ಎಂದರು. ನಂತರ ಮಾತನಾಡಿದ ವಕೀಲ ಸುಧೀರ್ ಕುಮಾರ್ ಮುರೋಳಿ, ಶಾಸಕರಾದವರಿಗೆ ರಾಜಕೀಯವಾಗಿ ಮಾತನಾಡುವಾಗ ಭಾಷೆ ಸರಿಯಾಗಿರಬೇಕು ಎಂದರು.ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಪಕ್ಷದ ಪ್ರಮುಖರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ರಮೇಶ್ ಕಾಂಚನ್, ಗೀತಾ ವಾಗ್ಳೆ, ವೆರೋನಿಕಾ ಕರ್ನೆಲಿಯೋ, ಪ್ರಶಾಂತ್ ಜತ್ತನ್ನ, ಶುಭದ್ ರಾವ್, ಅಮೃತ್ ಶೆಣೈ, ಕಿಶನ್ ಹೆಗ್ಡೆ ಕೊಳ್ಕೆಬೈಲು, ನರಸಿಂಹ ಮೂರ್ತಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಡಾ. ಸುನೀತಾ ಶೆಟ್ಟಿ ಮುಂತಾದವರು ನೇತೃತ್ವ ವಹಿಸಿದ್ದರು.