ಉದ್ದಗಟ್ಟ ಸಂತ್ರಸ್ತರಿಗೆ ಕೂಡಲೇ ಗಂಜಿ ಕೇಂದ್ರ ತೆರೆಯಿರಿ

KannadaprabhaNewsNetwork | Published : Oct 29, 2024 12:47 AM

ಸಾರಾಂಶ

ಜಗಳೂರು ತಾಲೂಕಿನ ಉದ್ದಗಟ್ಟದಲ್ಲಿ ಕೆರೆ ನೀರು ನುಗ್ಗಿದ ಪರಿಣಾಮ 25ಕ್ಕಿಂತ ಹೆಚ್ಚು ಮನೆಗಳು ಜಲಾವೃತವಾಗಿ ಮುಳುಗಡೆಯಾಗಿವೆ. 7 ದಿನಗಳಿಂದ ಇಲ್ಲಿಯ ಜನರ ಜೀವನ ಅಸ್ತ್ಯವ್ಯಸ್ತವಾಗಿದೆ. ಈ ಹಿನ್ನೆಲೆ ಶನಿವಾರ ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ ಮತ್ತು ಎಚ್.ಪಿ. ರಾಜೇಶ್ ಮಳೆಹಾನಿ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವಿಕ ಪರಿಸ್ಥಿತಿ ಪರಿಶೀಲಿಸಿ, ನಿರಾಶ್ರಿತರಿಗೆ ಸಾಂತ್ವನ ಹೇಳಿದ್ದಾರೆ.

- ಗ್ರಾಮಕ್ಕೆ ಭೇಟಿಯಿತ್ತ ಮಾಜಿ ಶಾಸಕರಾದ ರಾಮಚಂದ್ರ, ರಾಜೇಶ್‌ಗೆ ಸಂತ್ರಸ್ತರ ಒಕ್ಕೊರಲ ಆಗ್ರಹ

- - -

- 25ಕ್ಕೂ ಅಧಿಕ ಮನೆಗಳು ಜಲಾವೃತವಾಗಿ ವಾರದಿಂದ ಸಂತ್ರಸ್ತರ ಬದುಕು ಅತಂತ್ರ

- ಶಾಲೆ/ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರ ತೆರೆಯಲು ತಹಸೀಲ್ದಾರ್‌ಗೆ ಸೂಚನೆ - - - ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ ಉದ್ದಗಟ್ಟದಲ್ಲಿ ಕೆರೆ ನೀರು ನುಗ್ಗಿದ ಪರಿಣಾಮ 25ಕ್ಕಿಂತ ಹೆಚ್ಚು ಮನೆಗಳು ಜಲಾವೃತವಾಗಿ ಮುಳುಗಡೆಯಾಗಿವೆ. 7 ದಿನಗಳಿಂದ ಇಲ್ಲಿಯ ಜನರ ಜೀವನ ಅಸ್ತ್ಯವ್ಯಸ್ತವಾಗಿದೆ. ಈ ಹಿನ್ನೆಲೆ ಶನಿವಾರ ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ ಮತ್ತು ಎಚ್.ಪಿ. ರಾಜೇಶ್ ಮಳೆಹಾನಿ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವಿಕ ಪರಿಸ್ಥಿತಿ ಪರಿಶೀಲಿಸಿ, ನಿರಾಶ್ರಿತರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭ ನಿರಾಶ್ರಿತರು ಮಾತನಾಡಿ, ತಾಲೂಕು ಆಡಳಿತಕ್ಕೆ ಗಂಜಿ ಕೇಂದ್ರ ತೆರೆಯಲು ಮನವಿ ಸಲ್ಲಿಸಿದ್ದೇವೆ. ಆದರೂ ಹಾಲಿ ಶಾಸಕರು, ತಾಲೂಕು ತಹಸೀಲ್ದಾರ್ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಂತ್ರಸ್ತರ ಕಷ್ಟಗಳ ಆಲಿಸಲು ಇದುವರೆಗೂ ಯಾರೂ ಬಂದಿಲ್ಲ ಎಂದು ಅಳಲು ತೋಡಿಕೊಂಡರು.

