ಶಾಸಕ ನಾಗೇಂದ್ರಗೆ ಮತ್ತೆ ಮಂತ್ರಿಯಾಗುವ ಯೋಗ?

KannadaprabhaNewsNetwork |  
Published : May 31, 2026, 02:15 AM IST
ಬಿ.ನಾಗೇಂದ್ರ, ಬಳ್ಳಾರಿ ಗ್ರಾಮೀಣ ಶಾಸಕ.  | Kannada Prabha

ಸಾರಾಂಶ

2023ರ ವಿಧಾನಸಭಾ ಚುನಾವಣೆಯಲ್ಲಿ ಗಣಿಜಿಲ್ಲೆ ಬಳ್ಳಾರಿಯ ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಶಾಸಕರು ಗೆಲುವು ದಾಖಲಿಸಿದ್ದಾರೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ನೂತನ ಸಂಪುಟದಲ್ಲಿ ಸಚಿವ ಸ್ಥಾನಕ್ಕೆ ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಹೆಸರು ಸೂಚಿಸಿದ್ದರಿಂದ ನಾಗೇಂದ್ರ ಸಂಪುಟದಲ್ಲಿ ಸ್ಥಾನ ಪಡೆಯುವುದು ಖಚಿತ ಎನ್ನಲಾಗಿದೆ.

ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಸೇರುವ ಪಟ್ಟಿ ಸಿದ್ದಗೊಳ್ಳುತ್ತಿದ್ದು, ಅದರಲ್ಲಿ ನಾಗೇಂದ್ರ ಅವರ ಹೆಸರು ಕೇಳಿ ಬರುತ್ತಿದ್ದು, ಪಕ್ಷದ ಕಾರ್ಯಕರ್ತರು, ಬೆಂಬಲಿಗರಲ್ಲಿ ಹುಮ್ಮಸ್ಸು ಮೂಡಿಸಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಗಣಿಜಿಲ್ಲೆ ಬಳ್ಳಾರಿಯ ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಶಾಸಕರು ಗೆಲುವು ದಾಖಲಿಸಿದ್ದಾರೆ. ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದ ಬಿ.ನಾಗೇಂದ್ರ ವಾಲ್ಮೀಕಿ ಸಮುದಾಯದ ಮತ್ತೊಬ್ಬ ವರ್ಚಸ್ಸಿನ ನಾಯಕ ಬಿ.ಶ್ರೀರಾಮುಲು ವಿರುದ್ಧ ಗೆಲುವು ದಾಖಲಿಸಿದರು. ಇದು ಬಿ.ನಾಗೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲು ರಹದಾರಿ ಮಾಡಿಕೊಟ್ಟಿತು. ಆದರೆ, ಸಚಿವರಾಗಿ ಕೆಲವೇ ತಿಂಗಳಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಗ್ರಾಮೀಣ ಶಾಸಕರ ಹೆಸರು ಮುನ್ನೆಲೆಗೆ ಬಂದು ಸಚಿವ ಸ್ಥಾನ ಕಳೆದುಕೊಳ್ಳುವಂತಾಯಿತು. ನಾಗೇಂದ್ರ ಮಂತ್ರಿ ಸ್ಥಾನ ಕಳೆದುಕೊಳ್ಳುತ್ತಿದ್ದಂತೆಯೇ ಜಿಲ್ಲೆಗೆ ಕಾಯಂ ಸಚಿವರ ನೇಮಕವಾಗಲಿಲ್ಲ. ವಿಜಯನಗರ ಜಿಲ್ಲಾ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನೇ ಬಳ್ಳಾರಿ ಉಸ್ತುವಾರಿಯನ್ನಾಗಿ ನೋಡಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚಿಸಿದರು. ಆದರೆ, ಜಮೀರ್ ಅಹ್ಮದ್ ಖಾನ್ ಬಳ್ಳಾರಿಯಿಂದ ದೂರವೇ ಉಳಿದು ವಿಜಯನಗರ ಜಿಲ್ಲೆಗಷ್ಟೇ ಸೀಮಿತಗೊಂಡರು. ಹೀಗಾಗಿ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಯಿತು.

ನಾಗೇಂದ್ರ ಹೆಸರು ಸೂಚನೆ:

ಜಿಲ್ಲೆಯ ಕೆಲ ಶಾಸಕರು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಲಾಬಿ ನಡೆಸಿದರೂ ನಾಗೇಂದ್ರಗೆ ಆದ್ಯತೆಯಾಗಿ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಈಚೆಗಷ್ಟೇ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ನಾಗೇಂದ್ರ ಸಚಿವರಾಗಬೇಕು ಎಂಬುದು ಜಿಲ್ಲೆಯ ಎಲ್ಲ ಶಾಸಕರ ಒತ್ತಾಸೆ. ಈ ಹಿಂದಿನಿಂದಲೂ ನಾಗೇಂದ್ರಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದಾರೆ ಎಂದಿದ್ದರು.

ಜಿಲ್ಲೆಯ ಎಲ್ಲ ಶಾಸಕರು, ಮುಖಂಡರು, ಕಾರ್ಯಕರ್ತರು, ಸಮುದಾಯಗಳನ್ನು ವಿಶ್ವಾಸದಿಂದ ತೆಗೆದುಕೊಂಡು ಹೋಗುವ ನಾಗೇಂದ್ರಗೆ ಸಚಿವ ಸ್ಥಾನ ನೀಡಬೇಕು ಎಂಬುದು ಜಿಲ್ಲೆಯ ಜನರ ಒತ್ತಾಸೆಯಾಗಿದೆ. ನಾಗೇಂದ್ರ ಮತ್ತೆ ಮಂತ್ರಿಯಾಗುವುದರಿಂದ ಜಿಲ್ಲೆಯ ಕಾಂಗ್ರೆಸ್ ನಾಯಕತ್ವಕ್ಕೆ ಮತ್ತಷ್ಟು ಬಲ ಬರಲಿದೆ ಎನ್ನುತ್ತಾರೆ ಹಿರಿಯ ಕಾಂಗ್ರೆಸ್ ಮುಖಂಡ ಬೆಣಕಲ್ ಬಸವರಾಜಗೌಡ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಳ್ಳತನ ಕೇಸು ಬೇಧಿಸಿದ ಜಿಲ್ಲಾ ಪೊಲೀಸರು; ₹2.62 ಕೋಟಿ ಮೌಲ್ಯದ ಸ್ವತ್ತು ಮಾಲೀಕರಿಗೆ ಹಸ್ತಾಂತರ
ಗೋವುಗಳ ಹತ್ಯೆ; ಹಿಂದೂ, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