ಎಸ್ಸಿಎಸ್ಪಿ, ಟಿಎಸ್ಪಿ ಹಣ ಬಳಕೆ ತಕ್ಷಣಕ್ಕೆ ನಿಲ್ಲಿಸಿ

KannadaprabhaNewsNetwork |  
Published : Aug 01, 2024, 12:29 AM IST
ಪ್ರತಿಭಟನೆ | Kannada Prabha

ಸಾರಾಂಶ

ಎಸ್ಸಿಎಸ್ಪಿ, ಟಿಎಸ್ಪಿ ಹಣ ಬಳಕೆ ತಕ್ಷಣಕ್ಕೆ ನಿಲ್ಲಿಸಲು ಆಗ್ರಹಿಸಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ತುಮಕೂರು ಗ್ಯಾರೆಂಟಿ ಯೋಜನೆಗಳಿಗೆ ಎಸ್.ಸಿ.ಎಸ್ ಪಿ ಮತ್ತು ಟಿಎಸ್.ಪಿ ಹಣ ಬಳಕೆಯನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ. ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಜಿಲ್ಲ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನ ಸಂಚಾಲಕ ಎ.ನರಸಿಂಹಮೂರ್ತಿ 2023ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಗೆಲ್ಲುವುದಕ್ಕಾಗಿಯೇ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತು. ಘೋಷಣೆ ಮಾಡುವಾಗ ಪರಿಶಿಷ್ಟ ಜಾತಿ ಪಂಗಡಗಳ ಹಣದಲ್ಲಿ ಗ್ಯಾರಂಟಿಗಳಿಗೆ ಖರ್ಚು ಮಾಡುತ್ತೇವೆಂದು ಘೋಷಣೆ ಮಾಡಲಿಲ್ಲ. ಆದರೆ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಸಾಮಾನ್ಯ ಹಣದಲ್ಲಿ ಖರ್ಚು ಮಾಡದೇ ಪರಿಶಿಷ್ಟ ಜಾತಿ ಪಂಗಡಗಳಿಗೆ ಮೀಸಲಿಟ್ಟ ಹಣದಲ್ಲಿ ಖರ್ಚು ಮಾಡಲಾಗಿದೆ ಎಂದರು.2017-18ರಿಂದ ಅನ್ನ ಭಾಗ್ಯಯೋಜನೆಗೆ ಪರಿಶಿಷ್ಟ ಜಾತಿ,ಪಂಗಡಗಳ ಹಣದಲ್ಲಿ ಹಂಚಿಕೆ ಮಾಡುತ್ತಿದ್ದು, ಆ ವರ್ಷದಿಂದಲೂ ಇಲ್ಲಿಯವರೆಗೂ (2023-24 ವರೆಗೂ) ಪರಿಶಿಷ್ಟ ಜಾತಿ, ಪಂಗಡದ ಕಾರ್ಡ್ ದರರ ವಿವರಗಳನ್ನು ನೀಡಿರುವುದಿಲ್ಲ. ಈ ಯೋಜನೆಯ ಅರ್ಹತೆಯ ಮಾರ್ಗಸೂಚಿಯ ಪ್ರಕಾರ ಆದಾಯ ಮೀತಿಯಲ್ಲೇ ಇರುವವರೆಗೆಲ್ಲ ಕಾರ್ಡ್ ನೀಡುತ್ತೇವೆಂದು ಘೋಷಣೆ ಮಾಡಿಕೊಳ್ಳಲಾಗಿದೆ. ಜಾತಿ ಆಧಾರಿತವಾಗಿ ಮಾರ್ಗಸೂಚಿಯಲ್ಲಿ ಇರುವುದಿಲ್ಲ. ಗೃಹಲಕ್ಷ್ಮೀ ಯೋಜನೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅನುಷ್ಠಾನ ಮಾಡುತ್ತಿದ್ದು ಫಲಾನುಭವಿಗಳ ಮಾಹಿತಿ ಸಿಕ್ಕಿಲ್ಲ. ಅಂದಾಜಿನಲ್ಲಿ ಸಿಗುತ್ತಿದೆ. ಶಕ್ತಿ ಯೋಜನೆ ಗೃಹ ಜ್ಯೋತಿ, ಯುವನಿಧಿ ಈ ಯಾವುದೇ ಯೋಜನೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸೌಲಭ್ಯ ಪಡೆದಿರುವುದಕ್ಕೆ ಇಲಾಖೆಗಳಲ್ಲಿಯು ಮಾಹಿತಿ ಇಲ್ಲ ಮತ್ತು ಸಮಾಜ ಕಲ್ಯಾಣ ಇಲಾಖೆಯಲ್ಲೂ ದಾಖಲೆಗಳಿಲ್ಲ ಎಂದರು.ಕರ್ನಾಟಕ ಪರಿಶಿಷ್ಟ ಜಾತಿಗಳು/ ಪರಿಶಿಷ್ಟ ಪಂಗಡಗಳ ಉಪಹಂಚಿಕೆ ಕಾಯಿದೆ 2013ರಲ್ಲಿ ಆಡಳಿತ ವೆಚ್ಚವನ್ನು ಹೊರೆತುಪಡಿಸಿ ಒಟ್ಟು ಅಭಿವೃದ್ಧಿಗೆ ಖರ್ಚು ಮಾಡುವ ಹಣದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಉಪ ಹಂಚಿಕೆಗೆ ಹಣವನ್ನು ಮೀಸಲಿಡುತ್ತಿದ್ದು, ಮೀಸಲಿಟ್ಟ ಉಪ ಹಂಚಿಕೆ ಹಣದಲ್ಲಿ ಇಲಾಖೆಗಳು ನಿರ್ಮಾಣ ಮಾಡುವ ಹೊಸ ಕಟ್ಟಡಗಳಿಗೆ, ಕಟ್ಟಡ ದುರಸ್ಥಿಗಳಿಗೆ, ಶಾಲಾ-ಕಾಲೇಜು ಕಟ್ಟಡಗಳಿಗೆ, ಹಾಸ್ಟೆಲ್ ಕಟ್ಟಡಗಳಿಗೆ ಮತ್ತು ಇವುಗಳ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳ ಉಪ ಹಂಚಿಕೆ ಹಣವನ್ನು ಖರ್ಚು ಮಾಡಲಾಗುತ್ತಿದೆ. ಆದ್ದರಿಂದ ಸ್ಲಂಜನಾಂದೋಲನ ಕರ್ನಾಟಕ ಸಂಘಟನೆಯು ಗ್ಯಾರಂಟಿ ಯೋಜನೆಗಳಿಗೆ ಈ ಹಣವನ್ನು ಬಳಕೆ ಮಾಡುತ್ತಿರುವುದನ್ನು ಖಂಡಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್‌, ಕಣ್ಣನ್‌, ಜಾಬೀರ್‌ಖಾನ್‌, ಚಕ್ರಪಾಣಿ, ಮೋಹನ್‌ ಟಿ.ಆರ್‌, ಗಣೇಶ, ಮುಬಾರಕ್‌, ಮತ್ತು ಸಾವಿತ್ರಿ ಬಾಪುಲೆ ಮಹಿಳಾ ಘಟಕದ ಅನುಪಮಾ, ಪೂಣಿಮಾ, ಶಾರದಮ್ಮ, ವಸಂತಮ್ಮ, ಗಂಗಾ, ಮಂಗಳಮ್ಮ, ಸುಜಾತ. ತಿಪ್ಪೆಸ್ವಾಮಿ, ಮುಂತಾದವರು ಪಾಲ್ಗೊಂಡಿದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು