ಸಚಿನ್‌ ಆತ್ಮಹತ್ಯೆ ಪ್ರಕರಣದಲ್ಲಿ ಖರ್ಗೆ ವಿರುದ್ಧ ಬಿಜೆಪಿ ಷಡ್ಯಂತ್ರ : ಕೆಪಿಸಿಸಿ ವಕ್ತಾರ ಡಿ.ಬಸವರಾಜ

KannadaprabhaNewsNetwork | Updated : Jan 03 2025, 12:51 PM IST

ಆರ್‌ಎಸ್ಎಸ್‌, ಬಿಜೆಪಿ ಪಾಲಿಗೆ ಸಿಂಹಸ್ವಪ್ನವಾದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಪಕ್ಷ ಬಿಜೆಪಿಯವರು ಷಡ್ಯಂತ್ರ ನಡೆಸಿದ್ದಾರೆ. ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ ದಾವಣಗೆರೆಯಲ್ಲಿ ಹೇಳಿದ್ದಾರೆ.

 ದಾವಣಗೆರೆ : ಆರ್‌ಎಸ್ಎಸ್‌, ಬಿಜೆಪಿ ಪಾಲಿಗೆ ಸಿಂಹಸ್ವಪ್ನವಾದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಪಕ್ಷ ಬಿಜೆಪಿಯವರು ಷಡ್ಯಂತ್ರ ನಡೆಸಿದ್ದಾರೆ. ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್‌ನ ಸಚಿವ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪಾತ್ರವೇ ಇಲ್ಲ. ಸಾವಿಗೆ ಶರಣಾದ ಸಚಿನ್ ಬರೆದ ಡೆತ್‌ ನೋಟ್ ನಲ್ಲೂ ಸಚಿವರ ಹೆಸರಿಲ್ಲ. ಖರ್ಗೆ ದಲಿತರೆಂಬ ಕಾರಣಕ್ಕೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದರು.

ಆತ್ಮಹತ್ಯೆ ಮಾಡಿಕೊಂಡ ಸಚಿನ್ ಗುತ್ತಿಗೆದಾರನೇ ಅಲ್ಲ. ಗುತ್ತಿಗೆದಾರನಾಗಲು ಧಾರವಾಡದ ಲೋಕೋಪಯೋಗಿ ಇಲಾಖೆ, ಪಂಚಾಯತ್‌ರಾಜ್ ಇಲಾಖೆಯ ಮುಖ್ಯ ಅಧೀಕ್ಷಕರ ಕಚೇರಿಯಲ್ಲಿ ನೋಂದಣಿ ಮಾಡಿಸಿರಬೇಕು. ಆದರೆ, ಸಚಿನ್ ಎಲ್ಲೂ ನೋಂದಣಿ ಮಾಡಿಸಿಲ್ಲ ಎಂದು ಹರಿಹಾಯ್ದರು.

9 ವರ್ಷ ಕಾಲ ರಾಜ್ಯವನ್ನಾಳಿದ ಇದೇ ಬಿಜೆಪಿ ಒಂದೇ ಒಂದು ಪ್ರಕರಣವನ್ನೂ ಸಿಬಿಐಗೆ ಒಪ್ಪಿಸಲಿಲ್ಲ. ಈಗ ಏನೇ ಆರೋಪ ಕೇಳಿ ಬಂದರೂ, ಸಿಬಿಐಗೆ ವಹಿಸಿ ಎಂಬ ಮಂತ್ರ ಜಪಿಸುತ್ತಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ದ ಹೈಕೋರ್ಟ್‌ನಲ್ಲಿ ಪೋಕ್ಸೋ ಪ್ರಕರಣ ನಡೆದಿರುವುದಾಗಲೇ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರಿದಿದ್ದಾರೆ. ಬಿಎಸ್‌ವೈ ಪ್ರಕರಣವನ್ನೇಕೆ ಸಿಬಿಐಗೆಒಪ್ಪಿಸಲು ಒತ್ತಾಯಿಸುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ವಿಜಯೇಂದ್ರ- ಬಸವನಗೌಡ ಪಾಟೀಲ್ ಯತ್ನಾಳ್ ನಡುವಿನ ಮುಸುಕಿನ ಗುದ್ದಾಟ ಮರೆ ಮಾಚಲು ಪ್ರಿಯಾಂಕ್ ಖರ್ಗೆ ಮುಖಕ್ಕೆ ಮಸಿ ಬಳಿಯುವ ಷಡ್ಯಂತ್ರ ನಡೆಸಿದ್ದಾರೆ ಎಂದು ಟೀಕಿಸಿದರು.

ಪಕ್ಷದ ಮುಖಂಡರಾದ ಕೆ.ಎಂ.ಮಂಜುನಾಥ, ಎಂ.ಕೆ.ಲಿಯಾಖತ್ ಅಲಿ, ಗುರು ರೇವಣಸಕರ್, ಪ್ರಭಾಕರ್, ಬಿ.ಎಚ್.ಉದಯಕುಮಾರ, ಡಿ.ಶಿವಕುಮಾರ, ನಿಟುವಳ್ಳಿ ಎಸ್.ಪ್ರವೀಣಕುಮಾರ, ಎಸ್.ಎಂ.ಜಯಪ್ರಕಾಶ, ಬಿ.ಎಸ್. ಸುರೇಶಕುಮಾರ, ಆನಗೋಡು ನಾಗರಾಜ, ಕಿರಣ ಬೆಳಲಗೆರೆ, ರಮೇಶ ಚಲವಾದಿ ಇತರರು ಇದ್ದರು.

ರಾಜ್ಯದಲ್ಲಿ 3-4 ವಿಧಾನ ಪರಿಷತ್ತು ಸದಸ್ಯತ್ವ ಖಾಲಿ ಇವೆ. ನಮ್ಮ ನಾಯಕರು, ಹಿರಿಯ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಬಳಿ ಮನವಿ ಮಾಡಿದ್ದೇನೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ರ ಬಳಿ ಚರ್ಚಿಸಿ, ವಿಧಾನ ಪರಿಷತ್ತಿಗೆ ನಾಮ ನಿರ್ದೇಶನಗೊಳಿಸಲು ಪ್ರಯತ್ನಿಸುವಂತೆ ಮಾಡಿದ ಮನವಿಗೆ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ್‌ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ

- ಡಿ.ಬಸವರಾಜ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