ಕೊಟ್ಟೂರು: ಶ್ರಾವಣ ಮಾಸದ ಕೊನೆಯ ಸೋಮವಾರದಂದು ಹಲವು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದ್ದ ತಾಲೂಕಿನ ಶ್ರೀ ಮೂಗಬಸವೇಶ್ವರ ಸ್ವಾಮಿ ರಥೋತ್ಸವ, ಜಾತ್ರೆಗೆ ಚಿರಿಬಿ ಮತ್ತು ರಾಂಪುರ ಗ್ರಾಮಸ್ಥರ ನಡುವಿನ ಆಂತರಿಕ ಸಂಘರ್ಷ ಮತ್ತಿತರ ಕಾರಣಗಳಿಂದಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಕಾರಣಕ್ಕಾಗಿ ಜಿಲ್ಲಾಡಳಿತ ನಿರಂತರ 18 ವರ್ಷ ನಿಷೇಧ ಹೇರುತ್ತ ಬಂದಿದ್ದರೂ ಶ್ರೀಸ್ವಾಮಿಯ ದರ್ಶನಾಶೀರ್ವಾದ ಪಡೆಯಲು ಅಪಾರ ಸಂಖ್ಯೆಯಲ್ಲಿ ಭಕ್ತರು ಸೋಮವಾರ ಆಗಮಿಸಿ ಭಕ್ತಿ ಸಮರ್ಪಿಸಿದರು.
ದೇವಸ್ಥಾನ ಆವರಣದಲ್ಲಿ ಯಾವುದೇ ಗಲಭೆ ಹಾಗೂ ಶಾಂತಿ ಸುವ್ಯವಸ್ಥೆ ಕೆಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರದಿಂದಲೇ ಪೊಲೀಸ್‌ರನ್ನು ಬಂದೋಬಸ್ತ್‌ಗೆ ನಿಯೋಜಿಸಿದೆ. ಬೆಳಗ್ಗಿನಿಂದಲೇ ಬಂದ ಭಕ್ತರಿಗೆ ಪೊಲೀಸರು ದರ್ಶನ ವ್ಯವಸ್ಥೆ ಮಾಡಿದರು. ಬಂದ ಭಕ್ತರೆಲ್ಲಾ ಶೀಘ್ರದಲ್ಲಿ ಎರಡೂ ಗ್ರಾಮಗಳ ಗೊಂದಲ ಬಗೆಹರಿದು ರಥೋತ್ಸವ ನಡೆಯುವಂತಾಗಲಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು.
ಹರಪನಹಳ್ಳಿ: ಇಲ್ಲಿಯ ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಉಪಾದ್ಯಕ್ಷರಾಗಿ ತೊಗರಿಕಟ್ಟಿ ಕ್ಷೇತ್ರದ ಶಕುಂತಲಾ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.ಈ ವರೆಗೂ ಉಪಾಧ್ಯಕ್ಷರಾಗಿದ್ದ ಗೊಂಗಡಿ ನಾಗರಾಜ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಚುನಾವಣೆ ಜರುಗಿತು. ಶಕುಂತಲಾ ಒಬ್ಬರೇ ನಾಮಪತ್ರ ಸಲ್ಲಿಸಿದದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಜಿ.ಎಸ್. ಸುರೇಂದ್ರ ಘೋಷಿಸಿದರು.ಉಪಾಧ್ಯಕ್ಷರಾಗಿ ಆಯ್ಕೆಯಾದ ಶಕುಂತಲಮ್ಮನವರು ಶಾಸಕಿ ಎಂ.ಪಿ. ಲತಾ ನಿವಾಸಕ್ಕೆ ತೆರಳಿ ಕೃತಜ್ಞತೆ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಕುಬೇರಗೌಡ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕನಕನಾ ಬಸ್ಸಾಪುರ ಮಂಜುನಾಥ ಇದ್ದರು.