ಬಳ್ಳಾರಿ: ನಗರದ ಹಿರಿಯ ರಂಗಭೂಮಿ ಕಲಾವಿದ ರಮೇಶಗೌಡ ಪಾಟೀಲ್ (78) ನಿಧನರಾದರು.

ಕಳೆದ ಹಲವು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪಾಟೀಲ್‌ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು. ನಗರದ ವೀರಶೈವ ರುದ್ರಭೂಮಿಯಲ್ಲಿ ಶುಕ್ರವಾರ ಸಂಜೆ ಮೃತರ ಅಂತ್ಯಕ್ರಿಯೆ ನೆರವೇರಿತು.

ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.

ಸಾಮಾಜಿಕ, ಐತಿಹಾಸಿಕ ಮತ್ತು ಪೌರಾಣಿಕ ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯಿಸುವ ಮೂಲಕ ರಮೇಶಗೌಡ ಪಾಟೀಲ್ ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿದ್ದರು. ಹಂಪಿ ಉತ್ಸವದ ಧ್ವನಿ ಬೆಳಕು ಕಾರ್ಯಕ್ರಮದಲ್ಲಿ ಶ್ರೀಕೃಷ್ಣದೇವರಾಯ ಪಾತ್ರ ವಹಿಸಿದ್ದರು. ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಬಸವಣ್ಣನವರ ಪಾತ್ರ ಹಾಗೂ ವಿವಿಧ ಪೌರಾಣಿಕ ನಾಟಕಗಳಲ್ಲಿ ಮಹತ್ವದ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡು ಗಮನ ಸೆಳೆದಿದ್ದರು. ರಂಗಭೂಮಿ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ನಾಟಕ ಅಕಾಡೆಮಿ ಸದಸ್ಯರನ್ನಾಗಿ ನೇಮಕ ಮಾಡಿತ್ತು. ನಾಟಕ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ. 2023ರಲ್ಲಿ ಬಳ್ಳಾರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಕಲಾವಿದ ರಮೇಶಗೌಡ ಪಾಟೀಲ್ ನಿಧನಕ್ಕೆ ರಾಘವ ಮೆಮೋರಿಯಲ್ ಅಸೋಸಿಯೇಷನ್, ಆಲಾಪ್ ಸಂಗೀತ ಕಲಾ ಟ್ರಸ್ಟ್, ರಂಗತೋರಣ, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ, ಜಿಲ್ಲಾ ಕಸಾಪ, ಶರಣ ಸಾಹಿತ್ಯ ಪರಿಷತ್, ಮಹಾದೇವ ಕಲಾ ಸಂಘ ಹಂದಿಹಾಳು, ರಂಗಜಂಗಮ ಸಂಸ್ಥೆ ಡಿ.ಕಗ್ಗಲ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಹಾಗೂ ರಾಜಕೀಯ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.