ಗ್ರಾಮ ಮುಖಂಡರು ಮಾತನಾಡಿ, ಹಿರೇಮಲ್ಲನಹೊಳೆ ಗ್ರಾಮದಲ್ಲಿ ನಿರಾಶ್ರಿತರಿಗೆ ಗಂಜಿ ಕೇಂದ್ರ ತೆರೆದು, ಊಟ- ವಸತಿ ಕಲ್ಪಿಸಿರುವುದು ಸಂತಸದ ವಿಚಾರ. ಇದೇ ರೀತಿ ಉದ್ದಗಟ್ಟ ಗ್ರಾಮದಲ್ಲಿಯು ಗಂಜಿ ಕೇಂದ್ರ ತೆರೆಯಬೇಕು. ಸರ್ಕಾರದಿಂದ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಕೂಡಲೇ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ ಮತ್ತು ಎಚ್.ಪಿ. ರಾಜೇಶ್ ನಿರಾಶ್ರಿತರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮಾತನಾಡಿ, ಅನೇಕ ವರ್ಷಗಳ ನಂತರ ಭಾರಿ ಮಳೆಯಾಗಿದೆ. ಕೆರೆ-ಕಟ್ಟೆಗಳಲ್ಲಿ ನೀರು ತುಂಬಿ ಗ್ರಾಮಗಳಿಗೆ ನುಗ್ಗಿದೆ. ಮನೆ ಕಳೆದುಕೊಂಡವರು ಆತಂಕಪಡುವುದು ಬೇಡ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರು.

ಸ್ಥಳದಿಂದಲೇ ತಹಸೀಲ್ದಾರ್‌ಗೆ ಕರೆ ಮಾಡಿದ ಎಸ್.ವಿ.ರಾಮಚಂದ್ರ ಅವರು, ಉದ್ದಗಟ್ಟದಲ್ಲಿ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕವಾಗಿ ಶಾಲೆ ಅಥವಾ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರ ತೆರೆದು ಊಟ ಮತ್ತು ವಸತಿ ವ್ಯವಸ್ಥೆಗಳನ್ನು ತುರ್ತಾಗಿ ಕಲ್ಪಿಸಬೇಕು. ಎಲ್ಲ ಕುಟುಂಬಗಳನ್ನು ಸ್ಥಳಾಂತರಿಸಿ, ಶಾಶ್ವತವಾಗಿ ಒಂದು ಕಡೆ ನಿವೇಶನ ನೀಡಲು ತಾಲೂಕು ಆಡಳಿತ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭ ತಾ.ಪಂ. ಮಾಜಿ ಸದಸ್ಯ ಕುಬೇಂದ್ರಪ್ಪ, ಮುಖಂಡರಾದ ಬಿಸ್ತುವಳ್ಳಿ ಬಾಬು, ಮರುಳಾರಾಧ್ಯ, ಇಂದ್ರೇಶ್, ಅರವಿಂದ್ ಪಾಟೀಲ್, ಸೂರಲಿಂಗಪ್ಪ, ಬಾಣೇಶ್, ರಘು ಜಾಗ್ವಾರ್ ಖಾಸಿಂ, ಗ್ರಾಮದ ಮುಖಂಡರಾದ ಅಜ್ಜಯ್ಯ ಮಂಜುನಾಥ್ ಮತ್ತಿತರರಿದ್ದರು.

- - - -28ಜೆಜಿಎಲ್1:

ಜಗಳೂರು ತಾಲೂಕಿನ ಉದ್ದಗಟ್ಟದಲ್ಲಿ ಕೆರೆ ನೀರು ನುಗ್ಗಿದ ಪರಿಣಾಮ 25ಕ್ಕಿಂತ ಹೆಚ್ಚು ಮನೆಗಳು ಜಲಾವೃತ ಆಗಿರುವ ಪ್ರದೇಶಕ್ಕೆ ಶನಿವಾರ ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ ಮತ್ತು ಎಚ್.ಪಿ.ರಾಜೇಶ್ ಗ್ರಾಮಕ್ಕೆ ಭೇಟಿ ನೀಡಿ, ವಾಸ್ತವ ಪರಿಸ್ಥಿತಿ ಪರಿಶೀಲಿಸಿ, ಸಾಂತ್ವನ ಹೇಳಿದರು.

Share this article