ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಮಾತನಾಡಿದ ಶಾಸಕರು, ಉತ್ತರ ಕರ್ನಾಟಕದಲ್ಲೇ ವಿಜಯಪುರ ಜಿಲ್ಲೆ ಅತಿ ಹಿಂದುಳಿದ ಜಿಲ್ಲೆಯಾಗಿದೆ. ಆದ್ದರಿಂದ ಜಿಲ್ಲೆ ಇನ್ನೂ ಸಾಕಷ್ಟು ಅಭಿವೃದ್ಧಿ ಆಗಬೇಕಿದೆ. ನಮ್ಮ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ವ್ಯವಸ್ಥೆ ಇಲ್ಲ. ಜಿಲ್ಲೆಯಿಂದ ಬೆಂಗಳೂರಿಗೆ ಪ್ರಯಾಣಿಸಲು ಸಾರ್ವಜನಿಕರಿಗೆ ಸರಿಯಾದ ರೈಲಿನ ವ್ಯವಸ್ಥೆ ಕೂಡ ಇಲ್ಲ. ಪ್ರಯಾಣಿಕರು ಬೆಂಗಳೂರಿಗೆ ತಲುಪಲು 9 ರಿಂದ 10 ಗಂಟೆಯವರೆಗೆ ಪ್ರಯಾಣಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ಆಲಮಟ್ಟಿಯಿಂದ ಚಿತ್ರದುರ್ಗ ಮಾರ್ಗವಾಗಿ ರೈಲು ಮಾರ್ಗ ಮಾಡಬೇಕೆಂಬುದು ಬಹು ಮುಖ್ಯ ಬೇಡಿಕೆಯಾಗಿದೆ ಎಂದು ತಿಳಿಸಿದರು.
ಈ ಬಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿರುವುದರಿಂದ ರೈತರ ಹೊಲಗಳಿಗೆ ಹೋಗಲು ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಆ ರಸ್ತೆಗಳ ಸುಧಾರಣೆಗೆ ಜಿಲ್ಲಾ ಪಂಚಾಯಿತಿಗೆ ಅನುದಾನ ನೀಡಬೇಕೆಂದು ಎಂದು ಮನವಿ ಮಾಡಿದರು.ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಸರ್ಕಾರ ವಿಮಾ ಪರಿಹಾರ ಬಿಡುಗಡೆ ಮಾಡಿದೆ, ಕೆಲವು ರೈತರಿಗೆ ಬಂದಿದೆ. ಇನ್ನೂ ಕೆಲವು ರೈತರಿಗೆ ಬಂದಿಲ್ಲ. ಅದನ್ನು ಸಹ ಶೀಘ್ರದಲ್ಲಿಯೇ ಸರಿಪಡಿಸಬೇಕು. ಕೆನಾಲ್‌ಗೆ ತಮ್ಮ ಜಮೀನುಗಳನ್ನು ಕಳೆದುಕೊಂಡ ರೈತರಿಗೆ ಕೋರ್ಟ್‌ನಿಂದ ಅವಾರ್ಡ್ ಆದರೂ ಇನ್ನೂವರೆಗೂ ಬಿಡುಗಡೆಯಾಗಿಲ್ಲ, ಕೂಡಲೇ ಮುಖ್ಯಮಂತ್ರಿಗಳು ಜಮೀನು ಕಳೆದುಕೊಂಡ ರೈತರಿಗೆ ಹಣ ಬಿಡುಗಡೆ ಮಾಡಬೇಕು. ತಮ್ಮ ಮತಕ್ಷೇತ್ರ ದೇವರಹಿಪ್ಪರಗಿ ನೂತನ ತಾಲೂಕು ಆಗಿದೆ. ಪ್ರಜಾಸೌಧದಲ್ಲಿ ಎಲ್ಲ ಕಚೇರಿಗಳು ಇನ್ನೂವರೆಗೂ ಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಅದನ್ನು ಸಹ ಶೀಘ್ರ ಸರಿಪಡಿಸಬೇಕು ಎಂದು ಸದನದ ಗಮನ ಸೆಳೆದರು.