ಹಾವೇರಿ:ರಾಜ್ಯ ಸರ್ಕಾರವು ಸಿ ಮತ್ತು ಡಿ ದರ್ಜೆಯ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಮತ್ತು ಮಹಿಳಾ ಮೀಸಲಾತಿ ಘೋಷಿಸಿದೆ. ಸರ್ಕಾರ ಮೀಸಲಾತಿ ಬದಲು ನೇರಪಾವತಿ ವ್ಯವಸ್ಥೆ ಜಾರಿಗೊಳಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಪಾಲಿಕೆ,ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದಿಂದ ಗುರುವಾರ ಜಿಲ್ಲಾಡಳಿತ ಮುಂಭಾಗದಲ್ಲಿ ನೂರಾರು ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು. ನಗರ ಸ್ಥಳೀಯ ಸಂಸ್ಥೆಗಳು, ಸರಕಾರಿ ಆಸ್ಪತ್ರೆಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ೧.೭೫ ಲಕ್ಷಕ್ಕೂ ಅಧಿಕ ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಬಹುತೇಕ ನೌಕರರಿಗೆ ಸಕಾಲಕ್ಕೆ ವೇತನ, ಭವಿಷ್ಯ ನಿಧಿ, ಕನಿಷ್ಠ ವೇತನ ಯಾವುದು ಸಹ ಸಮರ್ಪಕವಾಗಿ ಸಿಗುತ್ತಿಲ್ಲ. ಈ ಬಗ್ಗೆ ಹಕ್ಕುಗಳನ್ನು ಕೇಳಿದರೆ ಕೆಲಸದಿಂದ ಕೈ ಬಿಡುವ ಬೆದರಿಕೆ ಒಡ್ಡಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ನೇರಪಾವತಿ ವ್ಯವಸ್ಥೆ ಜಾರಿಗೊಳಿಸಬೇಕು. ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ನೇಮಕಗೊಳಿಸುವಾಗ ದಲಿತ, ಹಿಂದುಳಿದ ವರ್ಗಗಳಿಗೆ ಮತ್ತು ಮಹಿಳೆಯರಿಗೆ ಮೀಸಲಾತಿ ಘೋಷಿಸಲಾಗಿದೆ. ವಾಸ್ತವದಲ್ಲಿ ಈಗಾಗಲೇ ಈ ಹುದ್ದೆಗಳಲ್ಲಿರುವ ಬಹುತೇಕರು ದಲಿತ ಇಲ್ಲವೆ ಹಿಂದುಳಿದ ವರ್ಗಗಳಿಗೆ ಸೇರಿದವರೇ ಆಗಿದ್ದಾರೆ. ಸರ್ಕಾರದ ಈ ಮೀಸಲಾತಿ ಘೋಷಣೆ ಅಪ್ರಸ್ತುತವಾಗಿದೆ. ನೂತನ ಮೀಸಲಾತಿ ಜಾರಿ ಹೆಸರಿನಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಯಾವುದೇ ತೊಂದರೆಯಾಗದಂತೆ, ಹೊಸ ನೇಮಕಾತಿಗಳಿಗೆ ಮಾತ್ರ ಮೀಸಲಾತಿ ಅನ್ವಯಿಸುವಂತೆ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದರು. ಕಳೆದ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದಂತೆ ರಾಜ್ಯದ ಎಲ್ಲ ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ಪದ್ಧತಿ ಬದಲು ನೇರಪಾವತಿ ವ್ಯವಸ್ಥೆ ಜಾರಿಗೆ ತರಬೇಕು. ಇದರಿಂದ ಏಜೆನ್ಸಿಗಳ ಶೋಷಣೆ ನಿಲ್ಲಲಿದೆ. ಕಾರ್ಮಿಕರಿಗೆ ಸೇವಾ ಭದ್ರತೆಯು ದೊರೆಯಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ತನ್ನ ಬದ್ಧತೆ ತೋರಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಗೆ ಬೆಂಬಲ ಸೂಚಿಸಿದ ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಮಾತನಾಡಿದರು. ಪ್ರತಿಭಟನೆಯಲ್ಲಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜಪ್ಪ ಹೊಸಮನಿ, ಶಿವಪ್ಪ ಕಟ್ಟಿಮನಿ, ಗುರುನಾಥ ಡವೆಣ್ಣನವರ, ರಮೇಶ ಭೋವಿ, ಪ್ರಶಾಂತ ಇಂಗಳಗಿ, ನಾಗರಾಜ ಹಿರೇಕೆರೂರ, ದಲಿತ ಮುಖಂಡರಾದ ಪರಮೇಶ್ವರಪ್ಪ ಮೇಗಳಮನಿ, ನಾಗರಾಜ ಮಾಳಗಿ, ಹೊನ್ನಪ್ಪ ತಗಡಿನಮನಿ, ಸುಭಾಷ್ ಬೆಂಗಳೂರು, ಅಶೋಕ್ ಮರಿಯಾಣ್ಣನವರ ಇತರರು ಇದ್ದರು.