ಧಾರವಾಡ: ಸರ್ಕಾರ ಸಮಾನ ಶಿಕ್ಷಣ ನೀತಿ ಜಾರಿಗೊಳಿಸಬೇಕು. ರಾಜ್ಯದ ಸರ್ಕಾರಿ ಶಾಲೆಗೆ ಮೂಲಭೂತ ಸೌಕರ್ಯಗಳು ಕಲ್ಪಿಸಿ, ಶಿಕ್ಷಣ ಗ್ಯಾರಂಟಿ ಪಟ್ಟಿಗೆ ಸೇರ್ಪಡಿಸುವಂತೆ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಒತ್ತಾಯ ಮಾಡಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಭವನದಲ್ಲಿ ಶನಿವಾರ ಧರೆಗೆ ದೊಡ್ಡವರು ಸಮಾರೋಪ ಹಾಗೂ ವಾಗ್ಭೂಷಣ ಪತ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸುವ ಮೂಲಕ ಅವರು ಮಾತನಾಡಿದರು.ಪ್ರಸ್ತುತ ಶಿಕ್ಷಣ ಕ್ಷೇತ್ರ ಬಹಳಷ್ಟು ಹದಗೆಟ್ಟಿದೆ. ಗೊಂದಲಗಳ ಗೂಡಾಗಿದೆ. ಇದು ಶೈಕ್ಷಣಿಕ ಅಸಮಾನತೆ ಕಾರಣವಾಗಿದೆ. ಸರ್ಕಾರ ಕೆಲಸಕ್ಕೆ ಬಾರದ ಗ್ಯಾರಂಟಿ ಯೋಜನೆ ಜಾರಿ ಬದಲು, ಸಮಾನ ಶಿಕ್ಷಣ ಗ್ಯಾರಂಟಿ ನೀತಿ ಜಾರಿಗೊಳಿಸಲು ಒತ್ತಾಯಿಸಿದರು.
ತಂತ್ರಜ್ಞಾನದ ಭರಾಟೆಯಲ್ಲಿ ತತ್ವಜ್ಞಾನ ಮರೆಯುವುದು ವಿಷಾದ. ದೇಶದಲ್ಲಿ ಶೇ.೬೦ರಷ್ಟು ಮಕ್ಕಳು ತಂತ್ರಜ್ಞಾನ ಅಭ್ಯಾಸ ಮಾಡುತ್ತಾರೆ. ಇದರಿಂದ ಸಾಹಿತ್ಯ ಹಾಗೂ ಮಾನವಿಕ ವಿಜ್ಞಾನ ಅಧ್ಯಯನ ಓದುಗರ ಸಂಖ್ಯೆಯೂ ಕ್ಷಣಿಸಿದ್ದಾಗಿ ಬೇಸರಿಸಿದರು.ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಇರದಿದ್ದರೂ, ತಂತ್ರಜ್ಞಾನ ಪೂರೈಕೆ ಉದ್ಯೋಗವಾಗಿ ಮಾರ್ಪಟ್ಟಿದೆ. ಈ ತಂತ್ರಜ್ಞಾನ ಗುರು-ಶಿಷ್ಯರ ಸಂಬಂಧವನ್ನೂ ಕೂಡ ದೂರ ಮಾಡಿದೆ. ಈ ತಂತ್ರಜ್ಞಾನ ಹಿತಮಿತ ಬಳಸುವಂತೆ ಸಲಹೆ ನೀಡಿದರು.
ಭಾರತದಲ್ಲಿ ಯಾವ ಹಂತದಲ್ಲಿ ಜ್ಞಾನ ಮತ್ತು ಯಾವ ಹಂತದಲ್ಲಿ ಉದ್ಯೋಗ ಕೊಡಬೇಕು ಎಂಬುವ ಬಗ್ಗೆ ಸ್ಪಷ್ಟತೆಯೇ ಇಲ್ಲ. ಇದುವೇ ಶಿಕ್ಷಣ ಹದಗೆಡಲು ಕಾರಣ. ಹೀಗಾಗಿ, ಶಾಲಾ ಸಮಾನತೆ ಶಿಕ್ಷಣ ಜಾರಿಗೆ ತರುವುದು ಅಗತ್ಯವಿದೆ ಎಂದರು.ಡಾ. ಬರಗೂರು ರಾಮಚಂದ್ರಪ್ಪ ಬದುಕಿನ ಕುರಿತು ಡಾ. ವೈ.ಬಿ. ಹಿಮ್ಮಡಿ ಹಾಗೂ ಕೊಡುಗೆ ಕುರಿತು ಡಾ. ದಸ್ತಗೀರಸಾಬ್ ದಿನ್ನಿ ಬೆಳಕು ಚೆಲ್ಲಿದರು. ಉಪಾಧ್ಯಕ್ಷೆ ಪ್ರೊ. ಮಾಲತಿ, ಶಂಕರ ಹಲಗತ್ತಿ, ಶಂಕರ ಕುಂಬಿ, ಎಂ.ಡಿ.ಒಕ್ಕುಂದ ಅನೇಕರು ಇದ್ದರು.