ಬೆಳ್ತಂಗಡಿ: ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾ.ಪಂ. ವ್ಯಾಪ್ತಿಯ ಎಳನೀರು ಪ್ರದೇಶದಲ್ಲಿ ಈ ಊರು ಪಂಚಾಯಿತಿ ಕಚೇರಿಯಿಂದ 8 ಕಿ.ಮೀ. ಅಂತರದಲ್ಲಿದೆ. ಆದರೂ ಇಲ್ಲಿನ ಜನ ಅಗತ್ಯ ಕೆಲಸಗಳಿಗಾಗಿ ಪಂಚಾಯತಿ ಕಚೇರಿಗೆ ಹೋಗಬೇಕಿದ್ದರೆ 120 ಕಿ.ಮೀ. ಕ್ರಮಿಸಬೇಕು. ಈ ಕುರಿತು ಕನ್ನಡಪ್ರಭ ಪ್ರಕಟಿಸಿದ್ದ ವಿಶೇಷ ವರದಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಸ್ಯೆಗೆ ಸ್ಪಂದಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ರಸ್ತೆ ಅಭಿವೃದ್ಧಿ ಪಡಿಸುವ ಸಲುವಾಗಿ ರು. 295 ಲಕ್ಷ ಅನುದಾನ ಒದಗಿಸಿಕೊಡುವಂತೆ ಅಂದಾಜು ಪಟ್ಟಿಯೊಂದಿಗೆ ಮಂಗಳೂರಿನ ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗದ ನಿರ್ವಾಹಕ ಇಂಜಿನಿಯರ್ ಬೇಡಿಕೆ ಇಟ್ಟಿದ್ದಾರೆ. ‘ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ದಿಡುಪೆಗೆ ಎಳನೀರಿನಿಂದ ಸಂಪರ್ಕ ಕಲ್ಪಿಸುವ ರಸ್ತೆ ಇದೆ. 8 ಕಿ.ಮೀ. ಉದ್ಯದ ಈ ರಸ್ತೆ ಅತ್ಯಂತ ದುರ್ಗಮವಾಗಿದ್ದು, ಬೇಸಿಗೆಯಲ್ಲಿ ಜೀಪ್ ಮತ್ತು ಬೈಕುಗಳಲ್ಲಷ್ಟೇ ಕಷ್ಟಪಟ್ಟು ಸಂಚರಿಸಬಹುದಾಗಿದೆ. ಇದೀಗ ಭಾರೀ ಮಳೆ ಸುರಿದು ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ’ ಎಂಬ ವಿಚಾರ ಕನ್ನಡಪ್ರಭ ವರದಿಯಲ್ಲಿ ಉಲ್ಲೇಖವಾಗಿತ್ತು.ವಿಷಯದ ವಾಸ್ತವಾಂಶದ ಬಗ್ಗೆ ಆದ್ಯತೆಯ ಮೇರೆಗೆ ಪರಿಶೀಲಿಸಿ ತಕ್ಷಣವೇ ಅಗತ್ಯ ಕೈಗೊಂಡು, ಜಿ.ಪಿ.ಎಸ್. ಛಾಯಾಚಿತ್ರಗಳೊಂದಿಗೆ ಅನುಪಾಲನಾ ವರದಿ ಜರೂರಾಗಿ ಕಚೇರಿಗೆ ತಲುಪಿಸುವಂತೆ ಮುಖ್ಯಮಂತ್ರಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ. ವೈಷ್ಣವಿ ತಿಳಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕು ಸಂಸೆ ಗ್ರಾಮದಿಂದ ಆರಂಭಗೊಂಡು ದ.ಕ. ಜಿಲ್ಲೆಯ ಎಳನೀರು ಗ್ರಾಮದ ಮುಖಾಂತರ ಬೆಳ್ತಂಗಡಿ ತಾಲೂಕಿನ ದಿಡುಪ ಗ್ರಾಮಕ್ಕೆ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಲು ಸ್ಥಳಪರಿಶೀಲಿಸಿ ವರದಿಯನ್ನು ಸಲ್ಲಿಸಲು ಪತ್ರದಲ್ಲಿ ಸೂಚಿಸಲಾಗಿದೆ.
ರಸ್ತೆ ಸುಮಾರು 1.90 ಕಿ.ಮೀ. ಉದ್ದದ ರಸ್ತೆ ಚಿಕ್ಕಮಗಳೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಸಂಬಂಧಪಟ್ಟದಾಗಿದ್ದು ಉಳಿದ ಭಾಗವು ದಕ್ಷಿಣ ಕನ್ನಡ ವಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಸಂಬಂಧಪಟ್ಟದಾಗಿದ್ದು ಈ ಬಗ್ಗೆ ಕ್ರಮಕೈಗೊಳ್ಳುವಂತೆ ತಿಳಿಸಲಾಗಿದೆ. ದಕ್ಷಿಣ ಕನ್ನಡ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಸಂಬಂಧಪಟ್ಟ ರಸ್ತೆಯ ಬಗ್ಗೆ ಕಾರ್ಯನಿರ್ವಾಹಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಮಂಗಳೂರು ಇವರು ಪರಿಶೀಲಿಸಿ ವರದಿ ಸಲ್ಲಿಸಿದ್ದಾರೆ.ರಸ್ತೆಯು ಸಂಸ್ಥೆ ಗ್ರಾಮದಿಂದ ಆರಂಭಗೊಂಡು 1.90 ಕಿ.ಮೀ. ಡಾಂಬರು ರಸ್ತೆ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಗೊಳಪಟ್ಟಿದ್ದು ನಂತರ 1.90 ದಿಂದ 2.80ರ ವರೆಗೆ ಕಾಂಕ್ರೀಟ್ ರಸ್ತೆ 2.80 ದಿಂದ 3 ಕಿ.ಮೀ. ವರೆಗೆ ಮಣ್ಣಿನ ರಸ್ತೆ 3ರಿಂದ 4.20 ಕಿ.ಮೀ. ವರೆಗೆ ಕಾಂಕ್ರಿಟ್ ರಸ್ತೆ ಮತ್ತು 4.20 ರಿಂದ 10 ಕಿ.ಮೀ. ವರೆಗೆ ಮಣ್ಣಿನ ರಸ್ತೆ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕು ವ್ಯಾಪ್ತಿಗೆ ಒಳಪಟ್ಟಿರುತ್ತದೆ.
