ಅಗ್ನಿ ಅವಘಡದ ಅಪಾಯ ತಡೆಗೆ ಶೀಘ್ರ ಕ್ರಮ ಅಗತ್ಯ: ಡಿ.ಕೆ.ಸಂತೋಷ್ ಕುಮಾರ್

KannadaprabhaNewsNetwork | Published : Apr 24, 2025 12:06 AM

ಸಾರಾಂಶ

ನರಸಿಂಹರಾಜಪುರ, ಅಗ್ನಿ ಅವಘಡಗಳು ಆಕಸ್ಮಿಕವಾಗಿ ನಡೆಯುವ ಘಟನೆಗಳಾಗಿದ್ದು ಆ ಸಂದರ್ಭದಲ್ಲಿ ಎದೆ ಗುಂದದೆ ತಕ್ಷಣ ಅಗ್ನಿ ನಂದಿಸುವ ಕಾರ್ಯ ಮಾಡಬೇಕು ಎಂದು ಅಗ್ನಿ ಶಾಮಕದಳದ ಪ್ರಮುಖ್ ಡಿ.ಕೆ.ಸಂತೋಷ್ ಕುಮಾರ್ ಸಲಹೆ ನೀಡಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಅಗ್ನಿ ಸುರಕ್ಷಾ ಸಪ್ತಾಹ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಅಗ್ನಿ ಅವಘಡಗಳು ಆಕಸ್ಮಿಕವಾಗಿ ನಡೆಯುವ ಘಟನೆಗಳಾಗಿದ್ದು ಆ ಸಂದರ್ಭದಲ್ಲಿ ಎದೆ ಗುಂದದೆ ತಕ್ಷಣ ಅಗ್ನಿ ನಂದಿಸುವ ಕಾರ್ಯ ಮಾಡಬೇಕು ಎಂದು ಅಗ್ನಿ ಶಾಮಕದಳದ ಪ್ರಮುಖ್ ಡಿ.ಕೆ.ಸಂತೋಷ್ ಕುಮಾರ್ ಸಲಹೆ ನೀಡಿದರು.

ಬುಧವಾರ ಸರ್ಕಾರಿ ಆಸ್ಪತ್ರೆಯಲ್ಲಿ ಅಗ್ನಿಶಾಮಕ ಇಲಾಖೆಯಿಂದ ಸರ್ಕಾರಿ ಆಸ್ಪತ್ರೆ ತಜ್ಞ ವೈದ್ಯರು, ವೈದ್ಯರು ಮತ್ತು ಸಿಬ್ಬಂದಿ ವರ್ಗದವರಿಗೆ, ಸಾರ್ವಜನಿಕರಿಗೆ ಅಗ್ನಿ ಅವಘಡ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಅಣಕು ಪ್ರದರ್ಶನದಲ್ಲಿ ಮಾತನಾಡಿ, ಸ್ವಯಂ ರಕ್ಷಣೆ ಹಾಗೂ ಸಾರ್ವಜನಿಕ ಆಸ್ತಿ ರಕ್ಷಿಸಲು ಮೊದಲು ಅಗ್ನಿ ದುರಂತ ಸಂಭವಿಸಿ ರುವಂತಹ ಮೂಲ ತಿಳಿದುಕೊಳ್ಳಬೇಕು. ಗ್ಯಾಸ್ ದುರಂತ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಯಾವುದಾದರೂ ರಾಸಾಯನಿಕದ ಮೂಲಕ ಅಗ್ನಿ ಅವಘಡ ಸಂಭವಿಸಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಅದನ್ನ ನಿರ್ವಹಣೆ ಮಾಡುವುದು ಹೇಗೆ ಹಾಗೂ ಇತರರನ್ನು ರಕ್ಷಿಸುವುದು ಹೇಗೆ ಎಂಬ ವಿಷಯಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.ತಾಲೂಕು ಆರೋಗ್ಯ ಅಧಿಕಾರಿ ಡಾ.ನರಸಿಂಹಮೂರ್ತಿ ಮಾತನಾಡಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಅಡಿ ಏ.21 ರಿಂದ 26ರವರೆಗೆ ಅಗ್ನಿ ಸುರಕ್ಷಾ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಇಂದು ನಮ್ಮ ಆಸ್ಪತ್ರೆಯ ಎಲ್ಲ ಸಿಬ್ಬಂದಿಗೆ ಅಗ್ನಿ ಅವಘಡದ ಬಗ್ಗೆ, ಅದರ ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ ಹಮ್ಮಿಕೊಂಡಿದ್ದೇವೆ. ಸಾರ್ವಜನಿಕ ಆಸ್ಪತ್ರೆ ರಕ್ಷಣೆ ಮಾಡುವುದು ಎಲ್ಲ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣ ವಾಗಿದ್ದು ಇದರಿಂದ ಎಲ್ಲಾ ಸಿಬ್ಬಂದಿಗಳಲ್ಲಿ ಆತ್ಮಸ್ಥೈರ್ಯ ಬರುತ್ತದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಯಾವುದೇ ಅವಘಡಗಳು ಸಂಭವಿಸಿದಂತೆ ಸರ್ಕಾರದಿಂದ ಪೂರ್ವಸಿದ್ಧತೆ ಕಲ್ಪಿಸಿದ್ದು ಎಂತಹ ಪರಿಸ್ಥಿತಿಯಲ್ಲೂ ಹೆದರದೆ ಅಲ್ಪ ಪ್ರಮಾಣದ ಅಗ್ನಿ ಅವಘಡವನ್ನು ಸಹ ನಿರ್ಲಕ್ಷಿಸದೆ ನಿಯಂತ್ರಿಸಬೇಕು ಎಂದರು. ಈ ಸಂದರ್ಭದಲ್ಲಿ ತಜ್ಞ ವೈದ್ಯರಾದ ಡಾ.ವಿನಯ್, ಡಾ. ವೀರ ಪ್ರಸಾದ್, ಡಾ. ಲಿಂಗರಾಜ್, ಡಾ. ಶ್ರೀನಿವಾಸ್ ,ಡಾ. ನಿಶಾಲ್ ವಸಂತ್, ಡಾ. ಆಕರ್ಷ್,ಅಗ್ನಿಶಾಮಕ ಠಾಣಾಧಿಕಾರಿ ಪಿ.ರಮೇಶ್ , ಅಗ್ನಿಶಾಮಕ ಇಲಾಖೆ ಅಗ್ನಿ ಪ್ರಮುಖರಾದ, ಪ್ರವೀಣ್, ಸಂಜೀವ ಪೂಜಾರಿ, ನವೀನ್, ಲೋಹಿತ್ ಮತ್ತು ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿ, ಸಿಬ್ಬಂದಿ ಸಾರ್ವಜನಿಕರು ಉಪಸ್ಥಿತರಿದ್ದರು.

Share this article