ಕುವೆಂಪು ವಿಶ್ವಮಾನವ ಸಂದೇಶ ಕಾರ್ಯರೂಪಕ್ಕಿಳಿಸಿ

KannadaprabhaNewsNetwork |  
Published : Jan 03, 2025, 12:33 AM IST
ಪೋಟೊ೨ಸಿಪಿಟಿ2: ನಗರದ ಗಾಂಧಿ ಭವನದ ಬಳಿ ಆಯೋಜಿಸಿದ್ದ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಡಾ.ಮಂಜುನಾಥ್ ಮಾತನಾಡಿದರು. | Kannada Prabha

ಸಾರಾಂಶ

ಚನ್ನಪಟ್ಟಣ: ನಾವು ಕುವೆಂಪು ಸಾರಿದ ವಿಶ್ವ ಮಾನವ ಸಂದೇಶವನ್ನು ಗಾಳಿಗೆ ತೂರಿದ್ದೇವೆ. ಮನುಷ್ಯ ಹುಟ್ಟುವಾಗ ಹಾಗೂ ಸಾಯುವಾಗ ವಿಶ್ವಮಾನವ. ಆದರೆ, ಜೀವಿತ ಕಾಲದಲ್ಲಿ ಮಾತ್ರ ವಿಶ್ವಮಾನವತೆ ಮರೆತು ಅಲ್ಪಮಾನವರಾಗುತ್ತಿದ್ದೇವೆ ಎಂದು ಸಂಸದ ಡಾ.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ಚನ್ನಪಟ್ಟಣ: ನಾವು ಕುವೆಂಪು ಸಾರಿದ ವಿಶ್ವ ಮಾನವ ಸಂದೇಶವನ್ನು ಗಾಳಿಗೆ ತೂರಿದ್ದೇವೆ. ಮನುಷ್ಯ ಹುಟ್ಟುವಾಗ ಹಾಗೂ ಸಾಯುವಾಗ ವಿಶ್ವಮಾನವ. ಆದರೆ, ಜೀವಿತ ಕಾಲದಲ್ಲಿ ಮಾತ್ರ ವಿಶ್ವಮಾನವತೆ ಮರೆತು ಅಲ್ಪಮಾನವರಾಗುತ್ತಿದ್ದೇವೆ ಎಂದು ಸಂಸದ ಡಾ.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ನಗರದ ಗಾಂಭವನದ ಬಳಿ ನೇಗಿಲಯೋಗಿ ಟ್ರಸ್ಟ್, ಇಂಡಿಯನ್ ಆಕ್ಷ್‌ಫರ್ಡ್ ಸ್ಕೂಲ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುವೆಂಪು ಸಾರಿದ ವಿಶ್ವ ಮಾನವ ಸಂದೇಶವನ್ನು ನಮ್ಮ ಜೀವಿತದಲ್ಲಿ ಅಳವಡಿಸಿಕೊಳ್ಳದೇ ಕೇವಲ ಸಂದೇಶವಾಗಿ ಸ್ವೀಕರಿಸಿದ್ದೇವೆ. ಇನ್ನಾದರೂ ಅವರ ಆಶಯದಂತೆ ನಡೆದು ವಿಶ್ವಮಾನ ಸಂದೇಶವನ್ನು ಕಾರ್ಯರೂಪಕ್ಕೆ ತರುವ ಕೆಲಸಕ್ಕೆ ನಾವೆಲ್ಲ ಮುಂದಾಗಬೇಕಿದೆ ಎಂದರು.

ದೇಶದ ರೂಪುರೇಷೆ ಬದಲಿಸುವುದು ಯುವ ಪೀಳಿಗೆಯಿಂದ ಮಾತ್ರ ಸಾಧ್ಯ. ಇಂದಿನ ಮಕ್ಕಳೇ ನಾಳಿಗೆ ದೇಶ ನಿರ್ಮಾತೃಗಳು. ೩೦ ವರ್ಷಕ್ಕೊಮ್ಮೆ ಕಾಲಘಟ್ಟ ಬದಲಾಗುತ್ತಾ ಹೋಗುತ್ತದೆ. ಕಾಲ ಎಷ್ಟೇ ಬದಲಾದರೂ ಆ ಸಮಯದಲ್ಲಿನ ಘಟಾನವಳಿಗಳು ನಮ್ಮನ್ನು ಎಚ್ಚರಿಸುವ, ಅರಿವು ಮೂಡಿಸುವ ಕೆಲಸ ಮಾಡುತ್ತಲೇ ಇರುತ್ತದೆ ಎಂಬುದನ್ನು ನಾವು ಅರಿಯಬೇಕು ಎಂದು ಹೇಳಿದರು.