ಈ ಎಳನೀರು ಪ್ರದೇಶವು ಬೆಳ್ತಂಗಡಿ ತಾಲೂಕು ಮಲವಂತಿಗೆ ಗ್ರಾಮ ಪಂಚಾಯತಿಗೆ ಒಳಪಟ್ಟಿದ್ದು ಇಲ್ಲಿನ ಗ್ರಾಮಸ್ಥರು ತಮ್ಮ ದೈನಂದಿನ ಚಟುವಟಿಕೆಗಳಿಗಾಗಿ ಮತ್ತು ಪಂಚಾಯಿತಿ ಕಾರ್ಯಗಳಿಗಾಗಿ ಸದ್ರಿ ರಸ್ತೆಯನ್ನು ಅವಲಂಬಿಸಿರುತ್ತಾರೆ. ಪ್ರಸ್ತುತ 1.90 ಕಿ.ಮೀ.ನಿಂದ 2.80 ಕಿ.ಮೀ. ಮತ್ತು 3 ರಿಂದ 4.20 ಕಿ.ಮೀ ರಸ್ತೆಯನ್ನು ವಿವಿಧ ಅನುದಾನದಡಿಯಲ್ಲಿ ವಿವಿಧ ಅನುಷ್ಠಾನ ಇಲಾಖೆಗಳ ಮೂಲಕ ಕಾಂಕ್ರಿಟ್ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗಿರುತ್ತದೆ.4.20 ಕಿ.ಮೀ ರಿಂದ 10 ಕಿ.ಮೀ ವರೆಗಿನ 5.80 ಕಿ.ಮೀ ಉದ್ಯದ ಮಣ್ಣಿನ ರಸ್ತೆಯು ಕೇವಲ 6 ರಿಂದ 8, ಅಡಿ ಅಗತ್ಯವಿದ್ದು ಕುದುರೆಮುಖ ರಾಷ್ಟ್ರೀಯ ಉದ್ಯಾನವಕ್ಕೆ ಸೇರಿದ ಮೀಸಲು ಅರಣ್ಯಕ್ಕೆ ಒಳಪಟ್ಟಿರುತ್ತದೆ. ಇದರಿಂದಾಗಿ ಇದುವರೆಗೆ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿರುವುದಿಲ್ಲ.
ಮಳೆಗಾಲ ಹೊರತು ವಡಿಸಿ ಉಳಿದ ಸಮಯದಲ್ಲಿ ಈ ರಸ್ತೆಯ ಮೂಲಕ ಸಂಚರಿಸಲು ಅರಣ್ಯ ಇಲಾಖೆ ಅನುಮತಿ ಇದ್ದು, ಇಲ್ಲಿನ ಗ್ರಾಮಸ್ಯರು ದ್ವಿಚಕ್ರ ವಾಹನ ಮತ್ತು 4ವೀಲ್ ಜೀವುಗಳನ್ನು ಬಳಸುತ್ತಿರುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪ್ರಸ್ತುತ ನೇತ್ರಾವತಿ ಪೀಕ್ ಎಂಬ ಚಾರಣ ಪ್ರದೇಶ ಕೂಡಾ ಎಳನೀರಿನಲ್ಲಿ ತರೆದಿರುವುದರಿಂದ ಈ ರಸ್ತೆಯ ಬಳಕೆ ಪ್ರಮಾಣದಲ್ಲಿ ಏರಿಕೆಯಾಗಿದ್ದು ಈ ರಸ್ತೆ ಅಭಿವೃದ್ಧಿ ತುರ್ತು ಅಗತ್ಯವಾಗಿದೆ. ಈ ರಸ್ತೆ ಅಭಿವೃದ್ಧಿ ಪಡಿಸಲು ಮೊದಲು ಅರಣ್ಯ ಇಲಾಖೆಯ ಅನುಮತಿ ದೊರಬೇಕಾಗಿದ್ದು ಉಳಿದಂತೆ ರು. 295 ಲಕ್ಷ ಅನುದಾನ ಕೂಡಾ ಅಗತ್ಯವಿರುತ್ತದೆ ಎಂದು ಅಂದಾಜು ಪಟ್ಟಿಯೊಂದಿಗೆ ಕಾರ್ಯನಿರ್ವಾಹಕ ಇಂಜಿನಿಯರ್ ವರದಿ ಸಲ್ಲಿಸಿರುತ್ತಾರೆ.