ಕನ್ನಡಪ್ರಭ ವಾರ್ತೆ ಹಾಸನ
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ೨೦೨೫-೨೬ನೇ ಸಾಲಿನ ಬಿಕ್ಕಟ್ಟನ್ನು ಶಾಸನ ಬದ್ಧ ಸರ್ಕಾರದ ಹಂತದಲ್ಲೇ ಯು.ಜಿ.ಸಿ/ನಾನ್-ಯು.ಜಿ.ಸಿ ಎಂಬ ತಾರತಮ್ಯ ಮಾಡದೇ ಕ್ಯಾಬಿನೆಟ್ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಹಾಸನ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಇದೇ ವೇಳೆ ಹಾಸನ ಜಿಲ್ಲಾ ಘಟಕದ ಅಧ್ಯಕ್ಷರಾದ ಯತೀಶ್ ಕಬ್ಬಾಳು ಮಾತನಾಡಿ, ರಾಜ್ಯದ ೪೩೨ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹತ್ತು, ಹದಿನೈದು ಮತ್ತು ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲಗಳಿಂದ ೧೧ ಸಾವಿರ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಇವರಲ್ಲಿ ೫,೬೨೩ ಅತಿಥಿ ಉಪನ್ಯಾಸಕರು ಯುಜಿಸಿ ಅರ್ಹತೆ ಪಡೆದವರಿದ್ದು, ಉಳಿದ ೫,೩೫೩ ಅತಿಥಿ ಉಪನ್ಯಾಸಕರು ನಾನ್-ಯುಜಿಸಿ ಅವರುಗಳಾಗಿರುತ್ತಾರೆ. ಅದೇ ರೀತಿ ಸಾವಿರಾರು ಅತಿಥಿ ಉಪನ್ಯಾಸಕರು ಎಂ. ಫೀಲ್ ಪದವಿ ಪಡೆದವರು ಸಹ ಇದ್ದಾರೆ. ಇವರೆಲ್ಲರೂ ಹತ್ತಾರೂ ವರ್ಷಗಳ ಕಾಲ ಬೋಧನಾ ಅನುಭವ, ಬೋಧನಾ ಕೌಶಲ್ಯ ಹೊಂದಿ ಇದುವರೆಗೂ ಗುಣಮಟ್ಟದ ಪಾಠ ಪ್ರವಚನ ಮಾಡುತ್ತಾ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ದಾರಿದೀಪವಾಗಿದ್ದೇವೆ. ನಮ್ಮಿಂದ ಬೋಧನಾ ಲಾಭ ಪಡೆದ ಲಕ್ಷಾಂತರ ವಿದ್ಯಾರ್ಥಿಗಳು ಇಂದು ಅನೇಕ ಉನ್ನತ ಹುದ್ದೆಗಳಲ್ಲಿ ಅವಕಾಶಗಳನ್ನು ಪಡೆದು ಕಾರ್ಯ ನಿರ್ವಹಿಸುತ್ತಿರುತ್ತಾರೆ ಎಂದರು.ಯುಜಿಸಿ ಅರ್ಹತೆ ಪಡೆದಿಲ್ಲ ಎಂಬ ಕಾರಣದಿಂದ ಶೈಕ್ಷಣಿಕ ಗುಣಮಟ್ಟ ಕುಸಿದಿಲ್ಲ. ಇದುವರೆಗೂ ಯುಜಿಸಿ ನಿಯಮಾವಳಿಗಳಲ್ಲಿ ಸೂಚಿಸಿರುವಂತೆ ಕಾಯಂ ಅಧ್ಯಾಪಕರಿಗೆ ನೀಡಿರುವ ಯಾವುದೇ ರಿತೀಯ ಸವಲತ್ತುಗಳನ್ನು ಪಡೆಯದೇ ತಾತ್ಕಾಲಿಕ ನೌಕರರಾಗಿಯೇ, ಯುಜಿಸಿ ಶಿಫಾರಸು ಮಾಡಿರುವ ವೇತನವು ಇಲ್ಲದೇ, ಕರ್ನಾಟಕ ಸರ್ಕಾರ ನಿಗದಿ ಪಡಿಸಿರುವ ಶೈಕ್ಷಣಿಕ ವರ್ಷಗಳಲ್ಲಿ ೧೦ ತಿಂಗಳಿಗೆ ಮಾತ್ರ (ಈ ಹಿಂದಿನ ಸರ್ಕಾರದ ಅವಧಿಯಲ್ಲಿ ೮ ರಿಂದ ೯ ತಿಂಗಳುಗಳಿಗೆ ಮಾತ್ರ) ಕನಿಷ್ಠ ಗೌರವಧನ ಪಡೆದು ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ (ಅಡ್-ಹಾಕ್) ತಾತ್ಕಾಲಿಕ ವ್ಯವಸ್ಥೆಯ ಅಡಿಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುತ್ತೇವೆ. ಜೊತೆಗೆ ಈಗಾಗಲೇ ಘನ ನ್ಯಾಯಲಯಗಳು "ಒಬ್ಬ ತಾತ್ಕಾಲಿಕ ನೌಕರನ ಸ್ಥಾನವನ್ನು ಮತ್ತೊಬ್ಬ ತಾತ್ಕಾಲಿಕ ನೌಕರನನ್ನು ಸ್ಥಳಾಂತರಿಸಲು ಅವಕಾಶ ಇಲ್ಲ " ಎಂದು ತೀರ್ಪು ನೀಡಿದೆ. ಇದರ ಆಧಾರದ ಮೇಲೆ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಸೇವೆಯಿಂದ ತೆರವು ಮಾಡದಂತೆ ತೆಡೆಯಾಜ್ಞೆಯನ್ನು ತಂದಿದ್ದಾರೆ. ಜೊತೆಗೆ ಕಾಲೇಜು ಶಿಕ್ಷಣ ಇಲಾಖೆ ಯಾವುದೇ ಅತಿಥಿ ಉಪನ್ಯಾಸಕರನ್ನು ನೂತನ ಖಾಯಂ ನೇಮಕಾತಿ, ಅಥವಾ ವರ್ಗಾವಣೆ, ನಿಯೋಜನೆ ಸಂದರ್ಭದಲ್ಲಿ ಮತ್ತು ಕಾರ್ಯಭಾರದ ಕೊರತೆ ಆದ ಸಂದರ್ಭದಲ್ಲಿ ಮಾತ್ರ ಅತಿಥಿ ಉಪನ್ಯಾಸಕರ ಸ್ಥಾನ ತೆರವುಗೊಳಿಸಬಹುದು ಎಂದು ಪ್ರತಿ ನೇಮಕಾತಿ ಸುತ್ತೋಲೆಗಳಲ್ಲಿ ಪ್ರಸ್ತಾಪ ಮಾಡಿದೆ.
