ರಾಯಚೂರಿಗೆ ಕುಡಿಯುವ ನೀರು, ಟೇಲೆಂಡ್ ಭಾಗಕ್ಕೆ ನೀರು ಹರಿಸುವ ಉದ್ದೇಶದಿಂದ ತುಂಗಭದ್ರಾ ಎಡದಂಡೆ ನಾಲೆಯ 47ನೇ ಮೈಲ್ ಕೆಳಭಾಗದ ವಿವಿಧ ವಿತರಣಾ ಕಾಲುವೆಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಲು ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಧೋರಣೆಯನ್ನು ಪಕ್ಷಾತೀತವಾಗಿ ಖಂಡಿಸಿ 36ನೇ ವಿತರಣಾ ಕಾಲುವೆ ಬಳಿ ಮಂಗಳವಾರ ಬೃಹತ್ ಪ್ರತಿಭಟನೆಗೆ ನಿರ್ಧರಿಸಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ರಾಯಚೂರಿಗೆ ಕುಡಿಯುವ ನೀರು, ಟೇಲೆಂಡ್ ಭಾಗಕ್ಕೆ ನೀರು ಹರಿಸುವ ಉದ್ದೇಶದಿಂದ ತುಂಗಭದ್ರಾ ಎಡದಂಡೆ ನಾಲೆಯ 47ನೇ ಮೈಲ್ ಕೆಳಭಾಗದ ವಿವಿಧ ವಿತರಣಾ ಕಾಲುವೆಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಲು ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಧೋರಣೆಯನ್ನು ಪಕ್ಷಾತೀತವಾಗಿ ಖಂಡಿಸಿ 36ನೇ ವಿತರಣಾ ಕಾಲುವೆ ಬಳಿ ಮಂಗಳವಾರ ಬೃಹತ್ ಪ್ರತಿಭಟನೆಗೆ ನಿರ್ಧರಿಸಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.ಅವರು ಸೋಮವಾರ ನಗರದ ಕೋಟೆ ವೀರಣ್ಣ ಕಲ್ಯಾಣ ಮಂಟಪದಲ್ಲಿ ರೈತರ ಪಕ್ಷಾತೀತ ಸಭೆಯಲ್ಲಿ ಮಾತನಾಡಿದರು. ಯಾರೊಬ್ಬ ಶಾಸಕರೊಂದಿಗೆ ಚರ್ಚಿಸದೆ ಸಿಂಧನೂರು ಹಾಗೂ ಕೆಳಭಾಗದ ತಾಲೂಕುಗಳಲ್ಲಿ ಸೆ.22 ರಿಂದ ಅ.30 ರವರೆಗೆ ವಿವಿಧ ಉಪಕಾಲುವೆಗಳನ್ನು ಬಂದ್ ಮಾಡಿ ರಾಯಚೂರಿಗೆ ನೀರು ತೆಗೆದುಕೊಂಡು ಹೋಗಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ತಾವು ಜಿಲ್ಲೆಯ ಶಾಸಕರಿಗೆ, ಜಲಸಂಪನ್ಮೂಲ ಸಚಿವರಿಗೆ, ಎಂ.ಡಿ. ಅವರಿಗೆ, ಉಸ್ತುವಾರಿ ಸಚಿವರನ್ನು ಸಂಪರ್ಕ ಮಾಡಿದಾಗ ಜಿಲ್ಲಾಧಿಕಾರಿಗಳು ತಮ್ಮೊಂದಿಗೆ ಚರ್ಚಿಸಿಲ್ಲ ಎಂದು ಹೇಳಿದರು. ಉಪಕಾಲುವೆಗಳನ್ನು ಬಂದ್ ಮಾಡಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ವಿಭಾಗೀಯ ಆಯುಕ್ತರಿಗೆ ಮಾತ್ರ ಅಧಿಕಾರ ಇದೆ ಎಂದು ಹೇಳಿದರು.
