ಸಂಡೂರು: ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು. ಅವರ ತತ್ವಗಳು ಹಾಗೂ ಆದರ್ಶ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸುವುದು ಉತ್ತಮ ಸಮಾಜ ನಿರ್ಮಾಣಕ್ಕೆ ಅಗತ್ಯವಾಗಿದೆ ಎಂದು ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ವೀರಶೈವ ಲಿಂಗಾಯತ ಸಮಾಜ, ವೀರಶೈವ ಕಲ್ಯಾಣ ಮಂಪಟ ಸಮಿತಿ, ಶ್ರೀಪೇಟೆ ಬಸವೇಶ್ವರ ಭಜನಾ ಮಂಡಳಿ, ಅಕ್ಕನ ಬಳಗ,ಬಸವ ಬಳಗ ಹಾಗೂ ವಿನಾಯಕ ತರುಣ ಸಂಘದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಂತರ ಸುಮಾರು ೫೦ಕ್ಕೂ ಹೆಚ್ಚು ಜತೆ ಎತ್ತುಗಳು,ಸಮೇಳ,ನಂದಿಕೋಲು,ಕೋಲಾಟ ಮುಂತಾದ ಕಲಾ ತಂಡಗಳೊಂದಿಗೆ ಶ್ರೀಬಸವೇಶ್ವರರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಜಯಂತಿ ಅಂಗವಾಗಿ ಪಟ್ಟಣದ ಶ್ರೀವೀರಶೈವ ಕಲ್ಯಾಣ ಮಂಟಪದಲ್ಲಿ ವೀರಶೈವ ಸಮಾಜ ಹಾಗೂ ಹೊಸಪೇಟೆಯ ನವ ಕರ್ನಾಟಕ ಬ್ಲಡ್ ಸೆಂಟರ್ ಸಹಯೋಗದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಹಲವು ಯುವಕರು ರಕ್ತದಾನ ಮಾಡಿದರು.ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎತ್ತುಗಳನ್ನು ಹೂ,ಗೆಜ್ಜೆ, ಬಲೂನುಗಳಿಂದ ಅಲಂಕರಿಸಲಾಗಿತ್ತು. ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಜೋಡೆತ್ತುಗಳಿಗೆ ಪ್ರೋತ್ಸಾಹ ಸೇವೆ ನಾಗಪ್ಪನವರು ವಹಿಸಿಕೊಂಡಿದ್ದರೆ, ಅವುಗಳಿಗೆ ಹಾರ, ಶಾಲು ಸೇವೆ ಬಸವರಾಜ ಬಂಡ್ರಿಯವರು ಹಾಗೂ ಪ್ರಸಾದ ಸೇವೆ ಗಡಂಬ್ಲಿ ಮನೆತನದವರು ವಹಿಸಿಕೊಂಡಿದ್ದರು.
ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಹುಸೇನ್, ಉಪಾಧ್ಯಕ್ಷೆ ಎಂ.ಸಿ.ಲತಾ, ಬಿ.ನಾಗನಗೌಡ, ಬಿ.ರುದ್ರಗೌಡ, ಬಿ.ಕೆ. ಬಸವರಾಜ, ಬಪ್ಪಕಾನ್ ಕುಮಾರಸ್ವಾಮಿ, ಹಗರಿ ಬಸಸವರಾಜಪ್ಪ, ಮೇಲುಸೀಮೆ ಶಂಕ್ರಪ್ಪ, ಗಡಂಬ್ಲಿ ಚನ್ನಪ್ಪ, ಗುಡೆಕೋಟೆ ನಾಗರಾಜ, ಚೋರುನೂರಿನ ಮಂಜುನಾಥ ಹಿರೇಮಠ್, ತಾತಪ್ಪ, ಜ್ಯೋತಿ ಗುಡೆಕೋಟೆ ನಾಗರಾಜ, ಗೋನಾಳ್ ನಿರ್ಮಲಾ, ಎ.ಎಂ. ಶರಣಯ್ಯ, ಜೆ.ಎಂ.ಶಿವಪ್ರಸಾದ್, ಜೆ.ಶಿವಪ್ರಕಾಶ್, ಎಂ.ವಿ.ಹಿರೇಮಠ್, ಭುವನೇಶ್ ಮೇಟಿ, ಹಟ್ಟಿ ಕುಮಾರಸ್ವಾಮಿ, ಅಂಕಮನಾಳ್ ಕೊಟ್ರೇಶ್, ಶಿವಲೀಲಾ ವೀರೇಶ್ ಮುಂತಾದವರು ಉಪಸ್ಥಿತರಿದ್ದರು.