ಕನ್ನಡಪ್ರಭ ವಾರ್ತೆ ನವದೆಹಲಿ

ಕರ್ನಾಟಕ ಸೇರಿದಂತೆ ದೇಶಾದ್ಯಂತ ತಂಬಾಕು ಬೆಳೆಗಾರರ ನೆರವಿಗೆ ಕೇಂದ್ರ ಸರಕಾರ ಧಾವಿಸಿದೆ. ಈ ಸಂಬಂಧ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಕರ್ನಾಟಕ ಸಂಸದರ ನಿಯೋಗ ಶುಕ್ರವಾರ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವ ಪಿಯೂಷ್ ಗೋಯಲ್ ಅವರ ಜೊತೆಗೆ ಮಾತುಕತೆ ನಡೆಸಿತು.

ಸಭೆ ಬಳಿಕ ಮಾತನಾಡಿದ ಕುಮಾರಸ್ವಾಮಿ, ಸಚಿವ ಗೋಯಲ್ ಅವರಿಗೆ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಮನವರಿಕೆ ಮಾಡಿ ಕೊಡಲಾಯಿತು. ಎಲ್ಲ ಮನವಿಗಳನ್ನು ಸಚಿವರು ಆಲಿಸಿದರಲ್ಲದೆ, ಅವುಗಳನ್ನು ಕೂಡಲೇ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು ಎಂದು ತಿಳಿಸಿದರು.

ಸೋಮವಾರದಿಂದಲೇ ತಂಬಾಕು ಖರೀದಿ, ವಿದೇಶಿ ಮಾರುಕಟ್ಟೆಗಳಿಗೆ ರಫ್ತು, ಹೊಸ ವಿದೇಶಿ ಮಾರುಕಟ್ಟೆಗಳ ಅನ್ವೇಷಣೆ ಸೇರಿದಂತೆ ಬೆಳೆಗಾರರ ಬೇಡಿಕೆಗಳಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಅವರು ಹೇಳಿದರು.

ಯುದ್ಧದ ಈ ಸಂದರ್ಭದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಶಮನಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಚಿವ ಗೋಯಲ್ ಅವರು ತಮ್ಮ ಸಚಿವಾಲಯದ ಉನ್ನತ ಅಧಿಕಾರಿಗಳು ಹಾಗೂ ತಂಬಾಕು ಖರೀದಿಸುವ ಉದ್ಯಮದ ಪ್ರಮುಖರ ಜತೆ ಮಾತನಾಡಿ, ಬೆಳೆಗಾರರ ನೆರವಿಗೆ ಬರುವಂತೆ ಸೂಚಿಸಿದರು ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.


ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಸೋಮವಾರದಿಂದ ತಂಬಾಕು ಖರೀದಿಗೆ ಸಚಿವ ಪಿಯೂಷ್ ಗೋಯಲ್ ಅವರು ಸೂಚನೆ ನೀಡಿದ್ದಾರೆ. ಅಲ್ಲದೆ, 190 ದೇಶಗಳ ರಾಯಭಾರಿಗಳಿಗೆ ಪತ್ರ ಬರೆದು ಮುಕ್ತ ಮಾರುಕಟ್ಟೆಯಲ್ಲಿ ತಂಬಾಕು ಖರೀದಿಗೆ ಕೋರಿಕೆ ಸಲ್ಲಿಸಲಾಗುವುದು. ಈವರೆಗೆ ರಪ್ತು ಮಾಡದಿರುವ ದೇಶಗಳಿಗೂ ತಂಬಾಕು ರಪ್ತು ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.ಖರೀದಿ ನಿಲ್ಲಿಸಿರುವ ಪರಿಣಾಮದಿಂದ ತಂಬಾಕು ಬೆಲೆಯಲ್ಲಿ ಕುಸಿತ ಆಗಿದೆ. ₹320 ಯಿಂದ ₹250 ವರೆಗೂ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಗೋಯಲ್ ಅವರನ್ನು ಭೇಟಿಯಾಗಿ ಬೆಲೆ ಹೆಚ್ಚಿಸುವ ಮತ್ತು ಪರಿಹಾರ ನೀಡುವ ಬಗ್ಗೆ ಮನವಿ ಮಾಡಲಾಗಿದೆ. ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆ ನೀಡಲು ಕೇಳಿದ್ದೇವೆ. ಅಲ್ಲದೆ, ತಂಬಾಕು ಮಂಡಳಿಗೆ ಉತ್ತಮ ಮೂಲಸೌಕರ್ಯಗಳನ್ನು ಕಲ್ಪಿಸಬೇಕಿದ್ದು, ಅದರ ಬಗ್ಗೆಯೂ ಕೇಂದ್ರ ಸಚಿವರ ಗಮನ ಸೆಳೆಯಲಾಗಿದೆ ಎಂದು ತಿಳಿಸಿದರು.ಶಾಸಕ ಎ.ಮಂಜು ಮಾತನಾಡಿ, ಕರ್ನಾಟಕದಲ್ಲಿ 100 ದಶಲಕ್ಷ ಟನ್ ತಂಬಾಕು ಬೆಳೆಯಲು ತಂಬಾಕು ಮಂಡಳಿ ಅವಕಾಶ ನೀಡಿದೆ. ಈ ವರ್ಷ 80 ದಶಲಕ್ಷ ಟನ್ ತಂಬಾಕು ಬೆಳೆಯಲಾಗಿದೆ. ನಾವು ಬೆಳೆದ ಸೊಪ್ಪನ್ನು ಸರ್ಕಾರ ನಿರ್ಧಾರ ಮಾಡಿದ ಬೆಲೆಯಲ್ಲಿ ಖರೀದಿ ಮಾಡಬೇಕಿದೆ. ಈ ಹಿಂದೆ ಖರೀದಿ ಭರವಸೆ ನೀಡಿದ ಕಂಪನಿಗಳು ಖರೀದಿ ಮಾಡಿಲ್ಲ. ಈಗ ಬೆಳೆದ ಸೊಪ್ಪನ್ನು ಕೂಡಲೇ ಖರೀದಿ ಮಾಡಬೇಕು. ಕೇಂದ್ರ ಸರ್ಕಾರ ಇದರಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ಹೇಳಿದರು.ಸಭೆಯಲ್ಲಿ ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳ ಜನಪ್ರತಿನಿಧಿಗಳು, ನಾಯಕರು ಭಾಗಿಯಾಗಿದ್ದರು.