ರಾಜ್ಯ ಸರ್ಕಾರ ಕನಿಷ್ಠ ವೇತನ ಪರಿಷ್ಕರಣೆ ಮಾಡಿ, ಇಂದಿನ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿ ಎಲ್ಲಾ ಕಾರ್ಮಿಕರಿಗೆ ಸರಾಸರಿ ರು. 36,000 ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಒತ್ತಾಯಿಸಿದರು.
ಹಾವೇರಿ: ರಾಜ್ಯ ಸರ್ಕಾರ ಕನಿಷ್ಠ ವೇತನ ಪರಿಷ್ಕರಣೆ ಮಾಡಿ, ಇಂದಿನ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿ ಎಲ್ಲಾ ಕಾರ್ಮಿಕರಿಗೆ ಸರಾಸರಿ ರು. 36,000 ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಒತ್ತಾಯಿಸಿದರು.ನಗರದ ಹೊರವಲಯದಲ್ಲಿರುವ ಜಿಲ್ಲಾಡಳಿತ ಭವನದ ಎದುರು ಶನಿವಾರ ಸಿಐಟಿಯು ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾರ್ಮಿಕರ ನಿರಂತರ ಹೋರಾಟದ ಫಲವಾಗಿ ಪ್ರತಿ ಉದ್ದಿಮೆಗೆ ಪ್ರತ್ಯೇಕವಾಗಿ ಕನಿಷ್ಠ ವೇತನ ಅಧಿಸೂಚನೆ ಹೊರಡಿಸದೇ ಬಹುತೇಕ ಉದ್ದಿಮೆಗಳಿಗೆ ಏಕರೂಪವಾಗಿ ಹಾಗೂ ಹಿಂದೆ ಇದ್ದ ನಾಲ್ಕು ವಲಯಕ್ಕೆ ಬದಲಾಗಿ ಮೂರು ವಲಯಗಳಾಗಿ ಮಾಡಿ ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಮೇ 22ರಂದು ರಾಜ್ಯ ಸರ್ಕಾರ ಹೊರಡಿಸಿರುವ ಅಂತಿಮ ಕನಿಷ್ಠ ವೇತನ ಅಧಿಸೂಚನೆ ಸ್ವಾಗತಾರ್ಹ. ಬೆಲೆ ಏರಿಕೆ ಸೇರಿದಂತೆ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಲಕ್ಷಾಂತರ ಕಾರ್ಮಿಕರಿಗೆ ಸಹಾಯವಾಗಲಿದೆ ಎಂದರು.
ಆದರೆ ಈ ಕನಿಷ್ಠ ವೇತನ ಅಧಿಸೂಚನೆಯಿಂದ ಹೊರಗಿಟ್ಟಿರುವ ಬಹುತೇಕ ಲಕ್ಷಾಂತರ ಬಡ ಮಹಿಳೆಯರಿರುವ ಗಾರ್ಮೆಂಟ್ಸ್, ಪ್ಲಾಂಟೇಷನ್, ಬೀಡಿ, ಕೈಮಗ್ಗ ಮುಂತಾದ 19 ಉದ್ದಿಮೆಗಳಲ್ಲಿಯ ಕಾರ್ಮಿಕರಿಗೆ ಅನ್ಯಾಯವಾಗಲಿದೆ. ಈ ಉದ್ದಿಮೆಗಳಿಗೆ ಪರಿಷ್ಕೃತ ಕನಿಷ್ಠ ವೇತನವನ್ನು ಜಾರಿ ಮಾಡಿ ಅಧಿಸೂಚನೆ ಹೊರಡಿಸಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರ, ಲೋಡಿಂಗ್ ಅನ್ ಲೋಡಿಂಗ್ (ಹಮಾಲಿ) ಸೇರಿದಂತೆ ತುಂಡು ಕೆಲಸ (ಪೀಸ್ ವರ್ಕ್) ಸ್ವರೂಪದ ಶ್ರಮಿಕ ಪ್ರಾಧಾನ್ಯ ಉದ್ದಿಮೆಗಳಿಗೆ ಪರಿಷ್ಕರಣೆ ಮಾಡಲಾಗುವುದೆಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಅದಕ್ಕೆ ಯಾವುದೇ ಕಾಲಮಿತಿ ನಿಗದಿ ಮಾಡಿಲ್ಲ. ಕೂಡಲೇ ಈ ಕಾರ್ಮಿಕರಿಗೂ ಪರಿಷ್ಕೃತ ಕನಿಷ್ಠ ವೇತನ ನಿಗದಿಮಾಡಬೇಕು ಹಾಗೂ ಅಂಗನವಾಡಿ, ಬಿಸಿಯೂಟ, ಆಶಾ ಮುಂತಾದ ಸ್ಕೀಂ ನೌಕರರನ್ನು ಕನಿಷ್ಠ ವೇತನ ವ್ಯಾಪ್ತಿಗೆ ತರಬೇಕೆಂದು ಆಗ್ರಹಿಸಿದರು.ಸಿಐಟಿಯು ಜಿಲ್ಲಾ ಸಂಚಾಲಕ ಅಂದಾನೆಪ್ಪ ಹೆಬಸೂರು ಮಾತನಾಡಿ, ರಾಜ್ಯ ಸರ್ಕಾರ ಕನಿಷ್ಠ ವೇತನದ ಕರಡು ಅಧಿಸೂಚನೆ ಹೊರಡಿಸಿದ ದಿನಾಂಕದಿಂದಲೇ ಪೂರ್ವಾನ್ವಯಿಸಿ ಕನಿಷ್ಠ ವೇತನ ಜಾರಿಗೆ ತರಬೇಕು. ಒಂದು ವರ್ಷದ ಅರಿಯರ್ಸ್ ಕಾರ್ಮಿಕರಿಗೆ ನೀಡಬೇಕು. ಮಾಲೀಕರ ಯಾವುದೇ ಒತ್ತಡಕ್ಕೆ ಮಣಿಯದೆ ಈ ಪರಿಷ್ಕೃತ ಕನಿಷ್ಠ ವೇತನದ ಆದೇಶವನ್ನು ಸರ್ಕಾರ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು. ಫಕ್ಕಿರೇಶ ಹಕ್ಕಿಮರೆಣ್ಣನವರ, ಮಂಜು ರಟ್ಟಿಹಳ್ಳಿ, ಆಂಜನೇಯ ನಾಗಣ್ಣನವರ, ಕಟ್ಟಡ ಕಾರ್ಮಿಕ ಸಂಘಟನೆ ಮುಖಂಡರಾದ ಚನ್ನವೀರಯ್ಯ ಹಿರೇಮಠ, ರಿಯಾಜ್ ಅಹಮದ್ ಮರಫಾಜಿ, ರಿಯಾಜ್ ಕೋಟೇನವರ, ಸಾಬೀರ ಕಡಕೋಳ, ಸ್ವಚ್ಛವಾಹಿನಿ ಕಾರ್ಮಿಕ ಮುಖಂಡರಾದ ಗಾಯತ್ರಿ ಬಲ್ಮುರಿ, ಮಮತಾ ಆನವಟ್ಟಿ, ಲತಾ ಯಲಗಚ್ಚ, ದೀಪಾ ಶಿರಗಂಬಿ, ಶೋಭಾ ಬೂದಗಟ್ಟಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.