ರಾಜ್ಯದ ಶೇಕಡ ೭೦ರಷ್ಟು ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಸೇವೆಯನ್ನು ಅವಲಂಭಿಸಿವೆ. ಕಳೆದ ಒಂದು ತಿಂಗಳಿಂದ ಸರಿಯಾಗಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳು ನಡೆಯುತ್ತಿಲ್ಲ. ಜೊತೆಗೆ ಇದೇ ವೃತ್ತಿಯನ್ನು ನಂಬಿ ದಶಕಗಳಿಂದ ಪಾಠ ಪ್ರವಚನ ಮಾಡುತ್ತಾ ಬಂದಿರುವ ಅತಿಥಿ ಉಪನ್ಯಾಸಕರ ಬದುಕು ಈಗ ಅತಂತ್ರವಾಗಿದೆ. ಕಳೆದ ಒಂದೂವರೆ ತಿಂಗಳಿಂದ ಗೌರವಧನವೂ ಇಲ್ಲದೆ ನಮ್ಮ ಬದುಕು ಮತ್ತು ನಮ್ಮಗಳನ್ನೇ ನಂಬಿರುವ ಕುಟುಂಬಗಳ ಸ್ಥಿತಿಯು ಹೇಳತೀರದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸನಬದ್ದ ಅಧಿಕಾರವಿರುವುದು ಶಾಸಕಾಂಗಕ್ಕೆ, ಶಾಸಕಾಂಗವೇ ಕಾನೂನಿನ ನಿರ್ಮಾಪಕನಾಗಿರುವುದರಿಂದ ಹತ್ತಾರು ದಶಕಗಳಿಂದ ನಮ್ಮಿಂದ ತಾತ್ಕಾಲಿಕ ಸೇವೆ ಪಡೆದ ಸರ್ಕಾರ ಮತ್ತು ಇಲಾಖೆ ನಮ್ಮನ್ನು ತಾತ್ಕಾಲಿಕ ಸೇವೆಯಲ್ಲಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವೇ ತೀರ್ಮಾನ ಕೈಗೊಳ್ಳಲು ಆಗ್ರಹ ಪೂರ್ವಕ ಮನವಿ ಮಾಡುತ್ತಾ, ೨೦೨೫-೨೬ ನೇ ಸಾಲಿನ ಅತಿಥಿ ಉಪನ್ಯಾಸಕರ ನೇಮಕಾತಿಯ ಬಿಕ್ಕಟ್ಟನ್ನು ಶಾಸನ ಬದ್ದ ಸರ್ಕಾರದ ಹಂತದಲ್ಲೇ ಯಾವುದೇ ತಾರತಮ್ಯ ಮಾಡದೆ ನಿರ್ಣಯ ಕೈಗೊಳ್ಳುವಂತೆ ರಾಜ್ಯಾದ್ಯಂತ ವಿವಿಧ ಜನಪರ ಸಂಘಟನೆ ಮತ್ತು ಹೋರಾಟಗಾರರ ಬೆಂಬಲದೊಂದಿಗೆ ಧರಣಿ ಸತ್ಯಾಗ್ರಹ ನಡೆಸುವುದರ ಮೂಲಕ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.ಧರಣಿಯಲ್ಲಿ ಅತಿಥಿ ಉಪನ್ಯಾಸಕರಾದ ಸಂತೋಷ್, ಮಂಜುನಾಥ್, ಮಹೇಶ್, ಪುಟ್ಟಸ್ವಾಮಿ, ಸುಧಾ, ಹರಿಣಿ, ಮಾನಸ, ಶೃತಿ ಶ್ರೀನಿವಾಸ್ ಸೇರಿದಂತೆ ಜಿಲ್ಲೆಯ ಹಲವಾರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಪಾಲೊಂಡಿದ್ದರು.