ಭಾರತದ ಭವಿಷ್ಯ ಬದಲಾಗಬೇಕಾದರೆ ಯುವಶಕ್ತಿ ಜಾಗೃತವಾಗಬೇಕು. ಕುವೆಂಪು ಅವರಂತಹ ಮಹನೀಯರ ಬಗ್ಗೆ ತಿಳಿದುಕೊಂಡು ಮಕ್ಕಳಲ್ಲಿ, ಯುವಕರಲ್ಲಿ ಅರಿವೂ ಮೂಡಿಸಬೇಕು. ಮಕ್ಕಳು ನಮ್ಮನ್ನೇ ನೋಡಿ ಕಲಿಯುತ್ತಾರೆ. ಆ ಹಿನ್ನೆಲೆಯಲ್ಲಿ ಮೊದಲು ನಮ್ಮನ್ನು ನಾವು ತಿದ್ದುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆ ಜನಸಾಮಾನ್ಯರಲ್ಲಿ ಯಾವುದು ಸುಳ್ಳು, ಯಾವುದು ಸತ್ಯ ಎಂದು ಅರಿಯುವುದು ಕ್ಲಿಷ್ಟಕರವಾಗುತ್ತಿದೆ. ಇಂದು ನಾವು ಸತ್ಯಕ್ಕೆ ಸಾಕ್ಷಿ ಕೇಳುವಂತ ಕಾಲಘಟದಲ್ಲಿದ್ದೇವೆ. ಜನರಿಗೆ ಸತ್ಯ ಹೇಳಿದರೆ ಸಾಕ್ಷಿ ಕೇಳುತ್ತಾರೆ. ಅದೇ ಸುಳ್ಳು ಹೇಳಿದರೆ ತಕ್ಷಣ ನಂಬುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸತ್ಯ ಹೇಳಬೇಕೊ ಇಲ್ಲಾ ಜನರನ್ನು ನಂಬಿಸಲು ಸುಳ್ಳು ಹೇಳಬೇಕೋ ಎಂಬ ಜಿಜ್ಞಾಸೆ ಜನರಲ್ಲಿ ಮೂಡುತ್ತಿದೆ ಎಂದು ವಿಷಾದಿಸಿದರು.

ರಾಜಕಾರಣಿಗಳಾದ ನಾವು ಚುನಾವಣೆ ಮುಗಿದ ಬಳಿಕ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಆ ರೀತಿಯ ರಾಜಕೀಯ ಸಂಸ್ಕೃತಿ ನಮ್ಮಲ್ಲಿ ಬರಬೇಕು. ದೇವರು ಅವಕಾಶ ನೀಡಿದಾಗ ಅದನ್ನು ಉಪಯೋಗಿಸಿಕೊಂಡು ಜನಸೇವೆ ಮಾಡಬೇಕು. ಅಭಿವೃದ್ಧಿಯಿಂದಲೇ ಜನ ನಮ್ಮನ್ನು ಗುರುತಿಸಬೇಕು. ಕ್ಷೇತ್ರಗಳಲ್ಲಿ ಅಭಿವೃದ್ಧಿಯೇ ಮಾತಾಡುವಂತಾಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲವರೂ ಒಗ್ಗಟ್ಟಿನಿಂದ ಪ್ರಗತಿಪಥದತ್ತ ಹೆಜ್ಜೆ ಹಾಕಬೇಕು ಎಂದರು.

ನೇಗಿಲಯೋಗಿ ಟ್ರಸ್ಟ್ ಅಧ್ಯಕ್ಷ ರಾಂಪುರ ಧರಣೀಶ್ ಮಾತನಾಡಿ, ಜಗದ ಕವಿ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಗೀತಗಾಯನ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಟ್ರಸ್ಟ್ ವತಿಯಿಂದ ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು.

ಇದೇ ವೇಳೆ ನಿವೃತ್ತ ಶಿಕ್ಷಕರಾದ ಮಲ್ಲಯ್ಯ, ಬೆಟ್ಟಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇಂಡಿಯನ್ ಆಕ್ಸ್‌ಫರ್ಡ್ ಶಾಲೆಯ ವಿದ್ಯಾರ್ಥಿಗಳು ಕುವೆಂಪು ರಚಿತ ಗೀತೆಗಳನ್ನು ಹಾಡಿದರು.

ಕಾರ್ಯಕ್ರಮದಲ್ಲಿ ನೇಗಿಲಯೋಗಿ ಟ್ರಸ್ಟ್ ಜಿಲ್ಲಾಧ್ಯಕ್ಷ ಪಟೇಲ್ ಸಿ.ರಾಜು. ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ಶಾರದಾಗೌಡ, ಆಕ್ಸ್‌ಫರ್ಡ್ ಶಾಲೆಯ ಮಾಲಿನಿ, ರಮ್ಯಾ, ತಿಪ್ರೇಗೌಡ, ಲ್ಯಾಬ್ ಚಂದ್ರು ಸೇರಿದಂತೆ ಹಲವರು ಹಾಜರಿದ್ದರು.

ಪೋಟೊ೨ಸಿಪಿಟಿ2:

ಚನ್ನಪಟ್ಟಣದ ಗಾಂಧಿ ಭವನದ ಬಳಿ ಆಯೋಜಿಸಿದ್ದ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಡಾ.ಮಂಜುನಾಥ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