ನಿನ್ನೆ ಸಂಜೆ ಜಿಲ್ಲಾಧಿಕಾರಿಗಳು ದೂರವಾಣಿ ಕರೆ ಮಾಡಿ ಚರ್ಚಿಸಿದರು. ಉಪಕಾಲುವೆಗಳ ಬಂದ್ ಮಾಡಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗಿಲ್ಲ. ಎಲ್ಲರೊಂದಿಗೆ ಚರ್ಚೆ ಮಾಡಬೇಕಿತ್ತು. ಐ.ಸಿ.ಸಿ. ಸಭೆಯ ನಿರ್ಧಾರದಂತೆ ಉಪಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಮಳೆಯಿಲ್ಲದೇ ಹಳ್ಳ, ನದಿ ಬತ್ತಿ ಹೋಗಿವೆ. ಹೊಲಗಳಲ್ಲಿ ನೀರು ಹರಿಯುತ್ತಿಲ್ಲ. ನಿಮ್ಮ ಆದೇಶ ರೈತರಲ್ಲಿ ಗೊಂದಲ ಮೂಡಿಸಿದೆ. ಯಾವುದೇ ಪರಿಸ್ಥಿತಿಯಲ್ಲೂ ಕಾಲುವೆಗಳ ಬಂದ್ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾಗಿ ಸಭೆಗೆ ಬಾದರ್ಲಿ ಹೇಳಿದರು.ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಏರಿಯಾ ಕಡಿಮೆ, ಐಸಿಸಿ ಅಧ್ಯಕ್ಷರು, ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು ಹೊಟ್ಟೆ ತುಂಬ ಊಟ ಮಾಡಿ ಆರಾಮಾಗಿದ್ದಾರೆ. ಮಧ್ಯದಲ್ಲಿ ನಾವಿದ್ದೇವೆ. ನೀರಾವರಿ ಪ್ರದೇಶವೂ ನಮ್ಮ ತಾಲೂಕಿನಲ್ಲೇ ಅಧಿಕ. ಹಂಚಿಕೆಯಾದಷ್ಟು ನೀರು ಸಿಗುತ್ತಿಲ್ಲ. ಕೆಳ ಭಾಗಕ್ಕೆ ಸತತ ಸಮಸ್ಯೆ ಇದೆ. ಯಾವುದೇ ಪರಿಸ್ಥಿತಿಯಲ್ಲೂ ಉಪಕಾಲುವೆಗಳ ಬಂದ್ ಮಾಡಲು ಬಿಡಬಾರದು. ಯಾವ ಅಧಿಕಾರಿಗಳು ಇಲ್ಲಿಗೆ ಬರದಂತೆ ತಡೆಯಬೇಕು. ನಾಳೆ ಹೆಚ್ಚಿನ ಸಂಖ್ಯೆಯಲ್ಲಿ 36ನೇ ಉಪಕಾಲುವೆ ಹತ್ತಿರ ರೈತರು ಸೇರಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ, ಶಾಸಕರೊಂದಿಗೆ ಜಿಲ್ಲಾಧಿಕಾರಿಗಳು ಚರ್ಚಿಸದೇ ಆದೇಶ ಮಾಡಿದ್ದು, ಹಕ್ಕುಚ್ಯುತಿಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ವಿರುದ್ದ ದೂರು ನೀಡಿ ಎಂದು ಶಾಸಕರಿಗೆ ಸಲಹೆ ನೀಡಿದ ನಾಡಗೌಡ, ನಾಳೆ ಏನದರೂ ಸಮಸ್ಯೆಯಾದರೆ ಜಿಲ್ಲಾಧಿಕಾರಿಗಳೇ ಹೊಣೆಯಾಗುತ್ತಾರೆ. ಈ ಸರಕಾರದಲ್ಲಿ ಅಧಿಕಾರಿಗಳು ಆಟ ಆಡುತ್ತಿದ್ದಾರೆ. ಐಸಿಸಿ ನಿರ್ಧಾರ ಬದಲಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗಿಲ್ಲ. ರಾಯಚೂರಿಗೆ ಕುಡಿಯುವ ನೀರು ಪೂರೈಕೆ ಮಾಡಲು ನಮ್ಮ ಸರ್ಕಾರ ಇದ್ದಾಗ 250 ಕೋಟಿ ರು. ವೆಚ್ಚದಲ್ಲಿ ಗೂಗಲ್ ಬಳಿ ಬ್ಯಾರೇಜ್ ನಿರ್ಮಿಸಲಾಗಿದೆ. ಕೃಷ್ಣ ನದಿಯಿಂದ ನೀರು ಪಡೆಯಬಹುದು. ಇದರಿಂದ ಯಾರಿಗೂ ತೊಂದರೆಯಿಲ್ಲ. ನಾಳೆ 10-15 ಸಾವಿರ ರೈತರು ಸೇರುವ ಮೂಲಕ ಶಕ್ತಿ ಪ್ರದರ್ಶನ ಮಾಡೋಣ ಎಂದು ಹೇಳಿದರು.ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಂದ ನೂರಾರು ರೈತರು ಸಭೆಯಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡಿದರು.