ಬಳ್ಳಾರಿ: ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ₹2.62 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ಹಸ್ತಾಂತರಿಸಲಾಗಿದೆ ಎಂದು ಬಳ್ಳಾರಿ ವಲಯ ಐಜಿಪಿ ಡಾ.ಹರ್ಷಾ ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ 2025ರ ಅ.1ರಿಂದ 2026ರ ಮೇ 27ರವರೆಗೆ ಪೊಲೀಸ್ ಠಾಣೆಗಳಲ್ಲಿ 294 ಕಳ್ಳತನ ಪ್ರಕರಣ ದಾಖಲಾಗಿದೆ. ಒಟ್ಟು ₹5,80,73,923 ಮೌಲ್ಯದ ಸ್ವತ್ತು ಕಳುವಾಗಿದೆ. ಪ್ರಕರಣಗಳನ್ನು ಬೇಧಿಸಲು ಎರಡು ತಿಂಗಳಿಂದ ವಿಶೇಷ ಕಾಳಜಿ ವಹಿಸಿ ತನಿಖೆಗಾಗಿ ತಂಡಗಳನ್ನು ರಚಿಸಿ ವ್ಯಾಪಕವಾಗಿ ಕಾರ್ಯಾಚರಣೆ ನಡೆಸಲಾಗಿದೆ. ಇದರ ಫಲವಾಗಿ ಈ ಪೈಕಿ 66 ಪ್ರಕರಣಗಳನ್ನು ಪತ್ತೆ ಹಚ್ಚಿದ್ದು ಇದರಲ್ಲಿ ನಗದು ಹಣ, ಚಿನ್ನ, ಬೆಳ್ಳಿ, ಬೈಕ್, ಬ್ಯಾಟರಿ ಸೇರಿ ನಾನಾ ಸ್ವತ್ತಿನ ಒಟ್ಟು ₹2,62,45,351 ಮಾಲು ವಶಪಡಿಸಿಕೊಂಡು ಶೇ.45ರಷ್ಟು ಪ್ರಕರಣಗಳನ್ನು ಬೇಧಿಸಲಾಗಿದೆ. ಇದರಲ್ಲಿ ಚೀಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕೆಲವರು ಹವ್ಯಾಸವಾಗಿಸಿಕೊಂಡು ನಾನಾ ಸ್ಕೀಂಗಳ ಮೂಲಕ ಜನತೆಗೆ ಕೋಟ್ಯಂತರ ರುಪಾಯಿ ವಂಚಿಸಿದ್ದು, ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಂದೇ ಪ್ರಕರಣದಲ್ಲಿ ₹1.45ಕೋಟಿ ಸ್ವತ್ತು ವಶಕ್ಕೆ ಪಡೆದಿರುವುದು ವಿಶೇಷವಾಗಿದೆ.
ಈ ಸ್ವತ್ತಿನ ಕವಾಯತನ್ನು ನಡೆಸಿ ಫಿರ್ಯಾದಿದಾರರಿಗೆ, ವಾರಸುದಾರರಿಗೆ ವಿತರಿಸಲಾಗಿದೆ ಎಂದರು.ಹಗಲು ಕಳ್ಳತನಕ್ಕೆ ಸಂಬಂಧಿಸಿದಂತೆ 13 ಪ್ರಕರಣ ದಾಖಲಾಗಿದ್ದು, 4 ಪ್ರಕರಣ ಪತ್ತೆಯಾಗಿದೆ. ₹28,54,600 ಸ್ವತ್ತು ಕಳುವಾಗಿದೆ. ಇದರಲ್ಲಿ ₹4,68,301 ವಶಪಡಿಸಿಕೊಂಡಿದೆ. ರಾತ್ರಿ ಕಳ್ಳತನಕ್ಕೆ ಸಂಬಂಧಿಸಿದಂತೆ 57 ಪ್ರಕರಣದಲ್ಲಿ 1,31,17,400 ಕಳುವಾಗಿದ್ದು, ಇದರಲ್ಲಿ7 ಪತ್ತೆಯಾಗಿದ್ದು ₹13,43,600. ಮನೆ ಕಳ್ಳತನ 16 ಪ್ರಕರಣ ದಾಖಲಾಗಿದ್ದು, 3 ಪ್ರಕರಣದಲ್ಲಿ ಪತ್ತೆ ಹಚ್ಚಲಾಗಿದೆ. ₹13,97,500 ವಶಪಡಿಸಿಕೊಂಡಿದೆ. ಸಾಮಾನ್ಯ ಕಳ್ಳತನ 189 ದಾಖಲಾಗಿದ್ದು, ₹3,31,39,523 ಕಳುವಾಗಿದೆ. 51 ಪ್ರಕರಣ ಪತ್ತೆ ಹಚ್ಚಿ ₹2,30,35,950 ವಶಪಡಿಸಿಕೊಂಡಿದೆ. ಇದನ್ನು ಹೊರತುಪಡಿಸಿ ಡಕಾಯಿತಿ ಸಂಬಂಧಿಸಿದಂತೆ 1 ಪ್ರಕರಣದಲ್ಲಿ ₹31500, ರಾಬರಿ 7 ಪ್ರಕರಣದಲ್ಲಿ ₹4,60,000, ಚೈನ್ ಸ್ನ್ಯಾಚಿಂಗ್ 4 ಪ್ರಕರಣದಲ್ಲಿ ₹16 ಲಕ್ಷ ಮೌಲ್ಯದ ಸ್ವತ್ತು ಕಳ್ಳತನವಾಗಿದೆ. ಜಾನುವಾರು ಕಳ್ಳತನ 7 ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪ್ರಕರಣಗಳ ತನಿಖೆ ಕೈಗೊಂಡಿದೆ ಎಂದು ತಿಳಿಸಿದರು.
ಜೂನ್ 1ರಿಂದ ಹೆಲ್ಮೆಟ್ ಕಡ್ಡಾಯ ಖಚಿತ: