ಹಾವೇರಿ: ಜಿಲ್ಲೆಯಲ್ಲಿ ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ ಹಾಗೂ ಯುವ ನಿಧಿ ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸುವ ನಿಟ್ಟಿನಲ್ಲಿ, ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಹಿರೇಮಠ ಸೂಚನೆ ನೀಡಿದರು.
ಗೃಹಜ್ಯೋತಿ ಯೋಜನೆಯಡಿ ಸೌಲಭ್ಯವನ್ನು ಎಲ್ಲ ಅರ್ಹ ಗ್ರಾಹಕರಿಗೆ ಸಮರ್ಪಕವಾಗಿ ತಲುಪಿಸಬೇಕು. ಈ ನಿಟ್ಟಿನಲ್ಲಿ ಹೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿ ಸೂಕ್ತ ಕ್ರಮಕೈಗೊಳ್ಳಬೇಕು. ರೈತರ ಭೂಮಿಯಲ್ಲಿ ಕಂಬ ಅಳವಡಿಸುವ ಸಂದರ್ಭದಲ್ಲಿ ಬದುವಿನಲ್ಲಿ ಕಂಬ ಬರುವಂತೆ ಕ್ರಮ ವಹಿಸಬೇಕು ಎಂದರು.
ಗೃಹಲಕ್ಷ್ಮಿ ಯೋಜನೆಯಲ್ಲಿ ಅನುದಾನ ಬಿಡುಗಡೆಯಾದ ಆನಂತರ ಬಾಕಿ ಇರುವ ಫಲಾನುಭವಿಗಳಿಗೆ ಅನುದಾನ ಹಂಚಿಕೆ ಮಾಡಲು ಕ್ರಮ ವಹಿಸಬೇಕು. ಫಲಾನುಭವಿಗಳ ಸ್ಥಿತಿಗತಿ ಪರಿಶೀಲಿಸಬೇಕು. ಈ ಯೋಜನೆಯಿಂದ ಯಾವೊಬ್ಬ ಫಲಾನುಭವಿಯೂ ವಂಚಿತರಾಗಬಾರದು ಎಂದು ಸೂಚಿಸಿದರು.ಯುವನಿಧಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ, ನೋಂದಾಯಿಸಿದ ಫಲಾನುಭವಿಗಳಿಗೆ ನಿರುದ್ಯೋಗಿ ಭತ್ಯೆ ನೀಡಲು ಹಾಗೂ ಪದವೀದಾರರು, ಡಿಪ್ಲೊಮಾ ಮುಗಿಸಿದವರಿಗೆ/ಎಷ್ಟು ಅನುದಾನ ಮಂಜೂರಾಗಿದೆ? ಇನ್ನೂ ಎಷ್ಟು ಬಾಕಿ ಇದೆ? ಎಷ್ಟು ಉಳಿಕೆಯಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಅನುದಾನದ ಮಾಹಿತಿ ಸಲ್ಲಿಸಲು ಸೂಚನೆ ನೀಡಿದರು.
ಹೆಸ್ಕಾಂ ವಿಭಾಗ ಹಾವೇರಿ ಕಾರ್ಯನಿರ್ವಾಹಕ ಎಂಜಿನಿಯರ್ ಮಾತನಾಡಿ, ಆಗಸ್ಟ್ 2023ರಿಂದ ಮಾರ್ಚ್ 2025ರ ಅಂತ್ಯಕ್ಕೆ ಗೃಹಜ್ಯೋತಿ ಯೋಜನೆಯಡಿ ಹಾವೇರಿ ಮತ್ತು ರಾಣಿಬೆನ್ನೂರು ವೃತ್ತದ ವ್ಯಾಪ್ತಿಯಲ್ಲಿ ಒಟ್ಟು 41,4,586 ಗ್ರಾಹಕರು ಹೊಂದಿದ್ದು, 4,08,001 ಗೃಹಜ್ಯೋತಿ ಯೋಜನೆಗೆ ಅರ್ಹರಿರುವ ಸ್ಥಾವರಗಳಾಗಿದ್ದು, 4,00,769 ಗೃಹ ಬಳಕೆ ಮಾಡುತ್ತಿದ್ದಾರೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಲ್ಲಿ ಜನವರಿ ವರೆಗೆ 3,81,606 ಫಲಾನುಭವಿಗಳಿದ್ದಾರೆ. ಸಹಾಯಧನ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ. ಫೆಬ್ರುವರಿ ಮತ್ತು ಮಾರ್ಚ್ ತಿಂಗಳ ಬಾಕಿ ಅನುದಾನ ಬಿಡುಗಡೆಯಾದ ಮೇಲೆ ಉಳಿದ ಫಲಾನುಭವಿಗಳ ಮೊತ್ತ ಅವರ ಖಾತೆಗೆ ಜಮೆಯಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ, ಜಿಪಂ ಸಿಇಒ ರುಚಿ ಬಿಂದಲ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪದಾಧಿಕಾರಿಗಳು ಇದ್ದರು.