ಚನ್ನಪಟ್ಟಣ: ಚನ್ನಪಟ್ಟಣ - ರಾಮನಗರ ಅವಳಿ ನಗರ ಮಾಡುವುದು ನನ್ನ ಕನಸು. ಇಷ್ಟೇ ಅಲ್ಲದೆ ಉಭಯ ನಗರಗಳ ನಡುವೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಬೃಹತ್ ಕೈಗಾರಿಕೆ ಒಂದನ್ನು ಸ್ಥಾಪನೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್ ನಾಯಕರು ನನ್ನನ್ನು ನಿಂದನೆ ಮಾಡಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ನಾನು ಅಭಿವೃದ್ಧಿ ವಿಚಾರ ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದೇನೆ. ಅವರಿಗೂ ನನಗೂ ಇರುವ ವ್ಯತ್ಯಾಸ ಇಷ್ಟೇ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ನಾವು ಟಿಕೆಟ್ ಕೊಡುತ್ತೇವೆ ಎಂದೆವು. ಬಿಜೆಪಿ ಕೂಡ ಟಿಕೆಟ್ ಕೊಡಲು ಮುಂದಾಗಿತ್ತು. ಬಿಜೆಪಿ ವರಿಷ್ಠರ ಮಾತಿಗೆ ತಲೆಬಾಗಿ ನಾವು ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡಲು ನಿರ್ಧಾರ ಮಾಡಿದ್ದೆವು. ಆದರೆ, ಎಲ್ಲರ ಮಾತನ್ನು ಧಿಕ್ಕರಿಸಿ, ಕಾಲಿನಲ್ಲಿ ಒದ್ದು ಅವರು ಕಾಂಗ್ರೆಸ್ ಸೇರಿಕೊಂಡರು. ಈಗ ನೋಡಿದರೆ ಹಾದಿಬೀದಿಯಲ್ಲಿ ಸುಳ್ಳು ಪ್ರಚಾರ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅವರನ್ನು ಪರೋಕ್ಷವಾಗಿ ಟೀಕಿಸಿದರು.ನನ್ನ ಬಗ್ಗೆ, ನನ್ನ ತಂದೆಯ ಬಗ್ಗೆ ಬಹಳ ಕೀಳುಮಟ್ಟದ ಭಾಷೆ ಬಳಕೆ ಮಾಡಿಕೊಂಡು ಟೀಕೆ ಮಾಡುತ್ತಿದ್ದಾರೆ. ಅವರ ಪದ ಬಳಕೆಯ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಚನ್ನಪಟ್ಟಣ ಜನರೇ ತೀರ್ಪು ಕೊಡುತ್ತಾರೆ ಎಂದು ಹೇಳಿದರು.
ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣದಲ್ಲಿ ಎಷ್ಟು ಕೆರೆಗಳು ಇವೆ ಎಂಬುದೇ ಗೊತ್ತಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಹೇಳಿದ್ದಾರೆ. ಆದರೆ, ನಾನು ಏನು ಮಾಡಿದ್ದೇನೆ ಎಂಬುದು ಹಳ್ಳಿಗಳಿಗೆ ಹೋಗಿ ನೋಡಿದರೆ ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.
ನಿಖಿಲ್ ಒಳ್ಳೆಯ ನಾಯಕರಾಗುತ್ತಾರೆ:
ರಾಜ್ಯ ಕಾಂಗ್ರೆಸ್ ಸರ್ಕಾರ ಬರೀ ಭ್ರಷ್ಟಾಚಾರದಲ್ಲಿ ನಿರತವಾಗಿದೆ. ಅಧಿಕಾರಕ್ಕೆ ಬಂದಾಗಿನಿಂದ ಹಗರಣಗಳಲ್ಲಿಯೇ ಮುಳುಗಿದೆ. ಅದರಲ್ಲಿ ಮುಡಾ ಹಗರಣದ ವಿರುದ್ಧ ಬೆಂಗಳೂರಿನಿಂದ ಮೈಸೂರುವರೆಗೂ ನಡೆದ ಪಾದಯಾತ್ರೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರೂ ಪ್ರಮುಖ ಪಾತ್ರ ವಹಿಸಿದ್ದರು. ಅವರಿಗೆ ಮುಂದೆ ಒಳ್ಳೆಯ ನಾಯಕನಾಗಿ ಬೆಳೆಯುವ ಎಲ್ಲಾ ಅವಕಾಶಗಳು ಇವೆ. ಅಂತಹ ಅವಕಾಶಕ್ಕೆ ಚನ್ನಪಟ್ಟಣದ ಜನರೇ ನಾಂದಿ ಹಾಡಬೇಕು ಎಂದು ಒಡೆಯರ್ ಮನವಿ ಮಾಡಿದರು.
28ಕೆಆರ್ ಎಂಎನ್ 1.ಜೆಪಿಜಿ