ಸರ್ಕಾರದ ಯೋಜನೆ ಸಮರ್ಪಕವಾಗಿ ಅನುಷ್ಠಾನ ಮಾಡಿ: ಝಡ್.ಎಂ. ಖಾಜಿ

KannadaprabhaNewsNetwork |  
Published : Feb 8, 2024 1:33 AM IST
ಚಿತ್ರ5ಜಿಟಿಎಲ್2ಗುತ್ತಲ ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ಯೋಜನೆಯಲ್ಲಿ ಅಡುಗೆ ಸಿಬ್ಬಂದಿಯವರ ಕಾರ್ಯಾಗಾರ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಝಡ್.ಎಮ್ ಖಾಜಿ, ಎನ್ ತಿಮ್ಮರಡ್ಡಿ, ಮೌನೇಶ ಬಡಿಗೇರ ಸೇರಿದಂತೆ ಅನೇಕರಿದ್ದರು.ಚಿತ್ರ5ಜಿಟಿಎಲ್2ಎ ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ಯೋಜನೆಯಲ್ಲಿ ಅಡುಗೆ ಸಿಬ್ಬಂದಿಯವರ ಕಾರ್ಯಾಗಾರದಲ್ಲಿ ಅಡುಗೆ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಸರ್ಕಾರಿ, ಅನುದಾನಿತ ಶಾಲೆಗಳ ಅಡುಗೆ ತಯಾರಕರು ಪ್ರೀತಿ, ವಿಶ್ವಾಸ, ಕರುಣೆ, ಮಮತೆಯಿಂದ ಶುಚಿಯಾಗಿ ಅಡುಗೆ ಮಾಡಿ ಬಡಿಸಿದಾಗ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ.

ಕನ್ನಡಪ್ರಭ ವಾರ್ತೆ ಗುತ್ತಲ

ಸರ್ಕಾರಿ, ಅನುದಾನಿತ ಶಾಲೆಗಳ ಅಡುಗೆ ತಯಾರಕರು ಪ್ರೀತಿ, ವಿಶ್ವಾಸ, ಕರುಣೆ, ಮಮತೆಯಿಂದ ಶುಚಿಯಾಗಿ ಅಡುಗೆ ಮಾಡಿ ಬಡಿಸಿದಾಗ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಝಡ್.ಎಂ. ಖಾಜಿ ಹೇಳಿದರು.

ಪಟ್ಟಣದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ಯೋಜನೆಯಲ್ಲಿ ಅಡುಗೆ ಸಿಬ್ಬಂದಿಗೆ ಕಾರ್ಯಾಗಾರ, ಅಡುಗೆ ಸಿಬ್ಬಂದಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎನ್. ತಿಮ್ಮರಡ್ಡಿ ಮಾತನಾಡಿ, ಹಾವೇರಿ ಪೂರ್ವ ಭಾಗದ ಶಾಲೆಗಳಲ್ಲಿ ಅಡುಗೆ ತಯಾರಕರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳನ್ನು ಕುಳ್ಳಿರಿಸಿ, ಸ್ವಚ್ಛತೆಯಿಂದ, ಸರ್ಕಾರದ ಆಹಾರ ಪದ್ಧತಿ ಪ್ರಕಾರ ಅಡುಗೆ ತಯಾರಿಸಿ ವಿತರಿಸಬೇಕು ಹಾಗೂ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಾದ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ, ಕ್ಷೀರಭಾಗ್ಯ ಸಮರ್ಪಕವಾಗಿ ಅನುಷ್ಠಾನ ಮಾಡುವಂತೆ ಕಿವಿಮಾತು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಮಾತನಾಡಿ, ತಾಯಂದಿರು ಶಾಲೆಗಳಲ್ಲಿನ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳಬೇಕು. ಶಾಲೆಗಳಲ್ಲಿ ದವಸ ಧಾನ್ಯಗಳು, ತರಕಾರಿಗಳನ್ನು ಸ್ವಚ್ಛತೆಯಿಂದ ಬಳಸಬೇಕು. ಅಡುಗೆಯವರು ಅಡುಗೆ ತಯಾರಿಸುವಾಗ ಏಪ್ರಾನ್, ತಲೆಗವಚ, ಕೈ ಕವಚ ಧರಿಸಿ, ಬಳೆಗಳನ್ನು ಬಿಗಿಯಾಗಿ ಕಟ್ಟಿಕೊಂಡು ಅಡುಗೆ ತಯಾರಿಸುವಂತೆ ಸೂಚಿಸಿದರು.

ಅಡುಗೆ ತಯಾರಿಸುವ ಸ್ಪರ್ಧೆಯಲ್ಲಿ ಕ್ಲಸ್ಟರ್‌ವಾರು ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದು ವಿಜೇತರಿಗೆ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು.

ರಾಜ್ಯ ಮಾಹಿತಿ ಸಂಪನ್ಮೂಲ ವ್ಯಕ್ತಿ ಎ.ಎಂ. ವಾಗೀಶ, ಡಾ. ಚಂದ್ರು ಓಂಕಾರಗೌಡ ಪಾಟೀಲ ಅಡುಗೆ ತಯಾರಕರ ಕುಂದುಕೊರತೆಗಳ ಬಗ್ಗೆ ಹಾಗೂ ಅಡುಗೆ ಕೋಣೆ ಹಾಗೂ ವೈಯಕ್ತಿಕ ಶುಚಿತ್ವದ ಬಗ್ಗೆ ಮಾಹಿತಿ ನೀಡಿದರು. ಕೆ.ಜಿ. ಗುಡಿಮನಿ ಅಡುಗೆದಾರರ ಜವಾಬ್ದಾರಿ ಕುರಿತು ಅನೇಕ ಮೌಲ್ಯಯುತ ಚಟುವಟಿಕೆಗಳನ್ನು ಮಾಡಿಸಿದರು.

ಕಾರ್ಯಕ್ರಮದಲ್ಲಿ ಬಸವರಾಜ ದೇವರಮನಿ, ವಿನಾಯಕ ಕುರುಬರ, ಸತೀಶ ಶಂಕಿನದಾಸರ, ಸಿ.ಸಿ. ಕನವಳ್ಳಿ, ಬಸವರಾಜ ತಳವಾರ, ಸಿಆರ್‌ಪಿಗಳಾದ ರಾಜು ಬಜ್ಜಿ, ಮಂಜುನಾಥ ಯಾಲಕ್ಕಿ, ಅಗ್ನಿಶಾಮಕ ದಳದ ಅಧಿಕಾರಿ ಬಂಗಾರಪ್ಪ, ದಾನೇಶ್ವರಿ ಗ್ಯಾಸ್ ಏಜೆನ್ಸಿಯ ಅಪ್ಪಣ್ಣ ಹರಿಹರ, ವ್ಹಿ.ಟಿ. ಸುಣಗಾರ ಸೇರಿದಂತೆ ಅನೇಕರಿದ್ದರು.

ಶಿಕ್ಷಕರಾದ ಮೌನೇಶ ಕರಿಯಮ್ಮನವರ ಸ್ವಾಗತಿ, ಹೊನ್ನಪ್ಪ ಮಣಕೂರ ಪ್ರಾರ್ಥಿಸಿದರು. ಮಾರುತಿ ಕೋಡಬಾಳ ನಿರೂಪಿಸಿ, ಮಂಜುನಾಥ ಹೆಗ್ಗೇರಿ ವಂದಿಸಿದರು.

PREV